ADVERTISEMENT

ಐಪಿಎಲ್‌ 2021ಕ್ಕೆ ದಿನಗಣನೆ: ಇಲ್ಲಿವೆ ಕಳೆದ ಆವೃತ್ತಿಯ ಟಾಪ್ 5 ವಿವಾದಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2021, 7:46 IST
Last Updated 5 ಏಪ್ರಿಲ್ 2021, 7:46 IST
ಎಂ.ಎಸ್. ಧೋನಿ: ಪಿಟಿಐ ಚಿತ್ರ
ಎಂ.ಎಸ್. ಧೋನಿ: ಪಿಟಿಐ ಚಿತ್ರ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 2020ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುವ ಮೂಲಕ ಏಪ್ರಿಲ್ 9ರಿಂದ ಐಪಿಎಲ್ ಸರಣಿಗೆ ಚಾಲನೆ ಸಿಗಲಿದೆ. ಐಪಿಎಲ್ ಸರಣಿಯು ರೋಚಕ ಪಂದ್ಯಗಳ ಜೊತೆ ವಿವಾದಗಳಿಂದಲೂ ಸುದ್ದಿಯಾಗುತ್ತದೆ. ಕಳೆದ ವರ್ಷ ಸಹ ಅಂಥದ್ದೇ ಕೆಲ ವಿವಾದಗಳು ನಡೆದಿವೆ. ಅದರಲ್ಲಿ ಟಾಪ್ 5 ಇಲ್ಲಿವೆ.

1. ಧೋನಿ ಮತ್ತು ಅಂಪೈರ್ ವೈಡ್ ವಿವಾದ

ದುಬೈನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವೊಂದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 167 ರನ್ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಹೈದರಾಬಾದ್ ಗೆಲುವಿಗೆ ದಾಪುಗಾಲಿಡುತ್ತಿತ್ತು. 18ನೇ ಓವರ್ವೊಂದರಲ್ಲೇ 19 ರನ್‌ ಬಂದಿತ್ತು. ಉಳಿದೆರಡು ಓವರಿನಲ್ಲಿ ಹೈದರಾಬಾದ್ ಗೆಲುವಿಗೆ 27 ರನ್ ಅಗತ್ಯವಿತ್ತು. 19ನೇ ಓವರ್ ಬೌಲ್ ಮಾಡಿದ ಶಾರ್ದೂಲ್ ಠಾಕೂರ್ ಮೊದಲ ಎಸೆತದಲ್ಲಿ 2 ರನ್ ನೀಡಿದರು. ಎರಡನೇ ಎಸೆತ ವೈಡ್ ಆಯಿತು. ಮತ್ತೊಂದು ಎಸೆತವೂ ಗೆರೆ ದಾಟಿ ಹೋಗುತ್ತಿತ್ತು. ಇದನ್ನು ಕಂಡು ಎರಡು ಕೈಗಳನ್ನು ಎತ್ತಿ ವೈಡ್ ಕೊಡಲು ಮುಂದಾದ ಅಂಪೈರ್, ಕೋಪಗೊಂಡಿದ್ದ ಧೋನಿ ಮುಖ ನೋಡಿ ಕೈಗಳನ್ನು ಕೆಳಗಿಳಿಸಿದ್ದರು. ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಯಿತು. ಧೋನಿ ಅಂಪೈರ್‌ ಅವರನ್ನು ಬೆದರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ಕೇಳಿಬಂದಿತ್ತು. ಒಬ್ಬ ದಿಗ್ಗಜ ಆಟಗಾರನಿಗೆ ಹೆದರಿ ತೀರ್ಪು ಹಿಂಪಡೆಯುವುದು ಅಂಪೈರ್‌ಗೆ ಶೋಭೆ ತರುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.

ADVERTISEMENT

2. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಗವಾಸ್ಕರ್ ಹೇಳಿಕೆ ವಿವಾದ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ನಾಯಕ ವಿರಾಟ್ ವೈಫಲ್ಯ ಅನುಭವಿಸಿದ್ದರು. ಈ ಸಂದರ್ಭ, ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು, ಲಾಕ್ ಡೌನ್ ವೇಳೆ ವಿರಾಟ್ ಕೊಹ್ಲಿ, ಅನುಷ್ಕಾ ಬೌಲಿಂಗ್‌ಗೆ ಮಾತ್ರ ಪ್ರಾಕ್ಟಿಸ್ ಮಾಡಿದ್ದಾರೆ. ಅದಕ್ಕೆ ಹೀಗೆ ಆಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಗವಾಸ್ಕರ್ ಮಾತಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅನುಷ್ಕಾ ಶರ್ಮಾ, ಗವಾಸ್ಕರ್ ಅವರೇ ನಿಮ್ಮ ಸಂದೇಶ ಅಸಹ್ಯಕರವಾಗಿದೆ. ಪತಿಯ ಆಟಕ್ಕೆ ಪತ್ನಿಯನ್ನು ಯಾಕೆ ಟೀಕಿಸುತ್ತೀರಿ? ಇಷ್ಟು ವರ್ಷಗಳಲ್ಲಿ ನೀವು ಪ್ರತಿ ಕ್ರಿಕೆಟಿಗನ ಖಾಸಗಿ ಜೀವನವನ್ನು ಗೌರವಿಸುತ್ತಿದ್ದೀರಿ ಎಂದು ನನಗೆ ಖಾತ್ರಿಯಿದೆ. ನನ್ನ ಮತ್ತು ನಮಗೆ ಅದೇ ರೀತಿಯ ಸಮಾನ ಗೌರವ ನೀಡಬೇಕು ಎಂದು ನೀವು ಭಾವಿಸುವುದಿಲ್ಲವೇ? ” ಎಂದು ಪ್ರಶ್ನಿಸಿದ್ದರು.

3. ಸರಣಿ ಆರಂಭಕ್ಕೂ ಮುನ್ನವೇ ಹಿಂದಿರುಗಿದ್ದ ರೈನಾ

ಚೆನ್ನೈ ತಂಡದ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಸುರೇಶ್ ರೈನಾ, ಐಪಿಎಲ್ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ವಾಪಸಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಪ್ರತಿ ಬಾರಿಯಂತೆ ತಂಡದ ಜೊತೆ ಹೋಟೆಲ್ ತಲುಪಿದ್ದ ಅವರು ಕೆಲ ದಿನಗಳಲ್ಲೇ ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಆಗಿದ್ದರು. ಏನಾಯಿತು? ಎಂಬ ಬಗ್ಗೆ ಸ್ಪಷ್ಟ ಉತ್ತರ ಬರಲಿಲ್ಲ. ಕುಟುಂಬದ ಜೊತೆ ಇರಬೇಕೆಂದಷ್ಟೇ ರೈನಾ ತಿಳಿಸಿದ್ದರು. ರೈನಾ ಅವರ ಅನುಪಸ್ಥಿತಿಯಲ್ಲಿ ಚೆನ್ನೈ ಕಳಪೆ ಪ್ರದರ್ಶನ ನೀಡಿದಾಗ ಅಭಿಮಾನಿಗಳು ಸುರೇಶ್ ರೈನಾ ಇರಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

4. ಶಾರ್ಟ್ ರನ್ ವಿವಾದ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್ ವೇಳೆ ಅಂಪೈರ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಂದು ರನ್‌ಗೆ ಕತ್ತರಿ ಹಾಕಿದ ವಿಷಯ ವಿವಾದಕ್ಕೆ ಎಡೆಮಾಡಿತು. ರನ್ ಚೇಸ್ ವೇಳೆ, 19ನೇ ಓವರಿನಲ್ಲಿ ಕ್ರಿಸ್ ಜೋರ್ಡನ್ ಮತ್ತು ಮಯಾಂಕ್ ಅಗರ್ವಾಲ್ ಎರಡು ರನ್ ಓಡಿದ್ದರು. ಆದರೆ, ಜೋರ್ಡನ್ ಅವರ ಬ್ಯಾಟ್ ಗೆರೆ ಮುಟ್ಟಿಲ್ಲವೆಂದು ಪರಿಗಣಿಸಿದ ಲೆಗ್ ಅಂಪೈರ್ ನಿತಿನ್ ಮೆನನ್ ಅವರು, ಒಂದು ರನ್ ಮಾತ್ರ ಮಾನ್ಯ ಮಾಡಿದರು. ವಿಡಿಯೊದಲ್ಲಿ ಜೋರ್ಡನ್ ಗೆರೆ ಮುಟ್ಟಿದ್ದು, ಸ್ಪಷ್ಟವಾಗಿತ್ತು. ಈ ಬಗ್ಗೆ ಕಿಡಿಕಾರಿದ್ದ ತಂಡದ ಸಹ ಮಾಲೀಕರಾದ ನಟಿ ಪ್ರೀತಿ ಜಿಂಟಾ, ಇಂತಹ ಸಂದರ್ಭ ತಂತ್ರಜ್ಞಾನ ಬಳಸಿ ಸರಿಯಾದ ತೀರ್ಪು ನೀಡಬಹುದಲ್ಲವೆ? ಬಳಸದೇ ಇದ್ದರೆ ತಂತ್ರಜ್ಞಾನವಿರುವುದು ಯಾವ ಪುರುಷಾರ್ಥಕ್ಕೆ ಎಂದು ಟೀಕಿಸಿದ್ದರು.

5. ಟಾಮ್ ಕರನ್ ಔಟ್ ತೀರ್ಪನ್ನು ಹಿಂಪಡೆದಿದ್ದ ಅಂಪೈರ್

ಸೆಪ್ಟೆಂಬರ್ 2ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ 18ನೇ ಓವರಿನಲ್ಲಿ ಟಾಮ್ ಕರನ್ ಅವರು ಎಲ್‌ಬಿಡಬ್ಲ್ಯೂ ಆಗಿದ್ದರೆಂದು ಅಂಪೈರ್ ಶಂಶುದ್ದೀನ್ ತೀರ್ಪು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಟಾಮ್, ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಅಂಪೈರ್, ಥರ್ಡ್ ಅಂಪೈರ್‌ಗೆ ಮರು ಪರಿಶೀಲನೆಗೆ ಕೋರಿದರು. ರಾಜಸ್ಥಾನ್ ರಾಯಲ್ಸ್ ಅಷ್ಟೊತ್ತಿಗೆ ತಮ್ಮ ಡಿಆರ್‌ಎಸ್ ಕೋಟಾ ಮುಗಿಸಿದ್ದರಿಂದ ಅಂಪೈರ್‌ಗೆ ಮನವಿ ಮಾಡಿದ್ದರು. ಈ ಸಂದರ್ಭ, ಅಂಪೈರ್ ಬಳಿಗೆ ತೆರಳಿದ ಧೋನಿ, ಔಟ್ ನೀಡಿದ ತೀರ್ಪನ್ನು ಮರುಪರಿಶೀಲನೆಗೆ ಹೇಗೆ ರೆಫರ್ ಮಾಡಿದಿರಿ ಎಂದು ಪ್ರಶ್ನಿಸಿದರು.

ಅಂತಿಮವಾಗಿ, ಆನ್-ಫೀಲ್ಡ್ ಅಂಪೈರ್‌ಗಳು ಎಲ್‌ಬಿಡಬ್ಲ್ಯೂ ಅಲ್ಲ, ಕ್ಯಾಚ್ ಪರಿಶೀಲಿಸುವಂತೆ ಕೇಳಿದೆವು ಎಂದು ತಿಳಿಸಿದರು. ಆದರೆ, ಅದರಲ್ಲೂ ಟಾಮ್ ಕರನ್ ಔಟಾಗಿಲ್ಲ ಎಂಬುದು ತಿಳಿದುಬಂದಿತು. ಬಳಿಕ, ಥರ್ಡ್ ಅಂಪೈರ್ ಬ್ಯಾಟಿಂಗ್ ಮುಂದುವರಿಸಲು ಟಾಮ್ ಕರನ್ ಅವರಿಗೆ ಅನುವು ಮಾಡಿಕೊಟ್ಟರು. ಈ ವಿವಾದ ಕಳೆದ ವರ್ಷದ ಐಪಿಎಲ್‌ನಲ್ಲಿ ಭಾರಿ ಸದ್ದು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.