ವಿಹಾನ್ ಮಲ್ಹೋತ್ರಾ
ಬುಲಾವಯೊ: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅಭಿಜ್ಞಾನ್ ಕುಂಡು ಅವರ ಉಪಯುಕ್ತ ಅರ್ಧಶತಕಗಳು ಮತ್ತು ವಿಹಾನ್ ಮಲ್ಹೋತ್ರಾ ಅವರ (14ಕ್ಕೆ4) ಅವರ ದಾಳಿಯ ನೆರವಿನಿಂದ ಭಾರತ ತಂಡ 19 ವರ್ಷದೊಳಗಿವರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಬಾಂಗ್ಲಾ ದೇಶ ತಂಡವನ್ನು ಡಿಎಲ್‌ಎಸ್ ಆಧಾರದಲ್ಲಿ 18 ರನ್‌ಗಳಿಂದ ಸೋಲಿಸಿತು.
ಇದು ಭಾರತ ತಂಡಕ್ಕೆ ಸತತ ಎರಡನೇ ಗೆಲುವು. ಭಾರತ ಮೊದಲು ಆಡಿ 48.4 ಓವರುಗಳಲ್ಲಿ 238 ರನ್ ಗಳಿಸಿತ್ತು. ಉತ್ತರವಾಗಿ ಬಾಂಗ್ಲಾದೇಶ 17.2 ಓವರುಗಳಲ್ಲಿ 2 ವಿಕೆಟ್‌ಗೆ 90 ರನ್ ಗಳಿಸಿದ್ದಾಗ ಮಳೆಯಿಂದಾಗಿ ಆಟಕ್ಕೆ ಅಡಚಣೆಯಾಯಿತು. ನಂತರ ಗುರಿಯನ್ನು ಪರಿಷ್ಕರಿಸಿ 29 ಓವರುಗಳಲ್ಲಿ 165 ರನ್‌ಗಳಿಗೆ ನಿಗದಿಪಡಿಸಲಾಯಿತು.
ಒಂದು ಹಂತದಲ್ಲಿ 3 ವಿಕೆಟ್‌ಗೆ 106 ರನ್ ಗಳಿಸಿ (21.2 ಓವರ್) ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ ತಂಡಕ್ಕೆ ಸಾಂದರ್ಭಿಕ ಬೌಲರ್ ವಿಹಾನ್ ಮಲ್ಹೋತ್ರಾ (14ಕ್ಕೆ4) ಮತ್ತು ಖಿಲಾನ್ ಪಟೇಲ್ (35ಕ್ಕೆ2) ಅವರು ಪೆಟ್ಟು ನೀಡಿದರು. ತಂಡ 28.3 ಓವರುಗಳಲ್ಲಿ 146 ರನ್‌ಗಳಿಗೆ ಕುಸಿಯಿತು.
ಇದಕ್ಕೆ ಮೊದಲು ಹದಿಹರೆಯದ ಆಕ್ರಮಣಕಾರಿ ಆಟಗಾರ ವೈಭವ್ 67 ಎಸೆತಗಳಲ್ಲಿ ಆರು ಬೌಂಡರಿ, ಮೂರು ಸಿಕ್ಸರ್‌ಗಳಿದ್ದ 72 ರನ್ ಗಳಿಸಿದರೆ, ಅಭಿಜ್ಞಾನ್ 112 ಎಸೆತಗಳಲ್ಲಿ ನಾಲ್ಕು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಒಳಗೊಂಡ 80 ರನ್ ಹೊಡೆದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ ಅತ್ಯುಪಯುಕ್ತ 62 ರನ್ ಸೇರಿಸಿದರು. ತಂಡವು ನಾಯಕ ಆಯುಷ್ ಮ್ಹಾತ್ರೆ (6), ವೇದಾಂತ್ ತ್ರಿವೇದಿ (0) ಮತ್ತು ವಿಹಾನ್ ಮಲ್ಹೋತ್ರಾ ಅವರನ್ನು ಅಗ್ಗದಲ್ಲೇ ಕಳೆದುಕೊಂಡಿತ್ತು. 53 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಇವರಿಬ್ಬರು ಜೊತೆಯಾಗಿದ್ದರು. ಕನಿಷ್ಕ್ ಚೌಹಾನ್ 28 ರನ್ ಗಳಿಸಿದರು. ಬಾಂಗ್ಲಾ ಕಡೆ ಅಲ್ ಫಹಾದ್ ಐದು ವಿಕೆಟ್ ಗೊಂಚಲು ಪಡೆದರು.
ಭಾರತ ತಂಡವು ಇದೇ 24ರಂದು ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು:
ಭಾರತ: 48.4 ಓವರ್‌ಗಳಲ್ಲಿ 238 (ವೈಭವ್ ಸೂರ್ಯವಂಶಿ 72, ಅಭಿಜ್ಞಾನ್ ಕುಂಡು 80, ಕನಿಷ್ಕ್ ಚೌಹಾನ್ 28; ಅಲ್ ಫಹಾದ್ 38ಕ್ಕೆ5, ಇಕ್ಬಾಲ್ ಹುಸೇನ್ ಇಮಾನ್ 45ಕ್ಕೆ2, ಅಜೀಜುಲ್ ಹಕೀಂ 42ಕ್ಕೆ2).
ಬಾಂಗ್ಲಾದೇಶ: 28.3 ಓವರ್‌ಗಳಲ್ಲಿ 146 (ಅಜೀಜುಲ್ ಹಕೀಂ 51, ರಿಫಾತ್ ಬೇಗ್ 37, ವಿಹಾನ್ ಮಲ್ಹೋತ್ರಾ 14ಕ್ಕೆ4, ಖಿಲಾನ್ ಪಟೇಲ್ 35ಕ್ಕೆ2). ಪಂದ್ಯಶ್ರೇಷ್ಠ: ವಿಹಾನ್ ಮಲ್ಹೋತ್ರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.