ADVERTISEMENT

ತಾರೆಗಳ ಆಟವೋ; ಮಳೆಯ ಆರ್ಭಟವೋ?

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭ ಇಂದು; ಕರ್ನಾಟಕ–ಹೈದರಾಬಾದ್ ಹಣಾಹಣಿ

ಗಿರೀಶದೊಡ್ಡಮನಿ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
ಅಭ್ಯಾಸದಲ್ಲಿ ಕೋಚ್ ಯರೇಗೌಡ, ಕೃಷ್ಣಪ್ಪ ಗೌತಮ್ ಮತ್ತು ಕೆ.ಎಲ್. ರಾಹುಲ್   –ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ
ಅಭ್ಯಾಸದಲ್ಲಿ ಕೋಚ್ ಯರೇಗೌಡ, ಕೃಷ್ಣಪ್ಪ ಗೌತಮ್ ಮತ್ತು ಕೆ.ಎಲ್. ರಾಹುಲ್   –ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ   

ಬೆಂಗಳೂರು: ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಅಂಬಟಿ ರಾಯುಡು, ಮೊಹಮ್ಮದ್ ಸಿರಾಜ್..

ಮಂಗಳವಾರ ಬೆಂಗಳೂರು ಹೊರವಲಯದ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ (ಏಕದಿನ ಮಾದರಿ)ಯ ‘ಎ’ ಗುಂಪಿನಲ್ಲಿ ಈ ತಾರಾ ವರ್ಚಸ್ಸಿನ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವ ಛಲ ಇವರದ್ದು. ಏಕಾಗ್ರತೆ ಮತ್ತು ಲಯದ ಕೊರತೆ ಅನುಭವಿಸುತ್ತಿರುವ ಕೆ.ಎಲ್. ರಾಹುಲ್ ಅವರಿಗೆ ಇದು ಮಹತ್ವದ ಟೂರ್ನಿಯಾಗಿದೆ. ಇಲ್ಲಿ ಕರ್ನಾಟಕ ತಂಡದ ಉಪನಾಯಕರಾಗಿ ಅಂಗಳಕ್ಕಿಳಿಯಲಿದ್ದಾರೆ. ಮನೀಷ್ ಪಾಂಡೆ ನಾಯಕತ್ವದ ತಂಡವು ಅಂಬಟಿ ರಾಯುಡು ಅವರ ಹೈದರಾಬಾದ್ ಬಳಗವನ್ನು ಎದುರಿಸಲಿದೆ.

ಹೋದ ಭಾನುವಾರ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡಿದ ಭಾರತ ತಂಡದಲ್ಲಿದ್ದ ರಾಹುಲ್ ಮತ್ತು ಮನೀಷ್ ಅವರಿಗೆ ಹನ್ನೊಂದರ ಬಳಗದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ನಿಯಮಿತ ಓವರ್‌ಗಳ ತಂಡಕ್ಕೆ ಮರಳಲು ಇಲ್ಲಿ ಉತ್ತಮ ಸಾಧನೆ ಮಾಡುವ ಒತ್ತಡ ಅವರ ಮೇಲಿದೆ.

ADVERTISEMENT

ಆದರೆ, ಪ್ರತಿಭಾವಂತ ಯುವಬ್ಯಾಟ್ಸ್‌ಮನ್‌ಗಳಾದ ಕೆ.ವಿ. ಸಿದ್ಧಾರ್ಥ್, ಅಭಿಷೇಕ್ ರೆಡ್ಡಿ, ದೇವದತ್ತ ಪಡಿಕ್ಕಲ್ ಅವರೊಂದಿಗೆ ಅನುಭವಿಗಳು ಪೈಪೋಟಿ ನಡೆಸಬೇಕಿದೆ. ಈ ಬಾರಿ ಮಧ್ಯಮವೇಗಿ ಆರ್. ವಿನಯಕುಮಾರ್ ಅವರು ತಂಡದಲ್ಲಿಲ್ಲ. ಈ ಹಿಂದೆ ವಿನಯ್ ನಾಯಕತ್ವದಲ್ಲಿ ಎರಡು ಸಲ ಕಪ್ ಗೆದ್ದಿತ್ತು. 2017–18ರಲ್ಲಿ ಗೆದ್ದಾಗ ಕರುಣ್ ನಾಯರ್ ನಾಯಕತ್ವ ವಹಿಸಿದ್ದರು.

ವಿನಯ್ ಈಗ ಪಾಂಡಿಚೇರಿಗೆ ವಲಸೆ ಹೋಗಿದ್ದಾರೆ. ಆದ್ದರಿಂದ ಬೌಲಿಂಗ್ ವಿಭಾಗದ ಹೊಣೆಯು ಅಭಿಮನ್ಯು ಮಿಥುನ್ ಮೇಲೆ ಇದೆ. ಪ್ರಸಿದ್ಧ ಕೃಷ್ಣ, ಹೋದ ರಣಜಿ ಋತುವಿನಲ್ಲಿ ಮಿಂಚಿದ್ದ ರೋನಿತ್ ಮೋರೆ ಅವರ ಮೇಲೆ ಅಪಾರ ನಿರೀಕ್ಷೆಗಳಿವೆ. ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಮತ್ತು ಪವನ್ ದೇಶಪಾಂಡೆ ಅವರು ಕೂಡ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆಟಗಾರರು. ಆದರೆ ಮಳೆಯು ಅವಕಾಶ ಕೊಡಬೇಕಷ್ಟೇ.

ಆದರೆ ಹೈದರಾಬಾದ್ ತಂಡದ ಕಥೆ ಇದಕ್ಕೆ ತದ್ವಿರುದ್ಧವಿದೆ. ಕೆಲವು ತಿಂಗಳುಗಳ ಹಿಂದೆ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯುಡು ತಮ್ಮ ನಿರ್ಧಾರ ಬದಲಿಸಿ ಮರಳಿದ್ದಾರೆ. ತಂಡದಲ್ಲಿರುವ ಬಹುತೇಕ ಯುವ ಆಟಗಾರರನ್ನು ಬೆಳೆಸುವ ಹೊಣೆ ಅವರ ಮೇಲೆ ಇದೆ. ಸಿರಾಜ್ ಅಹಮದ್ ಮೇಲೆ ಬೌಲಿಂಗ್ ದಾಳಿಯ ಜವಾಬ್ದಾರಿ ಇದೆ.

ತಂಡಗಳು: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ.ಸಿದ್ಧಾರ್ಥ್, ಪ್ರವೀಣ ದುಬೆ , ಪವನ್ ದೇಶಪಾಂಡೆ , ಅಭಿಷೇಕ್ ರೆಡ್ಡಿ, ಕೃಷ್ಣಪ್ಪ ಗೌತಮ್ , ಜೆ. ಸುಚಿತ್, ಅಭಿಮನ್ಯು ಮಿಥುನ್ , ಪ್ರಸಿದ್ಧ ಎಂ ಕೃಷ್ಣ, ರೋನಿತ್ ಮೋರೆ , ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ಶ್ರೇಯಸ್ ಗೋಪಾಲ್, ವಿ. ಕೌಶಿಕ್, ಯರೇ ಕೆ ಗೌಡ (ಕೋಚ್), ಎಸ್‌ ಅರವಿಂದ್ (ಬೌಲಿಂಗ್ ಕೋಚ್), ಶಬರೀಶ್ ಪಿ. ಮೋಹನ್ (ಫೀಲ್ಡಿಂಗ್ ಕೋಚ್), ಅನುತೋಷ್ ಪೋಳ (ಮ್ಯಾನೇಜರ್), ಎ. ರಮೇಶ್ ರಾವ್ (ಲಾಗಿಸ್ಟಿಕ್ಸ್‌ ಮ್ಯಾನೇಜರ್), ಜಾಬ ಪ್ರಭು (ಫಿಸಿಯೊ), ರಕ್ಷಿತ್ (ಕಂಡಿಷನಿಂಗ್ ಕೋಚ್), ಸಿ.ಎಂ. ಸೋಮಸುಂದರ್ (ಮಸಾಜ್ ಥೆರಪಿಸ್ಟ್‌), ವಿನೋದ್ (ವಿಡಿಯೊ ಅನಾಲಿಸ್ಟ್).

ಹೈದರಾಬಾದ್: ಅಂಬಟಿ ರಾಯುಡು (ನಾಯಕ), ಆಶಿಶ್ ಶ್ರೀವಾಸ್ತವ, ಅಭಿರಥ್ ರೆಡ್ಡಿ, ಚಂದನ್ ಸಹಾನಿ, ಕೆ.ಎಸ್‌.ಕೆ. ಚೈತನ್ಯ, ಪಿ.ಎಸ್. ಚೈತನ್ಯರೆಡ್ಡಿ, ತನಯ್ ತ್ಯಾಗರಾಜನ್, ನಿತೀಶ್ ರೆಡ್ಡಿ, ವರುಣ್, ಸಿ. ಹಿತೇಶ್ ಯಾದವ್, ಫೈಜಲ್ ಅಳ್ವಿ, ಮೊಹುಲ್ ಭೌಮಿಕ್, ಜಿ. ಅನಿಕೇತ್‌ ರೆಡ್ಡಿ, ರವಿಕಿರಣ, ಶ್ರೇಯಸ್ ವಾಲಾ, ಆಕಾಶ್ ಭಂಡಾರಿ, ಸಿ.ವಿ. ಮಿಲಿಂದ್, ಮೆಹದಿ ಹಸನ್, ಅಕ್ಷತ್ ರೆಡ್ಡಿ, ತನ್ಮಯ್ ಅಗರವಾಲ್, ಅಬ್ದುಲ್ ಇಲಾ ಅಲ್ ಖುರೇಷಿ, ಶಶಿಧರ್ ರೆಡ್ಡಿ, ಬಿ. ಸಂದೀಪ್, ಹಿಮಾಲಯ ಅಗರವಾಲ್, ಸುಮಂತ್ ಕೊಳ್ಳಾ. ಕೆ. ರೋಹಿತ್ ರಾಯುಡು, ಸಾಕೇತ್, ಟಿ. ರವಿತೇಜಾ, ಟಿ.ಪಿ. ಅನಿರುದ್ಧ ಶ್ರೀವತ್ಸ, ಮಿಖಿಲ್ ಜೈಸ್ವಾಲ್, ರಾಜಮಣಿ ಪ್ರಸಾದ್, ಟಿ.ಸಂತೋಷಗೌಡ, ಜೆ. ಮಲ್ಲಿಕಾರ್ಜುನ, ಮೊಹಮ್ಮದ್ ಸಿರಾಜ್, ಜಾವೀದ್ ಅಲಿ.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.