ADVERTISEMENT

ಚಾಂಪಿಯನ್ಸ್‌ ಟ್ರೋಫಿ: ದುಬೈನಿಂದ ತವರಿಗೆ ಸದ್ದುಗದ್ದಲವಿಲ್ಲದೇ ಮರಳಿದ ಆಟಗಾರರು

ಪಿಟಿಐ
Published 11 ಮಾರ್ಚ್ 2025, 13:44 IST
Last Updated 11 ಮಾರ್ಚ್ 2025, 13:44 IST
   

ನವದೆಹಲಿ: ನಾಯಕ ರೋಹಿತ್‌ ಶರ್ಮಾ ಸೇರಿದಂತೆ, ದುಬೈನಲ್ಲಿ ಭಾನುವಾರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡ ಭಾರತ ಕ್ರಿಕೆಟ್‌ ತಂಡದ ಆಟಗಾರರು ಹೆಚ್ಚಿನ ಸದ್ದುಗದ್ದಲವಿಲ್ಲದೇ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗಿನ ಜಾವ ತವರಿಗೆ ಹಿಂತಿರುಗಿದ್ದಾರೆ.

ರೋಹಿತ್ ಶರ್ಮಾ, ಪತ್ನಿ, ಪುತ್ರಿಯೊಂದಿಗೆ ಸೋಮವಾರ ರಾತ್ರಿ ಮುಂಬೈಗೆ ಬಂದಿಳಿದಿದರು. ಅವರ ನಾಯಕತ್ವದಲ್ಲಿ ಭಾರತ ತಂಡ 9 ತಿಂಗಳ ಅವಧಿಯಲ್ಲಿ ಎರಡನೇ ಐಸಿಸಿ ಟ್ರೋಫಿ ಗೆದ್ದುಕೊಂಡಿತ್ತು.

ಮಾರ್ಚ್‌ 22ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್‌) ಟೂರ್ನಿ ಆರಂಭವಾಗಲಿದ್ದು, ತಂಡವನ್ನು ಕೂಡಿಕೊಳ್ಳುವ ಮೊದಲು ಆಟಗಾರರಿಗೆ ವಾರದ ಕಾಲ ಬಿಡುವು ದೊರೆಯಲಿದೆ.

ADVERTISEMENT

‘ಕುಟುಂಬ ಸದಸ್ಯರ ಜೊತೆ ಬಂದಿದ್ದ ಆಟಗಾರರು ದುಬೈನಿಂದ ಸೋಮವಾರ ನಿರ್ಗಮಿಸಿದ್ದಾರೆ. ಉಳಿದ  ಕೆಲವು ಆಟಗಾರರು ಒಂದೆರಡು ದಿನ ಇಲ್ಲಿ ಉಳಿದುಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

‘ಎರಡು ತಿಂಗಳ ಕಾಲ ನಡೆಯಲಿರುವ ಐಪಿಎಲ್‌ಗೆ ಮೊದಲು ವಿಶ್ರಾಂತಿ ಪಡೆಯಲು ಆಟಗಾರರು ಬಯಸಿದ ಕಾರಣ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೂಡ ಆಟಗಾರರಿಗೆ ಯಾವುದೇ ಸನ್ಮಾನ ಸಮಾರಂಭ ಹಮ್ಮಕೊಂಡಿಲ್ಲ. ಈ ಹಿಂದೆ, 2024ರ ಮಧ್ಯದಲ್ಲಿ ಬಾರ್ಬಾಡೋಸ್‌ನಲ್ಲಿ ಟಿ20 ವಿಶ್ವಕಪ್‌ ಗೆದ್ದುಕೊಂಡು ಬಂದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಭರ್ಜರಿ ಸ್ವಾಗತ, ಅಭಿನಂದನೆ ಹಮ್ಮಕೊಳ್ಳಲಾಗಿತ್ತು. ಆ ತಂಡದ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದರು.

ವಾಪಸಾದ ಗಂಭೀರ್:

ತಂಡದ ಮುಖ್ಯ ಕೋಚ್‌ ಗೌತಮ್ ಗಂಭೀರ್ ಮತ್ತು ವೇಗದ ಬೌಲರ್ ಹರ್ಷಿತ್ ರಾಣಾ ಅವರು ಸೋಮವಾರ ರಾತ್ರಿ ನವದೆಹಲಿಗೆ ಬಂದಿಳಿದರು.

ಭಾರತ ತಂಡ ದುಬೈ ಕ್ರೀಡಾಂಗಣದಿಂದ ಭಾನುವಾರ ಫೈನಲ್ ಮುಗಿಸಿ ಟೀಮ್‌ ಹೋಟೆಲ್‌ಗೆ ಮರಳಿದ ಕೆಲವೇ ಹೊತ್ತಿನಲ್ಲಿ ತಾರಾ ಆಟಗಾರ ವಿರಾಟ್‌ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅಂದು  ರಾತ್ರಿಯೇ ದುಬೈನಿಂದ ನಿರ್ಗಮಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಶ್ರೇಯಸ್‌ ಅಯ್ಯರ್ ಅವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದು, ಇದೇ 16ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಟೂರ್ನಿಯಲ್ಲಿ ಅಜೇಯವಾಗುಳಿದಿದ್ದ ಏಕೈಕ ತಂಡವಾಗಿತ್ತು. ಪಾಕಿಸ್ತಾನ ಈ ಟೂರ್ನಿಯ ಆತಿಥ್ಯ ವಹಿಸಿದ್ದರೂ, ಹೈಬ್ರಿಡ್‌ ಮಾದರಿಯ ಅನುಸಾರ ಭಾರತ ತಂಡ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.