
ಬ್ರಿಸ್ಬೇನ್: ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಅಮೋಘ ಅರ್ಧಶತಕ ಹಾಗೂ ಆಯುಷ್ ಮ್ಹಾತ್ರೆಯ ಆಫ್‌ಸ್ಪಿನ್ ದಾಳಿಯಿಂದ ಭಾರತ 19 ವರ್ಷದೊಳಗಿನವರ ತಂಡವು ‘ಯೂತ್ ಏಕದಿನ ಕ್ರಿಕೆಟ್’ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಜಯಿಸಿತು.
ಬುಧವಾರ ಇಯಾನ್ ಹೀಲಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 51 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2–0ಯಿಂದ ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಯುವ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಆರಂಭಿಕ ಬ್ಯಾಟರ್ (70; 68ಎ) ಮತ್ತು ವಿಹಾನ್ ಮಲ್ಹೋತ್ರಾ (70; 74ಎ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 117 ರನ್ ಸೇರಿಸಿದರು. ಅವರಲ್ಲದೇ ಅಭಿಗ್ಯಾನ್ ಕುಂದು (71; 64ಎ) ಕೂಡ ಅರ್ಧಶತಕ ಗಳಿಸಿದರು. ಇದರಿಂದಾಗಿ ಭಾರತ ಯುವ ತಂಡವು 49.4 ಓವರ್‌ಗಳಲ್ಲಿ 300 ರನ್ ಗಳಿಸಿತು. ಆತಿಥೇಯ ತಂಡದ ಬೌಲರ್ ವಿಲ್ ಬೈರೊಮ್ (47ಕ್ಕೆ3) ಅವರು ಉತ್ತಮ ದಾಳಿ ನಡೆಸಿದರು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಯುವ ಬಳಗವನ್ನು 47.2 ಓವರ್‌ಗಳಲ್ಲಿ 249 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ 19 ವರ್ಷದೊಳಗಿನವರು ಯಶಸ್ವಿಯಾದರು. ಮಧ್ಯಮ ಕ್ರಮಾಂಕದ ಬ್ಯಾಟರ್ ಜೈಡನ್ ಡ್ರೇಪರ್ (102; 72ಎ, 4X8, 6X5) ಅವರು ಶತಕ ಹೊಡೆದರೂ ಆಸ್ಟ್ರೇಲಿಯಾ ತಂಡಕ್ಕೆ ಜಯಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವಾಗಿದ್ದು ಸಾಂದರ್ಭಿಕ ಆಫ್‌ಸ್ಪಿನ್ನರ್ ಆಯುಷ್ (27ಕ್ಕೆ3) ಅವರ ಚುರುಕಾದ ಬೌಲಿಂಗ್. ಅವರೊಂದಿಗೆ ಕನಿಷ್ಕ ಚೌಹಾಣ್ (50ಕ್ಕೆ2) ಕೂಡ ಉತ್ತಮ ದಾಳಿ ನಡೆಸಿದರು.
ಸಂಕ್ಷಿಪ್ತ ಸ್ಕೋರು:
ಭಾರತ 19 ವರ್ಷದೊಳಗಿನವರು: 49.4 ಓವರ್‌ಗಳಲ್ಲಿ 300 (ವೈಭವ್ ಸೂರ್ಯವಂಶಿ 70, ವಿಹಾನ್ ಮಲ್ಹೋತ್ರಾ 70, ವೇದಾಂತ್ ತ್ರಿವೇದಿ 26, ಅಭಿಗ್ಯಾನ್ ಕುಂದು 71, ವಿಲ್ ಬೈರೊಮ್ 47ಕ್ಕೆ3, ಯಶ್ ದೇಶಮುಖ 31ಕ್ಕೆ2)
ಆಸ್ಟ್ರೇಲಿಯಾ 19 ವರ್ಷದೊಳಗಿನವರು: 47.2 ಓವರ್‌ಗಳಲ್ಲಿ 249 (ಅಲೆಕ್ಸ್ ಟರ್ನರ್ 24, ಜೈಡನ್ ಡ್ರೇಪರ್ 107, ಆರ್ಯನ್ ಶರ್ಮಾ 38, ಕನಿಷ್ಕ ಚೌಹಾಣ್ 50ಕ್ಕೆ2, ಆಯುಷ್ ಮ್ಹಾತ್ರೆ 27ಕ್ಕೆ3)
ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 51 ರನ್ ಜಯ. ಸರಣಿಯಲ್ಲಿ 2–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.