ADVERTISEMENT

ವಿಜಯ್ ಹಜಾರೆ ಟ್ರೋಫಿ| ಮಯಂಕ್, ಪಡಿಕ್ಕಲ್ ಶತಕ: ಕರ್ನಾಟಕ ತಂಡದ ಯಶಸ್ಸಿನ ಓಟ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 14:16 IST
Last Updated 31 ಡಿಸೆಂಬರ್ 2025, 14:16 IST
   

ಅಹಮದಾಬಾದ್: ಅಮೋಘ ಲಯದಲ್ಲಿರುವ ದೇವದತ್ತ ಪಡಿಕ್ಕಲ್ (113, 116ಎ) ಅವರು ನಾಲ್ಕು ಪಂದ್ಯಗಳಲ್ಲಿ ಮೂರನೇ ಶತಕ ಬಾರಿಸಿದರೆ, ನಾಯಕ ಮಯಂಕ್ ಅಗರವಾಲ್ (132, 124ಎ) ಎರಡನೇ ಶತಕ ಗಳಿಸಿದರು. ಈ ಅನುಭವಿ ಆಟಗಾರರು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಪುದುಚೇರಿ ವಿರುದ್ಧ ಪಂದ್ಯದಲ್ಲಿ ಕರ್ನಾಟಕದ ಗೆಲುವಿನಲ್ಲಿ ಗಮನಸೆಳೆದರು.

ಎಡಿಎಸ್‌ಎ ರೈಲ್ವೆ ಮೈದಾನದಲ್ಲಿ ಬುಧವಾರ ನಡೆದ ಎಲೀಟ್ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 67 ರನ್‌ಗಳ ಜಯ ಪಡೆಯಿತು. ಇದು ಮಯಂಕ್ ಸಾರಥ್ಯದ ತಂಡಕ್ಕೆ ಸತತ ನಾಲ್ಕನೇ ಗೆಲುವು. ಮಧ್ಯಪ್ರದೇಶ ಸಹ ನಾಲ್ಕು ಗೆಲುವು ಸಾಧಿಸಿದ್ದು ನೆಟ್‌ರನ್‌ ರೇಟ್ ಆಧಾರದಲ್ಲಿ ಅಗ್ರಸ್ಥಾನಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ಈ ಹಿಂದಿನ ಮೂರು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ್ದ ಕರ್ನಾಟಕ, ಇಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದಕ್ಕೆ ತಕ್ಕಂತೆ ಮಯಂಕ್ ಮತ್ತು ಪಡಿಕ್ಕಲ್ ಮೊದಲ ವಿಕೆಟ್‌ಗೆ 228 ರನ್‌ಗಳ (37.5 ಓವರ್) ಭರ್ಜರಿ ಜೊತೆಯಾಟವಾಡಿದರು. ತಂಡ 4 ವಿಕೆಟ್‌ಗೆ 363 ರನ್‌ಗಳ ಭಾರಿ ಮೊತ್ತ ದಾಖಲಿಸಿತು.

ADVERTISEMENT

ಒಂದು ಹಂತದಲ್ಲಿ ಪುದುಚೇರಿ 20 ಓವರುಗಳಲ್ಲಿ 1 ವಿಕೆಟ್‌ಗೆ 108 ರನ್ ಗಳಿಸಿ ಹೋರಾಟ ನಡೆಸುವಂತೆ ಕಂಡಿತು. ಆದರೆ ಕರುಣ್ ನಾಯರ್ (38ಕ್ಕೆ2) ಈ ಹಂತದಲ್ಲಿ ಎರಡು ವಿಕೆಟ್‌ ಪಡೆದು ಪುದುಚೇರಿ ಹೋರಾಟಕ್ಕೆ ಕಡಿವಾಣ ಹಾಕಿದರು. ನಂತರ ವಿದ್ವತ್ ಕಾವೇರಪ್ಪ (30ಕ್ಕೆ2) ಮತ್ತು ಮನ್ವಂತ್ ಕುಮಾರ್ (52ಕ್ಕೆ3) ನಿಯಮಿತವಾಗಿ ವಿಕೆಟ್‌ಗಳನ್ನು ಪಡೆದರು.

ಆರಂಭ ಆಟಗಾರ ನೇಯನ್ ಶ್ಯಾಮ್ ಕಂಗಾಯನ್ (68, 66ಎ) ಮತ್ತು ಕೆಳ ಮಧ್ಯಮ ಕ್ರಮಾಂಕದಲ್ಲಿ ಜಯಂತ್ ಯಾದವ್ (54, 35ಎ) ಅವರು ಹೋರಾಟ ತೋರಿದರು. ತಂಡ ಕೊನೆಯ ಎಸೆತದಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು.

ಇದಕ್ಕೆ ಮೊದಲು, ಅಗರವಾಲ್ ಮತ್ತು ಪಡಿಕ್ಕಲ್ ಆಕರ್ಷಕ ಶತಕಗಳ ಮೂಲಕ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಮಯಂಕ್ 15 ಬೌಂಡರಿಗಳ ಜೊತೆ 2 ಸಿಕ್ಸರ್ ಬಾರಿಸಿದರೆ, ದೇವದತ್ತ ಇನಿಂಗ್ಸ್‌ನಲ್ಲಿ 10 ಬೌಂಡರಿಗಳ ಜೊತೆಗೆ ನಾಲ್ಕು ಸಿಕ್ಸರ್‌ಗಳು ಒಳಗೊಂಡಿದ್ದವು. ಲಯದಲ್ಲಿರುವ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಸಹ ಬಿರುಸಿನ ಆಟವಾಡಿ 34 ಎಸೆತಗಳಲ್ಲಿ 62 ರನ್ ಸೂರೆ ಮಾಡಿದರು. ಇದರಲ್ಲಿ ನಾಲ್ಕು ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದವು. ಯುವತಾರೆ ಸ್ಮರಣ್ ರವಿಚಂದ್ರನ್ (21) ಮತ್ತು ಅಭಿನವ್‌ ಮನೋಹರ್ (ಅಜೇಯ 21, 6ಎ) ಕರ್ನಾಟಕದ ಮೊತ್ತ 350 ದಾಟಲು ನೆರವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.