
ವೈಭವ್ ಸೂರ್ಯವಂಶಿ
(ಪಿಟಿಐ ಚಿತ್ರ)
ಮುಂಬೈ: ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಮುಂದಿನ ತಿಂಗಳ 15 ರಿಂದ ಫೆಬ್ರುವರಿ 6ರವರೆಗೆ ನಡೆಯಲಿರುವ 19 ವರ್ಷಗೊಳಗಿನವರ ವಿಶ್ವಕಪ್‌ಗೆ ನಾಯಕರನ್ನಾಗಿ ಹೆಸರಿಸಲಾಗಿದೆ. 15 ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.
ಆದರೆ ಇದಕ್ಕೆ ಮೊದಲು ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಿಹಾನ್ ಮಲ್ಹೋತ್ರಾ ಜೊತೆ ಮ್ಹಾತ್ರೆ ಅಲಭ್ಯರಾಗಲಿದ್ದಾರೆ. ಇವರಿಬ್ಬರು ಮಣಿಕಟ್ಟಿನ ಗಾಯದಿಂದ ಚಿಕಿತ್ಸೆ ಪಡೆಯುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಪ್ರವಾಸಕ್ಕೆ ವೈಭವ್ ಸೂರ್ಯವಂಶಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನು (ಜನವರಿ 3, 5 ಮತ್ತು 7ರಂದು) ಆಡಲಿದೆ.
ಐಸಿಸಿ ಯುವ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲಿವೆ. ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಲೀಗ್ ನಂತರ ಸೂಪರ್ ಸಿಕ್ಸ್ ಹಂತ, ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ. ಭಾರತ ಐದು ಬಾರಿ (2000, 2008 2012, 2018 ಮತ್ತು 2022ರಲ್ಲಿ) ಚಾಂಪಿಯನ್ ಆಗಿದೆ. ಭಾರತ ಮೊದಲ ಪಂದ್ಯವನ್ನು ಬುಲಾವಯೊದಲ್ಲಿ ಅಮೆರಿಕದ ವಿರುದ್ಧ ಜನವರಿ 15ರಂದು ಆಡಲಿದೆ.
ತಂಡಗಳು:
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ: ವೈಭವ್ ಸೂರ್ಯವಂಶಿ (ನಾಯಕ), ಆರನ್ ಜಾರ್ಜ್ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು (ವಿಕೆಟ್ ಕೀಪರ್), ಹರವಂಶ್ ಸಿಂಗ್ (ವಿಕೆಟ್ ಕೀಪರ್), ಆರ್.ಎಸ್.ಅಂಬರೀಶ್, ಕನಿಷ್ಕ್ ಚೌಹಾನ್, ಖಿಲಾನ್ ಎ.ಪಟೇಲ್, ಮೊಹಮ್ಮದ್ ಇನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್.
19 ವರ್ಷದೊಳಗಿನವರ ವಿಶ್ವಕಪ್‌ಗೆ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪ ನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರವಂಶ್ ಸಿಂಗ್ (ವಿಕೆಟ್ ಕೀಪರ್ಸ್), ಆರ್.ಎಸ್.ಅಂಬರೀಶ್, ಕನಿಷ್ಕ್ ಚೌಹಾನ್, ಖಿಲಾನ್ ಪಟೇಲ್, ಮೊಹಮ್ಮದ್ ಇನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.