
ಸಾಂದರ್ಭಿಕ ಚಿತ್ರ
ದುಬೈ: ದೀಪೇಶ್ ದೇವೆಂದ್ರನ್ ಮತ್ತು ಕನಿಷ್ಕ್ ಚೌಹಾಣ್ ಅವರಿಬ್ಬರ ಅಮೋಘ ಬೌಲಿಂಗ್ ಬಲದಿಂದ ಭಾರತ ಯುವ ತಂಡವು 19 ವರ್ಷದೊಳಗಿನವರ ಎಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ಯುವ ಬಳಗದ ಎದುರು ಜಯಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ್ಯರನ್ ಜಾರ್ಜ್ (85; 88ಎ, 4X12, 6X1) ಹಾಗೂ ಕನಿಷ್ಕ್ ಚೌಹಾಣ್ (46; 46ಎ, 4X2, 6X3) ಅವರ ಬ್ಯಾಟಿಂಗ್ ಬಲದಿಂದ ಭಾರತ ಯುವಪಡೆಯು 46.1 ಓವರ್‌ಗಳಲ್ಲಿ 240 ರನ್ ಗಳಿಸಿತು. ಪಾಕ್ ತಂಡದ ಮೊಹಮ್ಮದ್ ಸಯ್ಯಾಮ್ ಮತ್ತು ಅಬ್ದುಲ್ ಸುಭಾನ್ ಅವರು ತಲಾ 3 ವಿಕೆಟ್ ಗಳಿಸಿ, ಭಾರತದ ದೊಡ್ಡ ಮೊತ್ತ ಗಳಿಸುವ ಗುರಿಗೆ ಅಡ್ಡಿಯಾದರು.
ಗುರಿ ಬೆನ್ನಟ್ಟಿದ ಪಾಕ್ ತಂಡವನ್ನು 150 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತದ ಬೌಲಿಂಗ್ ಪಡೆ ಯಶಸ್ವಿಯಾಯಿತು. ದೀಪೇಶ್ ಮತ್ತು ಕನಿಷ್ಕ್ ಅವರು ತಲಾ 3 ವಿಕೆಟ್ ಗಳಿಸಿದರೆ, ಕಿಶನ್ ಕುಮಾರ್ ಸಿಂಗ್ 2 ವಿಕೆಟ್ ಪಡೆದರು.
ಮಳೆ ಬಂದ ಕಾರಣ ಪಾಕ್ ಇನಿಂಗ್ಸ್ ಅನ್ನು 49 ಓವರ್‌ಗಳಿಗೆ ನಿಗದಿ ಮಾಡಲಾಗಿತ್ತು.
ಭಾರತ: 46.1 ಓವರ್‌ಗಳಲ್ಲಿ 240 (ಆಯುಷ್ ಮ್ಹಾತ್ರೆ 38, ಆ್ಯರನ್ ಜಾರ್ಜ್ 85, ಅಭಿಗ್ಯಾನ ಕುಂದು 22, ಕನಿಷ್ಕ ಚೌಹಾಣ್ 46, ಮೊಹಮ್ಮದ್ ಸಯ್ಯಾಮ್ 67ಕ್ಕೆ3, ಅಬ್ದುಲ್ ಸುಭಾನ್ 42ಕ್ಕೆ3, ನಿಕಾಬ್ ಶಫೀಕ್ 38ಕ್ಕೆ2)
ಪಾಕಿಸ್ತಾನ: 41.2 ಓವರ್‌ಗಳಲ್ಲಿ 150 (ಉಸ್ಮಾನ್ ಖನ್ 16, ಫರ್ಹಾನ್ ಯೂಸುಫ್ 23, ಹುಝೈಫಾ ಅಹಸಾನ್ 70, ಕಿಶನಕುಮಾರ್ ಸಿಂಗ್ 33ಕ್ಕೆ2, ದೀಪೇಶ್ ದೇವೇಂದ್ರನ್ 16ಕ್ಕೆ3, ಕನಿಷ್ಕ್ ಚೌಹಾಣ್ 33ಕ್ಕೆ3) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 90 ರನ್ ಜಯ.
ಹಸ್ತಲಾಘವ ಇಲ್ಲ
ದುಬೈ: ಈ ಪಂದ್ಯದಲ್ಲಿಯೂ ಭಾರತ 19 ವರ್ಷದೊಳಗಿನ ಆಟಗಾರರು ಪಾಕ್ ತಂಡದವರ ಕೈಕುಲುಕಲಿಲ್ಲ.
ಪಂದ್ಯದ ಟಾಸ್ ವೇಳೆಯಲ್ಲಿ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಪಾಕ್ ತಂಡದ ನಾಯಕ ಫರ್ಹಾನ್ ಯೂಸುಫ್ ಅವರ ಹಸ್ತಲಾಘವ ಮಾಡಲಿಲ್ಲ.
ಈ ಹಿಂದೆ ಸೀನಿಯರ್ ಪುರುಷರ ತಂಡವು ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ಆಟಗಾರರ ಹಸ್ತಲಾಘವ ಮಾಡಿರಲಿಲ್ಲ. ಪೆಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕ್ ಕೈವಾಡವನ್ನು ಖಂಡಿಸಿದ್ದ ಭಾರತ ಕ್ರಿಕೆಟಿಗರು ಪಾಕ್ ಆಟಗಾರರ ಹಸ್ತಲಾಘವ ನಿರಾಕರಿಸಿ ದ್ದರು. ಇದೀಗ ಯುವ ತಂಡವೂ ಸೀನಿಯರ್ ಆಟಗಾರರ ಹಾದಿಯಲ್ಲಿ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.