ADVERTISEMENT

19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್: ಆಯುಷ್, ವೈಭವ್ ಮೇಲೆ ಚಿತ್ತ

ಭಾರತ–ಯುಎಇ ಮುಖಾಮುಖಿ

ಪಿಟಿಐ
Published 11 ಡಿಸೆಂಬರ್ 2025, 23:30 IST
Last Updated 11 ಡಿಸೆಂಬರ್ 2025, 23:30 IST
ವೈಭವ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ
ವೈಭವ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ   

ದುಬೈ: ಚಿಗುರುಮೀಸೆಯ ಹುಡುಗ ಆಯುಷ್ ಮ್ಹಾತ್ರೆ ಅವರು 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಯುವ ತಂಡವನ್ನು ಮುನ್ನಡೆಸಲಿದ್ದಾರೆ. 14ರ ಪೋರ ವೈಭವ್ ಸೂರ್ಯವಂಶಿ ಈ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಶುಕ್ರವಾರದಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಆಡಲಿರುವ ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಭಾರತ ತಂಡದವರು ಹಸ್ತಲಾಘವ ಮಾಡುವರೇ ಎಂಬ ಕುತೂಹಲ ಕೂಡ ಗರಿಗೆದರಿದೆ. 

ಮುಂಬೈ ತಂಡದಲ್ಲಿ ಆಡುವ ಆಯುಷ್ ನಾಯಕತ್ವದ ಭಾರತ ತಂಡವು ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಎದುರಿಸಲಿದೆ. ಭಾನುವಾರ ಪಾಕಿಸ್ತಾನದ ಎದುರು ಕಣಕ್ಕಿಳಿಯಲಿದೆ. ಈಚೆಗೆ ಸೀನಿಯರ್ ಏಷ್ಯಾ ಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಪಾಕ್ ಆಟಗರರ ಕೈಕುಲುಕಿರಲಿಲ್ಲ. ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತದ ವನಿತೆಯರು ಪಾಕ್ ಆಟಗಾರ್ತಿಯರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ. ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿಯೂ ಇದೇ ಪದ್ಧತಿ ಮುಂದುವರಿದಿತ್ತು. 

ADVERTISEMENT

‘ಆಟಗಾರರಿಗೆ ಇದುವರೆಗೆ ಯಾವುದೇ ರೀತಿಯ ಮಾಹಿತಿ ನೀಡಲಾಗಿಲ್ಲ. ಆದರೆ ಒಂದೊಮ್ಮೆ ಆಟಗಾರರು ಹಸ್ತಲಾಘವ ಮಾಡದಿರಲು ನಿರ್ಧರಿಸಿದರೆ ಮ್ಯಾಚ್ ರೆಫರಿಗೆ ಮೊದಲೇ ತಿಳಿಸುವುದು ಕಡ್ಡಾಯ ಎಂದು ತಂಡದ ಮ್ಯಾನೇಜರ್ ಆನಂದ್ ದಾತಾರ್ ಅವರಿಗೆ ಬಿಸಿಸಿಐ ಸೂಚನೆ ನೀಡಿದೆ. ಕ್ರಿಕೆಟ್‌ನಲ್ಲಿ ರಾಜಕೀಯ ವಿಷಯಗಳನ್ನು ಮುನ್ನೆಲೆಗೆ ತರುವುದು  ಐಸಿಸಿಗೆ ಇಷ್ಟವಿಲ್ಲ. ಇದು ಜನರಿಗೆ ಭಾವನಾತ್ಮಕ ಸಂಗತಿಯೂ ಹೌದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಟೂರ್ನಿಯ ಎ ಗುಂಪಿನಲ್ಲಿ ಭಾರತ ಮತ್ತು ಪಾಕ್ ಆಡಲಿವೆ. ಇನ್ನುಳಿದಂತೆ ಮಲೇಷ್ಯಾ ಹಾಗೂ ಯುಎಇ ತಂಡಗಳಿವೆ. ಆದ್ದರಿಂದ ಸೆಮಿಫೈನಲ್‌ ಗೆ ಅರ್ಹತೆ ಗಿಟ್ಟಿಸುವ ಸಮರ್ಥ ತಂಡಗಳೂ ಭಾರತ ಮತ್ತು ಪಾಕ್ ಆಗಿವೆ. ಇದರಿಂದಾಗಿ ಕನಿಷ್ಟ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವುದ ಬಹುತೇಕ ಖಚಿತ. 

ನಾಯಕ ಆಯುಷ್ ಅವರು ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘವಾಗಿ ಆಡಿದ್ದರು. ಎರಡು ಶಕತ ಮತ್ತು ಒಂದು ಅರ್ಧಶತಕ ಗಳಿಸಿದ್ದರು. ಸೂರ್ಯವಂಶಿ ಅವರು ಈ ಟೂರ್ನಿಯ ಇತಿಹಾಸದಲ್ಲಿಯೇ ಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯೂ ತಮ್ಮ ಆರ್ಭಟ ಮುಂದುವರಿಸುವ ಛಲದಲ್ಲಿದ್ದಾರೆ. 

ಭಾರತ ತಂಡ

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ವೇದಾಂತ ತ್ರಿವೇದಿ, ಅಭಿಗ್ಯಾನ್ ಕುಂದು (ವಿಕೆಟ್‌ಕೀಪರ್), ಹರವಂಶ್ ಸಿಂಗ್ (ವಿಕೆಟ್‌ಕೀಪರ್), ಯುವರಾಜ್ ಗೋಹಿಲ್, ಕನಿಷ್ಕ ಚೌಹಾಣ, ಖಿಲಾನ್ ಎ ಪಟೇಲ್, ನಮನ್ ಪುಷ್ಪಕ್, ಡಿ. ದೀಪೇಶ್, ಹೆನಿಲ್ ಪಟೇಲ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಆ್ಯರನ್ ಜಾರ್ಜ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.