ದುಬೈ: ಪ್ರತಿಭಾನ್ವಿತ ಆಟಗಾರ ತಿಲಕ್ ವರ್ಮಾ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ‘ಮಿಝರಿ’ ಸ್ಪಿನ್ನರ್ ವರುಣ್ ಚಕ್ರವರ್ತಿ 25 ಸ್ಥಾನಗಳಷ್ಟು ಬಡ್ತಿ ಪಡೆದು ಮೊದಲ ಸಲ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ
ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ (855 ರೇಟಿಂಗ್ ಪಾಯಿಂಟ್ಸ್) ಅವರು ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಎಡಗೈ ಆಟಗಾರ ವರ್ಮಾ (832) ಅವರು 23 ಪಾಯಿಂಟ್ಸ್ ಹಿಂದೆ ಇದ್ದಾರೆ. ಇಂಗ್ಲೆಂಡ್ ವಿರುದ್ಧ ಹಾಲಿ ಸರಣಿಯಲ್ಲಿ ಅವರು ಅಜೇಯ 10, ಅಜೇಯ 72 ಮತ್ತು 18 ರನ್ ಗಳಿಸಿದ್ದು ಉತ್ತಮ ಲಯದಲ್ಲಿದ್ದಾರೆ.
ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಉಳಿದಿದ್ದು ವರ್ಮಾ ಅವರಿಗೆ ಹೆಡ್ ಅವರನ್ನು ಹಿಂದೆಹಾಕಿ ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗುವ ಅವಕಾಶ ಇದೆ. 23 ವರ್ಷ 105 ದಿನಗಳಿದ್ದಾಗ ಅಗ್ರಸ್ಥಾನಕ್ಕೇರಿದ ಬಾಬರ್ ಆಜಂ ಅವರು ಈ ದಾಖಲೆ ಹೊಂದಿದ್ದಾರೆ.
ಮೂರನೇ ಪಂದ್ಯದಲ್ಲಿ 24 ರನ್ನಿಗೆ 5 ವಿಕೆಟ್ ಪಡೆದು ಪಂದ್ಯದ ಆಟಗಾರನಾಗಿದ್ದ ವರುಣ್ ಚಕ್ರವರ್ತಿ (679 ಪಾಯಿಂಟ್ಸ್) ಬೌಲರ್‌ಗಳ ವಿಭಾಗದಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಕ್ಷರ್ ಪಟೇಲ್ ಅವರೂ ಅಗ್ರ 10ರ ಬಳಿ ಧಾವಿಸಿದ್ದು 11ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್ (718 ಪಾಯಿಂಟ್ಸ್) ಅವರು ಅಗ್ರಸ್ಥಾನ ಮರಳಿ ಪಡೆದುಕೊಂಡಿದ್ದಾರೆ.
ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅವರು ಅಗ್ರಸ್ಥಾನದಲ್ಲೇ ಉಳಿದಿದ್ದಾರೆ. ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಅವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.