ADVERTISEMENT

ಟೀಂ ಇಂಡಿಯಾದ ಗೆಲುವು ಅಸಾಮಾನ್ಯ: ಕೋಚ್ ರವಿ ಶಾಸ್ತ್ರಿ

ಪಿಟಿಐ
Published 20 ಜನವರಿ 2021, 6:18 IST
Last Updated 20 ಜನವರಿ 2021, 6:18 IST
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ   

ಬ್ರಿಸ್ಬೇನ್: ಗಾಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ರವಿ ಶಾಸ್ತ್ರಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆಸಿರುವ ಸ್ಫೂರ್ತಿದಾಯಕ ಭಾಷಣ ವೈರಲ್ ಆಗಿದ್ದು, ಇದೊಂದು ಅಸಾಮಾನ್ಯ ಗೆಲುವು ಎಂದಿದ್ದಾರೆ.

ನೀವು ತೋರಿಸಿದ ಧೈರ್ಯ, ಸಂಕಲ್ಪ, ಚೈತನ್ಯ ವಾಸ್ತವಕ್ಕೆ ದೂರವಾದದ್ದು. ಒಂದು ಸಲವೂ ತಂಡದ ಮನೋಬಲ ಕುಸಿದಿಲ್ಲ. 36 ರನ್ನಿಗೆ ಆಲೌಟ್, ಆದರೂ ಆತ್ಮನಂಬಿಕೆಯಿತ್ತು ಎಂದು ಕೋಚ್ ರವಿ ಶಾಸ್ತ್ರಿ ತಿಳಿಸಿದರು.

ಇದು ರಾತ್ರೋರಾತ್ರಿ ಆಗುವ ಸಾಧನೆಯಲ್ಲ. ಆದರೆ ಈಗ ನೀವು ಈ ಆತ್ಮ ನಂಬಿಕೆಯನ್ನು ಹೊಂದಿದ್ದೀರಿ. ಒಂದು ತಂಡವಾಗಿ ಆಟವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂಬುದನ್ನು ನೋಡಬಹುದು. ಇಂದು ಭಾರತವನ್ನು ಮೆರೆತುಬಿಡಿ, ಇಡೀ ಜಗತ್ತೇ ಎದ್ದು ನಿಂತು ನಿಮ್ಮನ್ನು ನಮಸ್ಕರಿಸಲಿದೆ ಎಂದು ಹೇಳಿದರು.

ADVERTISEMENT

ಆದ್ದರಿಂದ ಇಂದು ನೀವು ಏನು ಮಾಡಿದ್ದೀರಿ ಎಂಬುದನ್ನು ನೆನಪಿಡಿ. ನೀವು ಈ ಕ್ಷಣವನ್ನು ಆನಂದಿಸಬೇಕು. ಸಾಧ್ಯವಾದಷ್ಟು ಆನಂದಿಸಿ ಎಂದು ಯುವ ತಂಡಕ್ಕೆ ಸಲಹೆ ಮಾಡಿದರು.

ಚೇತೇಶ್ವರ ಪೂಜಾರ ಅವರನ್ನು 'ಅಲ್ಟಿಮೇಟ್ ವಾರಿಯರ್' ಎಂದು ಉಲ್ಲೇಖಿಸಿರುವ ರವಿಶಾಸ್ತ್ರಿ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಟಿ. ನಟರಾಜನ್ ಪ್ರದರ್ಶನವನ್ನು ವಿಶೇಷವಾಗಿ ಕೊಂಡಾಡಿದರು.

ಇದು ಮೆಲ್ಬರ್ನ್‌ನಲ್ಲಿ ಪ್ರಾರಂಭವಾಯಿತು. ಸಿಡ್ನಿಯಲ್ಲಿ ಅದ್ಭುತ. ಬಳಿಕ ಇಲ್ಲಿ ಈ ರೀತಿಯ ಗೆಲುವು ನಿಜಕ್ಕೂ ಅಮೋಘ. ಈ ಸರಣಿಯ ಜಯಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅಡಿಲೇಡ್‌ನಲ್ಲಿ ಅತ್ಯಂತ ಕೆಟ್ಟ ಸೋಲಿನ ನಂತರ ತಂಡವು ಈ ರೀತಿ ಪುಟಿದೇಳುವುದು ಅಸಾಧಾರಣವೇ ಸರಿ. ಈ ಬಾರಿಯ ಪ್ರವಾಸವು ಅತ್ಯಂತ ಕಠಿಣವಾದದ್ದು. ಹಲವು ಕಾರಣಗಳಿಂದ ಕಷ್ಟಕರ ಹಾದಿ ಇದಾಗಿತ್ತು. ಸೋಲಿನ ಪ್ರಪಾತದಿಂದ ಎದ್ದು, ಯಶಸ್ಸಿನ ಉತ್ತುಂಗಕ್ಕೆ ತಲುಪಿದ ಆ ಸಾಧನೆಯನ್ನು ವರ್ಣಿಸಲು ಪದಗಳು ಸಾಲದು ಎಂದು ಹೇಳಿದರು.

ಸರಣಿಯಲ್ಲಿ 0-1ರ ಅಂತರದ ಹಿನ್ನೆಡೆ ಅನುಭವಿಸಿ ಸತತ ಗಾಯದ ಸಮಸ್ಯೆ ಎದುರಿಸಿದಾಗ ಯುವ ಪಡೆಯನ್ನು ತಾಳ್ಮೆಯ ನಾಯಕತ್ವದ ಮೂಲಕ ಮುನ್ನಡೆಸಿದ ಅಜಿಂಕ್ಯ ರಹಾನೆ ಅವರನ್ನು ಕೋಚ್ ರವಿ ಶಾಸ್ತ್ರಿ ಕೊಂಡಾಡಿದರು.

ನಾನು ಸಾಮಾನ್ಯವಾಗಿ ಕಣ್ಣೀರು ಸುರಿಸುವ ವ್ಯಕ್ತಿಯಲ್ಲ. ಆದರೆ ಈ ಅಸಾಮಾನ್ಯ ಗೆಲುವಿನಿಂದ ನನ್ನಲ್ಲೂ ಆನಂದಬಾಷ್ಪ ಸುರಿದಿದೆ. ಈ ಯುವಪಡೆಯ ಸಾಹಸ ಇತಿಹಾಸದಲ್ಲಿ ಅತಿಶ್ರೇಷ್ಠ ಸರಣಿ ಗೆಲುವುಗಳಲ್ಲಿ ಒಂದಾಗಿ ಗುರುತಿಸಲಿದೆ ಎಂದುಭಾವುಕರಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.