ADVERTISEMENT

ವಿರಾಟ್ ಆರ್‌ಸಿಬಿ ನಾಯಕತ್ವ ಬಿಡಬೇಕಿಲ್ಲ: ಸೆಹ್ವಾಗ್

ಪಿಟಿಐ
Published 8 ನವೆಂಬರ್ 2020, 19:38 IST
Last Updated 8 ನವೆಂಬರ್ 2020, 19:38 IST
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್   

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಹೊಣೆ ಹೊತ್ತು ವಿರಾಟ್ ಕೊಹ್ಲಿ ನಾಯಕತ್ವ ಬಿಡಬೇಕಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಟೂರ್ನಿಯ ಎಲಿಮಿನೇಟರ್ ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಆರ್‌ಸಿಬಿ ಸೋತಿತ್ತು. ಸತತ 13ನೇ ಸಲವೂ ಪ್ರಶಸ್ತಿ ಜಯಿಸುವಲ್ಲಿ ಎಡವಿತ್ತು. ಆದ್ದರಿಂದ ಪ್ರತಿಕ್ರಿಯಿಸಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು, ಎಂಟು ವರ್ಷದಿಂದ ನಾಯಕರಾಗಿರುವ ಕೊಹ್ಲಿ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು.

ಈ ಕುರಿತು ಮಾತನಾಡಿರುವ ವೀರೂ, ’ಭಾರತ ತಂಡಕ್ಕೆ ಕೊಹ್ಲಿ ನಾಯಕತ್ವ ವಹಿಸುತ್ತಿದ್ದಾರೆ. ಆಗ ತಂಡವು ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಗೆಲ್ಲುತ್ತದೆ. ಆದರೆ ಆರ್‌ಸಿಬಿಯಲ್ಲಿ ಆ ರೀತಿ ಆಗುವುದಿಲ್ಲ. ಏಕೆಂದರೆ ಇಲ್ಲಿ ಕೊಹ್ಲಿಯಿಂದಷ್ಟೇ ಅಲ್ಲ ಇಡೀ ತಂಡದ ಹೊಣೆ ಇದೆ. ಭಾರತ ತಂಡದಲ್ಲಿ ತಂಡದವರು ಆಡು ರೀತಿ, ಆರ್‌ಸಿಬಿ ತಂಡದಲ್ಲಿ ಇರುವ ರೀತಿಯಲ್ಲಿ ವ್ಯತ್ಯಾಸವಿದೆ‘ ಎಂದು ಕ್ರಿಕ್‌ ಬಜ್ ವೆಬ್‌ಸೈಟ್‌ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

’ಒಂದು ಒಳ್ಳೆಯ ತಂಡವಿದ್ದಾಗ ನಾಯಕನಿಗೆ ಉತ್ತಮ ಫಲಿತಾಂಶ ಕೊಡಲು ಸಾಧ್ಯ. ಆದ್ದರಿಂದ ಆರ್‌ಸಿಬಿ ತಂಡದ ಅಡಳಿತವು ನಾಯಕತ್ವ ಬದಲಾವಣೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅದರ ಬದಲು ತಂಡವನ್ನು ಸಮಗ್ರವಾಗಿ ಬಲಿಷ್ಠಗೊಳಿಸುವುದು ಹೇಗೆ ಎನ್ನುವುದರತ್ತ ಕಾರ್ಯನಿರ್ವಹಿಸಬೇಕು. ತಂಡದಲ್ಲಿರುವ ಆಟಗಾರರ ಸಾಮರ್ಥ್ಯವೃದ್ಧಿಗೆ ಯಾವ ರೀತಿಯ ಅನುಕೂಲತೆಗಳು ಮತ್ತು ಪರಿಣತರ ನೆರವು ಬೇಕೆಂಬುದನ್ನು ನೋಡಬೇಕು‘ ಎಂದಿದ್ದಾರೆ.

ಐಪಿಎಲ್‌ನಲ್ಲಿ ಯಶಸ್ವಿ ನಾಯಕರೆಂದು ಮಹೇಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಪರಿಗಣಿಸಲಾಗುತ್ತದೆ. ಆದರೆ ಅವರ ಸಾಲಿನಲ್ಲಿ ವಿರಾಟ್ ಇಲ್ಲ. ಎಂಟು ವರ್ಷಗಳ ಅವಕಾಶ ಲಭಿಸಿದರೂ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದ ನಾಯಕ ಅಥವಾ ಆಟಗಾರನನ್ನು ತೋರಿಸಿಕೊಡಿ. ಉತ್ತರದಾಯಿತ್ವ ಮುಖ್ಯವಲ್ಲವೇ ಎಂದೂ ಗಂಭೀರ್ ಸಂದರ್ಶನವೊಂದರಲ್ಲಿ ಕೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.