
ಬೆಂಗಳೂರು: ನಾಯಕಿ ಕಶ್ವಿ ಕಂಡಿಕೊಪ್ಪ ಅವರ ಮಿಂಚಿನ ಶತಕ ಹಾಗೂ ನೈನಿಶಾ ರೆಡ್ಡಿ ಪಾಟೀಲ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶನಿವಾರ 275 ರನ್‌ಗಳಿಂದ ಮಣಿಪುರ ತಂಡವನ್ನು ಮಣಿಸಿತು. ಅದರೊಂದಿಗೆ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಿತು.
ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡವು ನಿಗದಿತ ಓವರ್‌ಗಳಲ್ಲಿ (35 ಓವರ್) 5 ವಿಕೆಟ್‌ಗೆ 321 ರನ್‌ಗಳ ಭಾರಿ ಮೊತ್ತ ಗಳಿಸಿತು. ಕಶ್ವಿ 66 ಎಸೆತಗಳಲ್ಲಿ 158 ರನ್ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 23 ಬೌಂಡರಿ ಹಾಗೂ 7 ಸಿಕ್ಸರ್‌ಗಳಿದ್ದವು. ಶೀತಲ್ ಸಂತೋಷ್ 52 ರನ್ ಗಳಿಸಿದರು. ಮಣಿಪುರ ತಂಡದ ಫಾರ್ಜಿಯಾ ಎರಡು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಮಣಿಪುರ ತಂಡವು 23.3 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಕುಸಿಯಿತು. ನೈನಿಷಾ 11 ರನ್ ನೀಡಿ ಐದು ವಿಕೆಟ್ ಗೊಂಚಲು ಸಾಧಿಸಿದರು. ಶ್ರೀಕಾ ಚತುರಾ (8ಕ್ಕೆ2) ಹಾಗೂ ಹರ್ಷಿತಾ.ಕೆ (2ಕ್ಕೆ1) ಎದುರಾಳಿ ತಂಡವು ಬೇಗನೆ ಕುಸಿಯುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 35 ಓವರ್‌ಗಳಲ್ಲಿ 5 ವಿಕೆಟ್‌ಗೆ 321 (ಕಶ್ವಿ ಕಂಡಿಕೊಪ್ಪ 158, ಶೀತಲ್ ಸಂತೋಷ್ 52; ಫಾರ್ಜಿಯಾ 38ಕ್ಕೆ2) ಮಣಿಪುರ: 23.3 ಓವರ್‌ಗಳಲ್ಲಿ 46 (ಲಿಂಥೋಯಿ ಔಟಾಗದೇ 11; ನೈನಿಷಾ 11ಕ್ಕೆ5, ಶ್ರೀಕಾ ಚತುರಾ 8ಕ್ಕೆ2, ಹರ್ಷಿತಾ.ಕೆ 2ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.