
ನವೀ ಮುಂಬೈ: ನಾರಾಯಣ್ ಜಗದೀಶನ್ (104;55) ಅವರ ಅಮೋಘ ಶತಕದ ನೆರವಿನಿಂದ ಭಾರತ ಎ ತಂಡವು ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ತಂಡವನ್ನು 38 ರನ್‌ಗಳಿಂದ ಮಣಿಸಿತು.
ಹೊಟ್ಟೆಯ ಕೆಳಭಾಗದ ಶಸ್ತ್ರಚಿಕಿತ್ಸೆಯ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ತಿಲಕ್ ವರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿದು 24 ಎಸೆತಗಳಲ್ಲಿ 38 ರನ್ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿತ್ತು. ಈ ಮೂಲಕ ಎಡಗೈ ಬ್ಯಾಟರ್ ಫಿಟ್‌ನೆಸ್ ಸಾಬೀತು ಪಡಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಜಗದೀಶನ್ ಮತ್ತು ನಾಯಕ ಆಯುಷ್ ಬಡೋನಿ (ಔಟಾಗದೇ 60; 26ಎ) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 238 ರನ್ ಗಳಿಸಿತು. ಭಾರತದ ಇನಿಂಗ್ಸ್‌ನಲ್ಲಿ 13 ಸಿಕ್ಸರ್ ಮತ್ತು 23 ಬೌಂಡರಿಗಳು ದಾಖಲಾದವು. ಅಮೆರಿಕ ತಂಡದ ಒಂಬತ್ತು ಆಟಗಾರರು ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.
ಬೃಹತ್ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡವು ದಿಟ್ಟ ಪ್ರತಿಕ್ರಿಯೆ ನೀಡಿತು. 19.4 ಓವರ್‌ಗಳಲ್ಲಿ 200 ರನ್ ಗಳಿಸಿ ಹೋರಾಟ ಮುಗಿಸಿತು. ಆಂಡ್ರೀಸ್ ಗೌಸ್ 44 ಮತ್ತು ಸಂಜಯ್ ಕೃಷ್ಣಮೂರ್ತಿ 41 ರನ್ ಗಳಿಸಿದರು. ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಮೂರು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಎ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 238 (ಪ್ರಿಯಾಂಶ್ ಆರ್ಯ 28, ನಾರಾಯನ್ ಜಗದೀಶನ್ 104, ತಿಲಕ್ ವರ್ಮಾ 38, ಆಯುಷ್ ಬಡೋನಿ 60).
ಅಮೆರಿಕ: 19.4 ಓವರ್‌ಗಳಲ್ಲಿ 200 (ಆಂಡ್ರೀಸ್ ಗೌಸ್ 44, ಸಂಜಯ್ ಕೃಷ್ಣಮೂರ್ತಿ 41; ರವಿ ಬಿಷ್ಣೋಯಿ 37ಕ್ಕೆ 3, ನಮನ್ ಧೀರ್ 6ಕ್ಕೆ 2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.