
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸಲೋನಿ ಪಿ. ಅವರ ಅಜೇಯ ಅರ್ಧಶತಕದ ಹೊರತಾಗಿಯೂ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನವರ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ದೆಹಲಿ ತಂಡಕ್ಕೆ 10 ರನ್‌ಗಳಿಂದ ಮಣಿಯಿತು.
ಅಹಮದಾಬಾದ್‌ನ ಗುಜರಾತ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ದೆಹಲಿ ತಂಡವು ಫೈನಲ್ ಪ್ರವೇಶಿಸಿತು. ಗುರುವಾರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್‌ನಲ್ಲಿ ಹರಿಯಾಣ ಐದು ವಿಕೆಟ್‌ಗಳಿಂದ ಮುಂಬೈ ತಂಡವನ್ನು ಸೋಲಿಸಿತು.
ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡವು ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್ ಗಳಿಸಿತು. ವಂಶಿಕಾ ಲೀಲಾ (38;19ಎ), ಶಿವಿ ಶರ್ಮಾ (29;33ಎ), ನಾಯಕಿ ತನಿಶಾ ಸಿಂಗ್ (22;24ಎ) ಉಪಯುಕ್ತ ಕಾಣಿಕೆ ನೀಡಿದರು. ಕರ್ನಾಟಕದ ಬಿ.ಜಿ. ತೇಜಸ್ವಿನಿ (4–0–9–3) ಯಶಸ್ವಿ ಬೌಲರ್ ಎನಿಸಿದರು.
ಸಾಧಾರಣ ಮೊತ್ತದ ಗುರಿ ಪಡೆದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಈ ಹಿಂದಿನ ಪಂದ್ಯಗಳ ಗೆಲುವಿನಲ್ಲಿ ಮಿಂಚಿದ್ದ ನಿಕಿ ಪ್ರಸಾದ್ (4) ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ನಾಯಕಿ ರೋಶನಿ ಕಿರಣ್ (27;23) ಮತ್ತು ಸಲೋನಿ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಏಳು ಆಟಗಾರ್ತಿಯರು ಒಂದಂಕಿ ಮೊತ್ತಕ್ಕೇ ನಿರ್ಗಮಿಸಿದರು. ತಂಡವು 19.3 ಓವರ್‌ಗಳಲ್ಲಿ 133 ರನ್ ಗಳಿಸಿ ಹೋರಾಟ ಮುಗಿಸಿತು. ದೆಹಲಿ ತಂಡದ ಪ್ರಿಯಾ ಮಿಶ್ರಾ ಮತ್ತು ಮಧು ಅವರು ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ದೆಹಲಿ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 (ಶಿವಿ ಶರ್ಮಾ 29, ತನಿಶಾ ಸಿಂಗ್ 22, ಶ್ವೇತಾ ಸೆಹ್ರಾವತ್ 20, ವಂಶಿಕಾ ಲೀಲಾ 38; ಬಿ.ಜಿ.ತೇಜಸ್ವಿನಿ 9ಕ್ಕೆ 3, ಸಲೋನಿ 22ಕ್ಕೆ 1, ನಮಿತಾ ಡಿಸೋಜ 23ಕ್ಕೆ 1); ಕರ್ನಾಟಕ: 19.3 ಓವರ್‌ಗಳಲ್ಲಿ 133 (ರೋಶನಿ ಕಿರಣ್ 27, ಸಲೋನಿ ಪಿ. ಔಟಾಗದೇ 51; ದೀಕ್ಷಾ 17ಕ್ಕೆ 1, ಪ್ರಿಯಾ ಮಿಶ್ರಾ 24ಕ್ಕೆ 2, ಮಧು 26ಕ್ಕೆ 2, ತನಿಶಾ ಸಿಂಗ್ 11ಕ್ಕೆ 1). ಫಲಿತಾಂಶ: ದೆಹಲಿಗೆ 10 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ತನಿಶಾ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.