
ಕೊಲಂಬೊ: ಕ್ರಿಕೆಟ್‌ನಲ್ಲಿ ಸಾಧಿಸುವ ಆಸೆಯನ್ನು ತ್ಯಜಿಸಿ, ದುಬೈನಲ್ಲಿ ಸೇಲ್ಸ್‌ಮನ್ ಕೆಲಸಕ್ಕೆ ಹೋಗಲು ಸಜ್ಜಾಗಿದ್ದ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬದುಕು ಬದಲಾಯಿಸಿದ್ದು, ಭಾರತದ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಆತ್ಮಕತೆ ಆಧರಿಸಿದ ಚಿತ್ರ.
ತಮ್ಮ ಅಸಹಜ ಬೌಲಿಂಗ್ ಶೈಲಿಯಿಂದ ಈಗ ಈ ‘ಡಬಲ್ ಜಾಯಿಂಟೆಡ್’ ಸ್ಪಿನ್ನರ್ ತಮ್ಮ ಮೊದಲ ಟಿ20 ವಿಶ್ವಕಪ್‌ನಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಭಾನುವಾರ ಭಾರತ ವಿರುದ್ಧ ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಅವರನ್ನು ಅಸ್ತ್ರವಾಗಿ ಬಳಸಲಿದೆ.
‘ನಾನು 2016ರ ಬಾಲಿವುಡ್ ಚಿತ್ರ ‘ಎಂ.ಎಸ್‌ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ನೋಡದೇ ಹೋಗಿದ್ದಲ್ಲಿ ಇಂದು ಕ್ರಿಕೆಟ್ ಆಡುತ್ತಲೇ ಇರಲಿಲ್ಲ’ ಎಂದಿದ್ದಾರೆ 28 ವರ್ಷ ವಯಸ್ಸಿನ ತಾರಿಖ್.
ಧೋನಿ ಚಿತ್ರದ ಕಥೆ ಛಲ, ತಿರಸ್ಕಾರ, ಖ್ಯಾತಿಯು ಉತ್ತುಂಗ ಇವೆಲ್ಲವನ್ನು ತೆರೆದಿಟ್ಟಿದೆ. ಕ್ರಿಕೆಟ್‌ನಲ್ಲಿ ಏನನ್ನಾದರೂ ಸಾಧಿಸಲು ತಮಗಿನ್ನೂ ಅವಕಾಶವಿದೆ ಎಂದು ಈ ಚಿತ್ರ ತಾರಿಖ್ ಅವರಲ್ಲಿ ಭರವಸೆ ಮೂಡಿಸಿತು.
ದುಬೈಗೆ ತೆರಳಿದ ತಾರಿಖ್ ನಂತರ ‘ವಿಸ್ಮಯ ಸ್ಪಿನ್ನರ್’ ಎನಿಸಿಕೊಳ್ಳಲು ವಿಶ್ವದ ವಿವಿಧೆಡೆ ಸುತ್ತಾಡಿದರು. ಭಾರತ ವಿರುದ್ಧ ಆಡಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದ ನಂತರ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ತಾರಿಖ್ ವಿಶೇಷ ಅಸ್ತ್ರವಾಗಿ ಕಾಣಿಸಿದ್ದಾರೆ.
‘ತಾರೀಖ್ ಪಂದ್ಯದ ದಿಕ್ಕು ಬದಲಿಸಬಲ್ಲ ಆಟಗಾರ. ನಮ್ಮ ಪ್ರಮುಖ ಅಸ್ತ್ರ’ ಎಂದು ಅವರು ಹೇಳಿದ್ದಾರೆ.
ಕೇವಲ ಮೂರು ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು 4 ಟಿ20 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆ ವಿರುದ್ಧ ರಾವಲ್ಪಿಂಡಿಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದು ಇದರಲ್ಲಿ ಸೇರಿದೆ. ಕೊಲಂಬೊದಲ್ಲಿ ಅಮೆರಿಕ ವಿರುದ್ಧ 27 ರನ್ನಿಗೆ 3 ವಿಕೆಟ್ ಪಡೆದು ಪಾಕ್ ಗೆಲುವಿನ ರೂವಾರಿಯಾಗಿದ್ದೂ ಅವರೇ.
ವಿವಾದಾತ್ಮಕ ಶೈಲಿ...
ಎರಡು ವರ್ಷಗಳ ಅವಧಿಯಲ್ಲಿ ತಾರಿಖ್ ಅವರ ಅಸಹಜ ಶೈಲಿಯ ಬಗ್ಗೆ ಎರಡು ದೂರುಗಳು ಕೇಳಿಬಂದಿದ್ದವು. ಆದರೆ ಐಸಿಸಿ ಲ್ಯಾಬೊರೇಟರಿ ಈ ಬಗ್ಗೆ ಪರಿಶೀಲಿಸಿ ಶೈಲಿ ಅಕ್ರಮವಾಗಿಲ್ಲ ಎಂದು ಹೇಳಿದೆ. ಎರಡು ಸಲ ಹೆಜ್ಜೆಯಿಟ್ಟು, ಹಠಾತ್ ನಿಂತು ಕ್ಷಣಕಾಲದ ನಂತರ ಚೆಂಡನ್ನೆಸೆಯುವ ಶೈಲಿ ನಿಗೂಢವಾಗಿದೆ.
ಯುಎಇ ಟಿ20 ಲೀಗ್‌ನಲ್ಲಿ ತಾರಿಖ್ ಅವರ ಶೈಲಿಯನ್ನು ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ ಪ್ರಶ್ನಿಸಿದ್ದರು. ಆಸ್ಟ್ರೇಲಿಯಾದ ಬ್ಯಾಟರ್ ಕ್ಯಾಮರಾನ್ ಗ್ರೀನ್ ಅವರು ವಿಶ್ವಕಪ್‌ಗೆ ಮುನ್ನ ಟಿ20 ಸರಣಿಯ ಪಂದ್ಯದ ವೇಳೆ ಲಾಹೋರ್‌ನಲ್ಲಿ ಬೌಂಡರಿ ಲೈನ್ ಬಳಿ ಅವರ ಶೈಲಿಯ ಅಣಕವಾಡಿದ್ದರು. ನಂತರ ಕ್ಷಮೆಯನ್ನೂ ಕೇಳಿದ್ದರು.
ಭಾರತದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಮತ್ತು ಅಂಪೈರ್ ಅನಿಲ್ ಚೌಧರಿ ಅವರು ‘ತಾರಿಖ್ ಅವರ ಶೈಲಿ ನಿಯಮಕ್ಕೆ ಬದ್ಧವಾಗಿದೆ’ ಎಂದಿದ್ದಾರೆ. ಸಮರ್ಥನೆಯಾಗಿ ಅವರ ಶೈಲಿ ಹೇಗೆ ಕ್ರಮಬದ್ಧವಾಗಿದೆ ಎಂಬ ವಿಶ್ಲೇಷಣೆಯನ್ನು ಅಶ್ವಿನ್ ನಡೆಸಿದ್ದಾರೆ.
ಟೀಕೆಗಳಿಂದ ತಾರಿಖ್ ಕುಗ್ಗಿಲ್ಲ. ‘ನನ್ನ ಬೌಲಿಂಗ್ ಮಾಡುವ ಮೊಣಕೈ ಎರಡು ಮೂಲೆಗಳನ್ನು ಹೊಂದಿದೆ. ಇದು ಅತಿ ವಿರಳ. ಎರಡು ಬಾರಿ ನನ್ನ ಬೌಲಿಂಗ್ ಕ್ರಮಬದ್ಧವಾಗಿದೆ ಎಂದು ವರದಿ ನೀಡಲಾಗಿದೆ. ಬೌಲಿಂಗ್ ಸಮ್ಮತಾರ್ಹವಾಗಿರುವ ವಿಶ್ವಾಸವಿದೆ’ ಎಂದಿದ್ದಾರೆ. ಇಲ್ಲಿಯವರೆಗೆ ಕಷ್ಟಪಟ್ಟು ಬಂದಿದ್ದೇನೆ. ಈಗ ಆಧಾರರಹಿತ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದಿದ್ದಾರೆ.
ದುಬೈಗೆ ಹೋಗಿದ್ದ ತಾರಿಖ್ ಅವರನ್ನು ಅವರ ಗೆಳೆಯನೊಬ್ಬ ಪಾಕಿಸ್ತಾನ ಆರಂಭ ಆಟಗಾರ ಫಖರ್ ಜಮಾನ್ ಅವರಿಗೆ ಪರಿಚಯಿಸಿದ್ದ. ಅವರು ತಮ್ಮ ತವರು ಖೈಬರ್ ಫಖ್ತುಂಖ್ವಾದ ಸ್ಥಳೀಯ ಕೋಚ್ ಬಳಿ ಕರೆದೊಯ್ದರು. ‘ಜಮಾನ್ ಅವರು ಸಾಧನೆಯ ಸಂಕಲ್ಪ ಹೊಂದಿದ್ದ ಯುವಕನನ್ನು ನನ್ನ ಬಳಿ ಬಿಟ್ಟರು. ಅವರ ಬೌಲಿಂಗ್ ವಿಚಿತ್ರವಾಗಿ ಕಂಡಿತು. ಎರಡು ಹೆಜ್ಜೆ ಓಡಿ, ನಿಂತುಬೌಲಿಂಗ್ ಮಾಡುತ್ತಿದ್ದ ಅವರಿಗೆ ಸ್ವಲ್ಪ ವೇಗವಾಗಿ ಚೆಂಡೆಸೆಯುವಂತೆ ಸಲಹೆ ನೀಡಿದೆ’ ಎಂದರು ಪಾಕ್ ಮಾಜಿ ಆಟಗಾರ ವಜಾಹತ್‌ಉಲ್ಲಾ ವಾಸ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.