ADVERTISEMENT

19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌: ಭಾರತದ ಮೊದಲ ಎದುರಾಳಿ ಲಂಕಾ

ವೇಳಾಪಟ್ಟಿ ಪ್ರಕಟ

ಪಿಟಿಐ
Published 24 ಅಕ್ಟೋಬರ್ 2019, 16:14 IST
Last Updated 24 ಅಕ್ಟೋಬರ್ 2019, 16:14 IST

ದುಬೈ: ಹಾಲಿ ಚಾಂಪಿಯನ್‌ ಭಾರತ ತಂಡ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೆಣಸಲಿದೆ.

ಈ ಪಂದ್ಯವು ಜನವರಿ 19ರಂದು ಮಾಂಗೌಂಗ್‌ ಓವಲ್‌ನಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ನಾಲ್ಕು ಬಾರಿ ಪ್ರಶಸ್ತಿ ಜಯಿಸಿರುವ ಭಾರತವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ನ್ಯೂಜಿಲೆಂಡ್‌ ಮತ್ತು ಜಪಾನ್‌ ತಂಡಗಳೂ ಇದೇ ಗುಂಪಿನಲ್ಲಿವೆ. ಜಪಾನ್‌ ತಂಡವು ಮೊದಲ ಸಲ ವಿಶ್ವಕಪ್‌ನಲ್ಲಿ ಆಡುತ್ತಿದೆ. ಜನವರಿ 17ರಂದು ಟೂರ್ನಿಗೆ ಚಾಲನೆ ಸಿಗಲಿದೆ. ಫೆಬ್ರುವರಿ 19ರಂದು ಫೈನಲ್‌ ಪಂದ್ಯ ನಡೆಯಲಿದೆ.

ADVERTISEMENT

ಜನವರಿ 21ರಂದು ನಡೆಯುವ ತನ್ನ ಎರಡನೇ ಹಣಾಹಣಿಯಲ್ಲಿ ಭಾರತವು ಜಪಾನ್‌ ಎದುರೂ, ಜನವರಿ 24ರಂದು ನಿಗದಿಯಾಗಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧವೂ ಸೆಣಸಲಿದೆ.

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್‌ ಲೀಗ್‌ಗೆ ಅರ್ಹತೆ ಗಳಿಸಲಿವೆ. ಉಳಿದ ತಂಡಗಳು ಪ್ಲೇಟ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಣಸಲಿವೆ.

ವಿವಿಧ ಗುಂಪುಗಳಲ್ಲಿ ಸ್ಥಾನ ಪಡೆದಿರುವ ತಂಡಗಳು: ‘ಎ’ ಗುಂಪು: ಭಾರತ, ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ಜಪಾನ್‌.

‘ಬಿ’ ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಮತ್ತು ನೈಜೀರಿಯಾ.

‘ಸಿ’ ಗುಂಪು: ಪಾಕಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಸ್ಕಾಟ್ಲೆಂಡ್‌.

‘ಡಿ’ ಗುಂಪು: ಅಫ್ಗಾನಿಸ್ತಾನ, ದಕ್ಷಿಣ ಆಫ್ರಿಕಾ, ಯು.ಎ.ಇ ಮತ್ತು ಕೆನಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.