ನವದೆಹಲಿ: ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಭಾರತೀಯ ಸಶಸ್ತ್ರ ಪಡೆಗಳ ಮೂವರೂ ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ. ಆಪರೇಷನ್ ಸಿಂಧೂರವನ್ನು ಯಶಸ್ವಿಯಾಗಿ ಕೈಗೊಂಡ ಭಾರತೀಯ ಸೇನಾಪಡೆಗಳಿಗೆ ಗೌರವ ಸಲ್ಲಿಸುವ ಸಮಾರಂಭವನ್ನು ಫೈನಲ್ ಪಂದ್ಯದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮ ಹೇಳಿಕೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
‘ಆಪರೇಷನ್ ಸಿಂಧೂರದ ಯಶಸ್ಸನ್ನು ಆಚರಿಸಲು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ಗೆ ನಾವು ಭಾರತೀಯ ಸಶಸ್ತ್ರ ಪಡೆಗಳ ಮೂವರೂ ಮುಖ್ಯಸ್ಥರು, ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ಸೈನಿಕರಿಗೆ ಆಹ್ವಾನವನ್ನು ನೀಡಿದ್ದೇವೆ’ಎಂದು ಸೈಕಿಯಾ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.
ದೇಶದ ಸಶಸ್ತ್ರ ಪಡೆಗಳ ಶೌರ್ಯ, ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಬಿಸಿಸಿಐ ವಂದಿಸುತ್ತದೆ ಎಂದು ಸೈಕಿಯಾ ಹೇಳಿದ್ದಾರೆ.
ಆಪರೇಷನ್ ಸಿಂಧೂರದ ಕಾರ್ಯಾಚರಣೆ ಅಡಿಯಲ್ಲಿನ ಯೋಧರ ವೀರೋಚಿತ ಹೋರಾಟ ರಾಷ್ಟ್ರವನ್ನು ರಕ್ಷಿಸಿತು ಮತ್ತು ಸ್ಫೂರ್ತಿ ತುಂಬಿತು ಎಂದು ಅವರು ಶ್ಲಾಘಿಸಿದ್ದಾರೆ..
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಗೌರವ ಸೂಚಕವಾಗಿ ನಾವು ಐಪಿಎಲ್ ಸಮಾರೋಪ ಸಮಾರಂಭವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಿರ್ಧರಿಸಿದ್ದೇವೆ. ರಾಷ್ಟ್ರ ಮತ್ತು ಅದರ ಸಾರ್ವಭೌಮತ್ವ, ಸಮಗ್ರತೆ ಮತ್ತು ನಮ್ಮ ದೇಶದ ಭದ್ರತೆಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಸೈಕಿಯಾ ಹೇಳಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ ಭೂಸೇನಾ ಮುಖ್ಯಸ್ಥರಾಗಿದ್ದರೆ, ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ನೌಕಾಪಡೆ ಮುಖ್ಯಸ್ಥರಾಗಿದ್ದಾರೆ. ಮಾರ್ಷಲ್ ಅಮರ್ ಪ್ರೀತ್ ಸಿಂಗ್ ವಾಯುಪಡೆಯ ಮುಖ್ಯಸ್ಥರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.