ಬೆಂಗಳೂರು: ಅಜಾನುಬಾಹು ಕ್ರಿಕೆಟಿಗ ಆ್ಯಂಡ್ರೂ ಸೈಮಂಡ್ಸ್ ಸ್ಪೋಟಕ ಬ್ಯಾಟಿಂಗ್ ಶೈಲಿ ಬಲದಿಂದ ಆಸ್ಟ್ರೇಲಿಯಾ ತಂಡವು ಗೆದ್ದ ಪಂದ್ಯಗಳು ಹಲವಾರು.
ತುಟಿಗೆ ಬಿಳಿಕ್ರೀಮ್ ಬಳಿದುಕೊಂಡು, ಆಫ್ರಿಕನ್ ಕೇಶಶೈಲಿಯಲ್ಲಿ ಚಂಗನೆ ಚಿಗಿದು ಚೆಂಡನ್ನು ಕ್ಯಾಚ್ ಮಾಡುತ್ತಿದ್ದ ಮಿಂಚಿನ ವೇಗದ ಫೀಲ್ಡರ್ ಮತ್ತು ಆಫ್‌ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ತಂಡಗಳಿಗೆ ನಡುಕ ಮೂಡಿಸಿದ್ದ ಪರ್ಫೆಕ್ಟ್ ಆಲ್‌ರೌಂಡರ್. ಆದರೆ, ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸೈಮಂಡ್ಸ್ ಎಂದರೆ ನೆನಪಾಗುವುದು ‘ಮಂಕಿ ಗೇಟ್’ ಪ್ರಕರಣ. 2008ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್‌ನಲ್ಲಿ ಈ ಪ್ರಕರಣ ನಡೆದಿತ್ತು.
ಆ ಪಂದ್ಯದಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ಬಳಗವು ಅನಿಲ್ ಕುಂಬ್ಳೆ ಬಳಗದ ವಿರುದ್ಧ ಮಾಡಿದ್ದ ತೆಗಳುವಿಕೆಯು (ಸ್ಲೆಡ್ಜಿಂಗ್) ಮುಗಿಲುಮುಟ್ಟಿತ್ತು. ಬಿಸಿಯೇರಿದ ವಾತಾವರಣದಲ್ಲಿ ಭಾರತದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಮತ್ತು ಸೈಮಂಡ್ಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಸೈಮಂಡ್ಸ್ ಅವರನ್ನು ಹರಭಜನ್ ‘ಮಂಕಿ’ ಎಂದು ನಿಂದಿಸಿದ್ದಾರೆ. ಇದು ಜನಾಂಗೀಯ ನಿಂದನೆ ಎಂದು ರಿಕಿ ಪಾಂಟಿಂಗ್ ದೂರು ನೀಡಿದ್ದರು. ಇದು ಬಹಳ ದೊಡ್ಡ ವಿವಾದಕ್ಕೆ ತಿರುಗಿತ್ತು. ಕ್ರಿಕೆಟ್ ಸ್ಲೆಡ್ಜಿಂಗ್‌ನಲ್ಲಿ ಅತ್ಯಂತ ಕುಖ್ಯಾತ ಪ್ರಕರಣ ಇದಾಗಿದೆ.
ಮದ್ಯಪ್ರಿಯ ರಾಯ್: ಕ್ರಿಕೆಟ್ ವಲಯದಲ್ಲಿ ‘ರಾಯ್’ ಎಂದೇ ಚಿರಪರಿಚಿತರಾಗಿದ್ದರು ಸೈಮಂಡ್ಸ್. ದೊಡ್ಡ ಸ್ನೇಹಿತರ ವಲಯವೂ ಇತ್ತು. ಅಲ್ಲದೇ ಮದ್ಯಪ್ರಿಯನೂ ಆಗಿದ್ದರು. ಆದರೆ 2005ರಲ್ಲಿ ಕಾರ್ಡಿಫ್‌ನಲ್ಲಿ ತ್ರಿಕೋನ ಸರಣಿ ನಡೆದ ಸಂದರ್ಭದಲ್ಲಿ ಬಾಂಗ್ಲಾ ಎದುರಿನ ಪಂದ್ಯದ ಹಿಂದಿನ ದಿನ ಸಂಜೆಯ ಅತಿಹಾಗಿ ಮದ್ಯ ಸೇವನೆ ಮಾಡಿದ್ದರು. ಇದರಿಂದಾಗಿ ಅವರನ್ನು ತಂಡದಿಂದ ಅಮಾನತು ಮಾಡಲಾಗಿತ್ತು.
ಮೀನು ಹಿಡಿಯಲು ಹೋಗಿದ್ದು: 2008ರಲ್ಲಿ ಆಸ್ಟ್ರೇಲಿಯಾದಲ್ಲಿಯೇ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಅವರು ತಂಡದ ಸಭೆಗೆ ಗೈರುಹಾಜರಾಗಿ ಮೀನು ಹಿಡಿಯಲು ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಈ ನಡವಳಿಕೆಯಿಂದಾಗಿ ಅವರನ್ನು ಸರಣಿಯಿಂದ ಹೊರಹಾಕಲಾಗಿತ್ತು. ಅದೇ ವರ್ಷ ಆರಂಭವಾಗಲಿದ್ದ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವು ₹ 5.40 ಕೋಟಿಗೆ ಅವರನ್ನು ಖರೀದಿಸಿತ್ತು.
2009ರಲ್ಲಿಯೂ ಅಶಿಸ್ತಿನ ಕಾರಣಕ್ಕೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡರು. ಇದು ಅವರ ವೃತ್ತಿ ಬದುಕನ್ನು ಮೊಟಕುಗೊಳಿಸಲು ಕಾರಣವಾಯಿತು.
ಉತ್ತಮ ಫೀಲ್ಡರ್: ವಿವಾದಗಳ ಹೊರತಾಗಿ ಸೈಮಂಡ್ಸ್ ತಮ್ಮ ವೃತ್ತಿ ಬದುಕಿನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರಂತಹ ಉತ್ತಮ ಫೀಲ್ಡರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಬೌಂಡರಿ ಲೈನ್‌ನಿಂದ ನೇರ ಥ್ರೋ ಮಾಡುತ್ತಿದ್ದ ಅವರ ಭುಜಬಲಪರಾಕ್ರಮಕ್ಕೆ ಹಲವರು ರನೌಟ್ ಆಗಿದ್ದು ಇತಿಹಾಸ.
ಸೈಮಂಡ್ಸ್ ಸಾಧನೆ
ಮಾದರಿ;ಪಂದ್ಯ;ರನ್;ಶ್ರೇಷ್ಠ;ಸ್ಟ್ರೈಕ್‌ರೇಟ್;ಶತಕ;ಅರ್ಧಶತಕ;ಬೌಂಡರಿ;ಸಿಕ್ಸರ್;ವಿಕೆಟ್
ಟೆಸ್ಟ್;26;1462;162*;64.80;2;10;154;28;24
ಏಕದಿನ;198;5088;156;92.44;6;30;449;103;133
ಟಿ20;14;337;85*;169.34;–;2;33;10;8
ಐಪಿಎಲ್:39;974;117;129.87;1;5;74;41;20
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.