ADVERTISEMENT

ಸಮರ್ಥ್ ಶತಕ ವ್ಯರ್ಥ; ಬರೋಡಾಗೆ ಜಯ

ವಿಜಯ ಹಜಾರೆ ಠ್ರೋಫಿ ಏಕದಿನ ಕ್ರಿಕೆಟ್: ಹಾಲಿ ಚಾಂಪಿಯನ್‌ ತಂಡಕ್ಕೆ ಮತ್ತೊಂದು ಸೋಲು

ಗಿರೀಶದೊಡ್ಡಮನಿ
Published 26 ಸೆಪ್ಟೆಂಬರ್ 2018, 19:41 IST
Last Updated 26 ಸೆಪ್ಟೆಂಬರ್ 2018, 19:41 IST
ಬರೋಡಾದ ಕೇದಾರ್ ದೇವಧರ್ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ
ಬರೋಡಾದ ಕೇದಾರ್ ದೇವಧರ್ ಬ್ಯಾಟಿಂಗ್ ವೈಖರಿ  –ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ   

ಬೆಂಗಳೂರು: ರವಿಕುಮಾರ್ ಸಮರ್ಥ್ ಗಳಿಸಿದ ಸುಂದರ ಶತಕದ ಅಡಿಪಾಯದ ಮೇಲೆ ಗೆಲುವಿನ ಸೌಧ ಕಟ್ಟಲು ಕರ್ನಾಟಕ ತಂಡಕ್ಕೆ ಸಾಧ್ಯವಾಗಲಿಲ್ಲ.

ಅದರಿಂದಾಗಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಲೀಟ್ ‘ಎ’ ಗುಂಪಿನಲ್ಲಿ ‘ಹಾಲಿ ಚಾಂಪಿಯನ್’ ಕರ್ನಾಟಕ ಮತ್ತೊಂದು ಸೋಲಿಗೆ ಶರಣಾಯಿತು. ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ (ರಾಜಾನುಕುಂಟೆ) ನಡೆದ ಪಂದ್ಯದಲ್ಲಿ ಕೇದಾರ್ ದೇವಧರ್ ಅವರ ಶತಕದ ಬಲದಿಂದ ಬರೋಡಾ ತಂಡವು 7 ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಬರೋಡಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು 50 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 237 ರನ್‌ಗಳ ಮೊತ್ತ ಗಳಿಸಿತು. ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಅಭಿಷೇಕ್ ರೆಡ್ಡಿ ಔಟಾದರು. ಆಗ ಕ್ರೀಸ್‌ಗೆ ಬಂದ ಸಮರ್ಥ್ (102; 125ಎಸೆತ, 8ಬೌಂಡರಿ) ತಾಳ್ಮೆಯ ಆಟವಾಡಿದರು.

ADVERTISEMENT

ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ಔಟಾಗುವ ಮುನ್ನ ತಂಡಕ್ಕೆ ಹೋರಾಟದ ಮೊತ್ತ ಗಳಿಸಿಕೊಟ್ಟರು. ಮಯಂಕ್ ಅಗರವಾಲ್ (34 ರನ್), ಕರುಣ್ ನಾಯರ್ (37 ರನ್) ಮತ್ತು ಕೃಷ್ಣಪ್ಪ ಗೌತಮ್ (28; 20ಎಸೆತ, 1ಬೌಂಡರಿ, 2ಸಿಕ್ಸರ್) ಅವರನ್ನು ಬಿಟ್ಟರೆ ಉಳಿದವರಿಂದ ಉಪಯುಕ್ತ ಕಾಣಿಕೆ ಲಭಿಸಲಿಲ್ಲ.

ಆದರೆ ಈ ಗುರಿಯನ್ನು ಬರೋಡಾ ತಂಡವು ನಿರಾಯಾಸವಾಗಿ ಮುಟ್ಟಿತು. ಆರಂಭಿಕ ಬ್ಯಾಟ್ಸ್‌ಮನ್ ಕೇದಾರ್ ದೇವಧರ್ (123; 128ಎಸೆತ, 11ಬೌಂಡರಿ, 2ಸಿಕ್ಸರ್) ಅವರ ಆಟದ ಬಲದಿಂದ ಜಯಿಸಿತು. ಬರೋಡಾ ಇನಿಂಗ್ಸ್‌ ಸಂದರ್ಭದಲ್ಲಿ ಮಳೆ ಸುರಿದಿದ್ದರಿಂದ 17 ನಿಮಿಷಗಳ ಆಟಕ್ಕೆ ವ್ಯತ್ಯಯವಾಯಿತು. ಅದಕ್ಕಾಗಿ ವಿ. ಜಯದೇವನ್ ನಿಯಮದ ಪ್ರಕಾರ ಗೆಲುವಿನ ಗುರಿಯನ್ನು 47 ಓವರ್‌ಗಳಲ್ಲಿ 227 ರನ್‌ಗಳಿಗೆ ನಿಗದಿಪಡಿಸಲಾಯಿತು. 21 ಎಸೆತಗಳು ಬಾಕಿಯಿರುವಂತೆಯೇ ಬರೋಡಾ ತಂಡವು ಜಯಿಸಿತು.

ಟೂರ್ನಿಯಲ್ಲಿ ಮಹಾರಾಷ್ಟ್ರ, ಮುಂಬೈ ತಂಡಗಳ ಎದುರು ವಿನಯಕುಮಾರ್ ಬಳಗವು ಸೋಲನುಭವಿಸಿದೆ. ಗೋವಾ ವಿರುದ್ಧದ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಅದರಿಂದಾಗಿ ಎರಡು ಪಾಯಿಂಟ್‌ಗಳು ಲಭಿಸಿದ್ದವು. ಬರೋಡಾ ಎದುರು ಸ್ಟುವರ್ಟ್‌ ಬಿನ್ನಿ, ಪವನ್ ದೇಶಪಾಂಡೆ ಅವರಿಗೆ ವಿಶ್ರಾಂತಿ ನೀಡಿ, ಅಭಿಷೇಕ್ ರೆಡ್ಡಿ ಮತ್ತು ಎಂ.ಜಿ. ನವೀನ್ ಅವರಿಎ ಅವಕಾಶ ನೀಡಲಾಯಿತು. ಆದರೆ ಅದರಿಂದ ಹೆಚ್ಚು ಲಾಭವಾಗಲಿಲ್ಲ. ಅತೀತ್ ಶೇಠ್ (42ಕ್ಕೆ4) ಅವರ ಬೌಲಿಂಗ್ ಮುಂದೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಲಯ ಕಳೆದುಕೊಂಡರು.

ಕರ್ನಾಟಕದ ಅನುಭವಿ ಬೌಲರ್‌ಗಳಾದ ವಿನಯಕುಮಾರ್, ಅಭಿಮನ್ಯು ಮಿಥುನ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಪ್ರಸಿದ್ಧ ಕೃಷ್ಣ ಅವರು ಬರೋಡಾದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವಲ್ಲಿ ಸಫಲರಾಗಲಿಲ್ಲ. ಅದರಲ್ಲೂ ಕೇದಾರ್ ಅವರ ಆಕರ್ಷಕ ಸ್ಕ್ವೇರ್ ಕಟ್‌ಗಳು, ಲೇಟ್‌ ಕಟ್‌ ಮತ್ತು ಲೆಗ್‌ ಗ್ಲಾನ್ಸ್‌ಗಳ ಆಟಕ್ಕೆ ಕಡಿವಾಣ ಹಾಕಲು ಪರದಾಡಿದರು. ಫೀಲ್ಡಿಂಗ್ ಲೋಪಗಳೂ ನಡೆದವು.

ಈ ಸೋಲಿನಿಂದಾಗಿ ಕರ್ನಾಟಕವು ನಾಕೌಟ್ ಹಂತಕ್ಕೆ ಸಾಗುವ ಹಾದಿಯು ಮತ್ತಷ್ಟು ಜಟಿಲಗೊಂಡಿದೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಿಯೂ ಗೆಲ್ಲುವ ಒತ್ತಡವಿದೆ.

ಮಹಾರಾಷ್ಟ್ರಕ್ಕೆ ಜಯ
ರುತುರಾಜ್ ಗಾಯಕವಾಡ್ (84; 93ಎಸೆತ, 9ಬೌಂಡರಿ, 1ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಮಹಾರಾಷ್ಟ್ರ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೈಲ್ವೆಸ್ ತಂಡದ ಎದುರು 7 ವಿಕೆಟ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ರೈಲ್ವೆಸ್: 48.2 ಓವರ್‌ಗಳಲ್ಲಿ 180 (ಮೃಣಾಲ್ ದೇವಧರ್ 64, ಪ್ರಶಾಂತ್ ಅವಸ್ತಿ 25, ಅನೀಶ್ ಯಾದವ್ 30, ಮನೀಷ್ ರಾವ್ 28, ಅನುಪಮ್ ಸಂಕ್ಲೇಚಾ 16ಕ್ಕೆ2, ಸಮದ್ ಫಲ್ಲಾ 33ಕ್ಕೆ2, ಸತ್ಯಜೀತ್ ಬಚಾವ್ 38ಕ್ಕೆ2, ಶಂಸ್ ಖಾಜಿ 33ಕ್ಕೆ2) ಮಹಾರಾಷ್ಟ್ರ: 41.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 186 (ರುತುರಾಜ್ ಗಾಯಕವಾಡ 84, ಜೈ ಪಂಡೆ 38, ಮಂದಾರ್ ಭಂಡಾರಿ 29, ಅಂಕಿತ್ ಭಾವ್ನೆ 21, ಚಂದ್ರಕಾಂತ್ ಸಕುರೆ 33ಕ್ಕೆ1, ಅವಿನಾಶ್ ಯಾದವ್ 39ಕ್ಕ2) ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 7 ವಿಕೆಟ್‌ಗಳ ಜಯ.

ಆಲೂರು ಕ್ರೀಡಾಂಗಣ: ವಿದರ್ಭ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 297 (ಫೈಜ್ ಫಜಲ್ 91, ಅಥರ್ವ್ ತೈಡೆ ಔಟಾಗದೆ 148, ಗಣೇಶ್ ಸತೀಶ್ 12, ಉಮೇಶ್ ಯಾದವ್ 16. ವಿನಯ್ ಗಳೆತಿಯಾ 51ಕ್ಕೆ2, ಆಯುಷ್ ಜಮ್ವಾಲ್ 52ಕ್ಕೆ2), ಹಿಮಾಚಲ ಪ್ರದೇಶ : 47.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 298 (ಪ್ರಿಯಾಂಶು ಖಂಡುರಿ 63, ಪ್ರಶಾಂತ್ ಚೋಪ್ರಾ 15, ಅಂಕುಶ್ ಬೇನ್ಸ್‌ ಔಟಾಗದೆ 173, ಸುಮಿತ್ ವರ್ಮಾ 12, ಅಕ್ಷಯ್ ವಾಖರೆ 60ಕ್ಕೆ2) ಫಲಿತಾಂಶ: ಹಿಮಾಚಲ ಪ್ರದೇಶಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.