ADVERTISEMENT

ದ್ರಾವಿಡ್‌ ಮತ್ತು ತೆಂಡೂಲ್ಕರ್ ಶ್ರೇಷ್ಠತೆ ಕುರಿತ ಚರ್ಚೆ ಮುನ್ನೆಲೆಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 13:15 IST
Last Updated 25 ಜೂನ್ 2020, 13:15 IST
ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ –ಪ್ರಜಾವಾಣಿ ಚಿತ್ರ
ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ರಿಕೆಟ್ ಲೋಕದ ಇಬ್ಬರು ಧ್ರುವತಾರೆಯರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಗೋಡೆ ಖ್ಯಾತಿಯ ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಮತ್ತು ’ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್‌ ಪೈಕಿ ಯಾರು ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಎಂಬುದು ಚರ್ಚೆಯ ವಿಷಯ.

ಅಭಿಮಾನಿಗಳು ಅಥವಾ ಕಾಫಿ ಹೀರಿಕೊಂಡು ಕ್ರಿಕೆಟ್ ಬಗ್ಗೆ ಮಾತನಾಡುತ್ತ ಕುಳಿತುಕೊಳ್ಳುವವರಿಗೆ ಮಾತ್ರ ಸೀಮಿತವಾಗಿದ್ದ ಈ ಚರ್ಚೆ ಈಗ ಕ್ರಿಕೆಟ್‌ ವೆಬ್‌ಸೈಟೊಂದು ಮತಗಣನೆ ಮಾಡುವ ವರೆಗೂ ಮುಂದುವರಿದಿದೆ. ವಿಶೇಷವೆಂದರೆ, ‘ಸ್ಪರ್ಧೆ’ಯಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್ ಸಣ್ಣ ಅಂತರದಲ್ಲಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.

ಬೇರೆ ಬೇರೆ ಕಾಲಘಟ್ಟದ ಆಟಗಾರರನ್ನು ಹೋಲಿಕೆ ಮಾಡುವುದು ಸುಲಭ. ಆದರೆ ಒಂದೇ ಕಾಲದ ಇಬ್ಬರು ಆಟಗಾರರ ಶೈಲಿ ಮತ್ತು ಸಾಮರ್ಥ್ಯವನ್ನು ಹೋಲಿಸುವುದು ಕಷ್ಟವಲ್ಲವೇ? ತೆಂಡೂಲ್ಕರ್ ಮತ್ತು ಬ್ರಯಾನ್ ಲಾರಾ ನಡುವಿನ ಹೋಲಿಕೆ ಮುಗಿದು ಹೋದ ಕಥೆಯಾದರೆ, ಭಾರತದವರೇ ಆದ ಡ್ರಾವಿಡ್ –ತೆಂಡೂಲ್ಕರ್ ನಡುವಿನ ಹೋಲಿಕೆ ಭಾರಿ ಸಂಚಲನ ಸೃಷ್ಟಿಸಿತ್ತು; ಮುಂಬೈ–ಕರ್ನಾಟಕ ‘ಜೋಡಿ’ ಸುನಿಲ್ ಗಾವಸ್ಕರ್ ಮತ್ತು ಜಿ.ಆರ್‌.ವಿಶ್ವನಾಥ್ ನಡುವಿನ ಹೋಲಿಕೆಯಂತೆ.

ADVERTISEMENT

1996ರಲ್ಲಿ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ತೆಂಡೂಲ್ಕರ್ ಭಾರತದಲ್ಲಿ ಮನೆಮಾತಾಗಿದ್ದರು. ಆಗಲೇ ಅವರನ್ನು ಸರ್. ಡಾನ್ ಬ್ರಾಡ್ಮನ್ ಜೊತೆ ಹೋಲಿಸಲಾಗುತ್ತಿತ್ತು. ವಯಸ್ಸಿನಲ್ಲಿ ‘ಮುಂಬೈಕರ್‌’ಗಿಂತ ದ್ರಾವಿಡ್ ಮೂರೂವರೆ ತಿಂಗಳು ದೊಡ್ಡವರಾಗಿದ್ದರೂ ಕ್ರಿಕೆಟ್‌ನಲ್ಲಿ ಸಚಿನ್ ಅವರದು ದೊಡ್ಡ ಹೆಸಲಾಗಿತ್ತು. ಆದರೆ ಕ್ರಮೇಣ ಇವರಿಬ್ಬರು ಭಾರತ ಕ್ರಿಕೆಟ್‌ ದಿಗ್ಗಜರಾಗಿ ಬೆಳೆದರು. ಎದುರಾಳಿ ತಂಡಗಳ ಬೌಲರ್‌ಗಳನ್ನು ತಮ್ಮದೇ ಶೈಲಿಯಲ್ಲಿ ದಂಡಿಸಿ ಮೆರೆದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ರಾವಿಡ್ ಪ್ರಶ್ನಾತೀತರಾಗಿದ್ದರೂ ಏಕದಿನ ಮಾದರಿಯಲ್ಲಿ ಹೆಸರು ಮಾಡಲು ತುಂಬ ಸಮಯ ಬೇಕಾಯಿತು. 2000ನೇ ಇಸವಿ ವರೆಗೆ ತೆಂಡೂಲ್ಕರ್ ಅವರ ನೆರಳಿನಿಂದ ಹೊರಬರಲು ದ್ರಾವಿಡ್‌ಗೆ ಸಾಧ್ಯವಾಗಿರಲಿಲ್ಲ.

ಅಂಕಿ ಅಂಶಗಳಲ್ಲಿ ಮೇಲುಗೈ ಸಾಧಿಸಿದ ದ್ರಾವಿಡ್

2000ದಿಂದ 2011ರ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಗಳಿಸಿದ ಒಟ್ಟು ರನ್‌ಗಳ ಲೆಕ್ಕದಲ್ಲಿ ದ್ರಾವಿಡ್ ಯಾವ ವರ್ಷವೂ 600ಕ್ಕಿಂತ ಕೆಳಗೆ ಇಳಿಯಲಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ನಾಲ್ಕು ವರ್ಷ 550ಕ್ಕೂ ಕಡಿಮೆ ರನ್ ಗಳಿಸಿದ್ದಾರೆ. ಏಷ್ಯಾದ ಹೊರಗಂತೂ ದ್ರಾವಿಡ್ ಅಮೋಘ ಸಾಧನೆ ಮಾಡಿದ್ದಾರೆ.

‘ಹೊರಗಿನ’ ವಾತಾವರಣದಲ್ಲಿ ಹೇಗೆ ಆಡುತ್ತಾರೆ ಎಂಬುದೇ ಬ್ಯಾಟ್ಸ್‌ಮನ್ ಒಬ್ಬನ ಸಾಮರ್ಥ್ಯ ಅಳೆಯುವ ನಿಜವಾದ ಮಾನದಂಡ. ದ್ರಾವಿಡ್ ಈ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಏಷ್ಯಾದ ಹೊರಗೆ ಭಾರತ ಜಯ ಗಳಿಸಿದ 13 ಪಂದ್ಯಗಳಲ್ಲಿ ದ್ರಾವಿಡ್ ಅವರ ಸರಾಸರಿ ಪ್ರತಿ ಇನಿಂಗ್ಸ್‌ಗೆ 71.26 ಆಗಿದ್ದರೆ ತೆಂಡೂಲ್ಕರ್‌ ಅವರದು 58.07 ಆಗಿದೆ. ಒಟ್ಟಾರೆ ಭಾರತ ಜಯ ಗಳಿಸಿದ ಟೆಸ್ಟ್‌ಗಳಲ್ಲಿ ದ್ರಾವಿಡ್ ಪ್ರತಿ ಇನಿಂಗ್ಸ್‌ನಲ್ಲಿ 65.78 ಸರಾಸರಿ ಹೊಂದಿದ್ದು ತೆಂಡೂಲ್ಕರ್ ಸರಾಸರಿ 61.94. ದೇಶದ ಹೊರಗೆ ನಡೆದ ಟೆಸ್ಟ್ ಪಂದ್ಯಗಳನ್ನು ಹೋಲಿಸಿ ನೋಡಿದರೆ ದ್ರಾವಿಡ್ 94 ಪಂದ್ಯಗಳಲ್ಲಿ 53.03ರ ಸರಾಸರಿಯಲ್ಲಿ 7690 ರನ್ ಕಲೆ ಹಾಕಿದ್ದಾರೆ. ಸಚಿನ್ 106 ಪಂದ್ಯಗಳನ್ನು ಆಡಿದ್ದು 8,705 ರನ್ ಗಳಿಸಿದ್ದಾರೆ. ರನ್ ಗಳಿಕೆ ಸರಾಸರಿ 54.75.

17 ವರ್ಷ ತುಂಬುವ ಮೊದಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದು ಕಡಿಮೆ. ಆದರೆ ದ್ರಾವಿಡ್ ರಾಷ್ಟ್ರೀಯ ತಂಡ ಪ್ರವೇಶಿಸುವ ಮೊದಲು ರಣಜಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಕಲೆ ಹಾಕಿದ್ದರು.

ಇಷ್ಟೆಲ್ಲಾ ಲೆಕ್ಕಾಚಾರಗಳ ನಡುವೆ ಆಟಗಾರರಿಗೆ ಮತ ಹಾಕುವುದು ಕೆಲವರಿಗೆ ಮೋಜಿನ ವಿಷಯ ಆಗಿರಬಹುದು. ಆದರೆ ಒಂದೇ ಕಾಲದಲ್ಲಿ ದೇಶಕ್ಕಾಗಿ ಆಡಿದ ಇಬ್ಬರ ಸಾಮರ್ಥ್ಯ ಮತ್ತು ಕೌಶಲವನ್ನು ಕೇವಲ ಅಂಕಿ–ಸಂಖ್ಯೆಗಳ ಆಧಾರದಲ್ಲಿ ಲೆಕ್ಕ ಹಾಕಲು ಸಾಧ್ಯವೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.