ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಗೋವಾ ತಂಡದ ವಿರುದ್ದ ಶತಕ ಗಳಿಸಿದ ಕರ್ನಾಟಕ ಸೆಕ್ರೆಟೆರೀಸ್ ತಂಡದ ಕರುಣ್ ನಾಯರ್
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್
ಆಲೂರು (ಬೆಂಗಳೂರು): ಮುಂದಿನ ತಿಂಗಳು ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಕಣಕ್ಕಿಳಿಯಲಿರುವ ಕರುಣ್ ನಾಯರ್ ಕ್ಯಾಪ್ಟನ್ ತಿಮ್ಮಪ್ಪಯ್ಯ ಟೂರ್ನಿಯ ಸೆಮಿಫೈನಲ್‌ನಲ್ಲಿ ಅಜೇಯ ಶತಕ ಬಾರಿಸಿದರು. ಅದರೊಂದಿಗೆ ಅವರು ತಮ್ಮ ಲಯಕ್ಕೆ ಮರಳಿದ್ದಾರೆ.
ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ಕಾರ್ಯದರ್ಶಿ ಇಲೆವನ್ ತಂಡವು 6 ವಿಕೆಟ್‌ಗಳಿಂದ ಜಯಿಸಲು ಕೂಡ ಕರುಣ್ (ಅಜೇಯ 151; 169ಎ, 4X12, 6X2) ಅವರ ಶತಕ ಕಾರಣವಾಯಿತು. ಅವರಿಗೆ ಪಿ.ಧ್ರುವ (ಅಜೇಯ 65; 102ಎ, 4X5) ಉತ್ತಮ ಜೊತೆ ನೀಡಿದರು.
ಪಂದ್ಯದ ಕೊನೆಯ ದಿನವಾದ ಬುಧವಾರ ಗೋವಾ ತಂಡವು ಕೆಎಸ್‌ಸಿಎಗೆ 265 ರನ್‌ಗಳ ಗುರಿಯೊಡ್ಡಿತು. ಆದರೆ ಆತಿಥೇಯ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಓವರ್‌ಗಳಲ್ಲಿ ರನ್ ಗಳಿಸಲೂ ಬ್ಯಾಟರ್‌ಗಳು ಪರದಾಡಿದರು. ಇದರಿಂದಾಗಿ 85 ರನ್‌ಗಳೀಗೆ 4 ವಿಕೆಟ್ ಪತನವಾದವು.ಅದರಲ್ಲಿ ನಾಯಕ ನಿಕಿನ್ ಜೋಸ್ (13 ರನ್), ಫೈಜನ್ ಖಾನ್ (19 ರನ್), ಲೋಚನ್ ಗೌಡ (13 ರನ್) ಮತ್ತು ಸಮಿತ್ ದ್ರಾವಿಡ್ (3 ರನ್) ಇದ್ದರು. ಗೋವಾ ತಂಡದ ದರ್ಶನ್ ಮಿಶಾಲ್ 3 ವಿಕೆಟ್ ಮತ್ತು ಮೋಹಿತ್ ರೇಡಕರ್ ಒಂದು ವಿಕೆಟ್ ಗಳಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅನುಭವಿ ಕರುಣ್ ಮತ್ತು ಧ್ರುವ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಗೋವಾ ಬೌಲರ್‌ಗಳು ಇವರಿಬ್ಬರ ಆಟಕ್ಕೆ ನಿರುತ್ತರರಾದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್:
ಗೋವಾ: 94.4 ಓವರ್‌ಗಳಲ್ಲಿ 338.
ಕರ್ನಾಟಕ: 97.1 ಓವರ್‌ಗಳಲ್ಲಿ 276.
ಎರಡನೇ ಇನಿಂಗ್ಸ್:
ಗೋವಾ: 89.2 ಓವರ್‌ಗಳಲ್ಲಿ 202.
ಕರ್ನಾಟಕ ಕಾರ್ಯದರ್ಶಿಗಳ ಇಲೆವನ್: 66.4 ಓವರ್‌ಗಳಲ್ಲಿ 4ಕ್ಕೆ266 (ಕರುಣ್ ನಾಯರ್ ಅಜೇಯ 151, ಪಿ. ಧ್ರುವ ಅಜೇಯ 65,ದರ್ಶನ್ ಮಿಶಾಲ್ 106ಕ್ಕೆ3)
ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿ ಇಲವೆನ್ ತಂಡಕ್ಕೆ 6 ವಿಕೆಟ್‌ಗಳ ಜಯ ಮತ್ತು ಫೈನಲ್‌ಗೆ ಅರ್ಹತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.