ADVERTISEMENT

ನಾಯಕ ಸಮರ್ಥ್ ಅಜೇಯ ಶತಕ; ಕರ್ನಾಟಕಕ್ಕೆ 267 ರನ್ ಅಂತರದ ಭರ್ಜರಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2021, 11:33 IST
Last Updated 22 ಫೆಬ್ರುವರಿ 2021, 11:33 IST
ಕರ್ನಾಟಕ ನಾಯಕ ರವಿಕುಮಾರ್ ಸಮರ್ಥ್ (ಸಂಗ್ರಹ ಚಿತ್ರ)
ಕರ್ನಾಟಕ ನಾಯಕ ರವಿಕುಮಾರ್ ಸಮರ್ಥ್ (ಸಂಗ್ರಹ ಚಿತ್ರ)   

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 'ಸಿ' ಗುಂಪಿನ ಎರಡನೇ ಪಂದ್ಯದಲ್ಲಿ ನಾಯಕ ರವಿಕುಮಾರ್ ಸಮರ್ಥ್ (158*) ಬಾರಿಸಿದ ಅಜೇಯ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು ಬಿಹಾರ ವಿರುದ್ಧ 267 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ.

ಸೋಮವಾರ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ನಾಯಕ ಸಮರ್ಥ್ ಶತಕ ಮತ್ತು ದೇವದತ್ತ ಪಡಿಕ್ಕಲ್ (97) ಹಾಗೂ ಕೃಷ್ಣಮೂರ್ತಿ ಸಿದ್ಧಾರ್ಥ್ (76) ಬಿರುಸಿನ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 354 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ಸಮರ್ಥ್ ಹಾಗೂ ಪಡಿಕ್ಕಲ್ ಮೊದಲ ವಿಕೆಟ್‌ಗೆ 29.3 ಓವರ್‌ಗಳಲ್ಲೇ 153 ರನ್‌ಗಳ ಬೃಹತ್ ಜೊತೆಯಾಟ ನೀಡಿದ್ದರು. ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದ ಪಡಿಕ್ಕಲ್ 98 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 97 ರನ್ ಗಳಿಸಿದರು.

ADVERTISEMENT

ಇನ್ನೊಂದೆಡೆ ಅಮೋಘ ಬ್ಯಾಟಿಂಗ್ ಮುಂದುವರಿಸಿದ ಸಮರ್ಥ್ ಆಕರ್ಷಕ ಶತಕ ಸಾಧನೆ ಮಾಡಿದರು. ಅಲ್ಲದೆ ದ್ವಿತೀಯ ವಿಕೆಟ್‌ಗೆ ಸಿದ್ಧಾರ್ಥ್ ಜೊತೆಗೂ 171 ರನ್‌ಗಳ ಬೃಹತ್ ಜೊತೆಯಾಟ ನೀಡಿದರು.

144 ಎಸೆತಗಳನ್ನು ಎದುರಿಸಿದ ಸಮರ್ಥ್ 15 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 158 ರನ್ ಗಳಿಸಿ ಅಜೇಯರಾಗುಳಿದರು. ಅತ್ತ 55 ಎಸೆತಗಳನ್ನು ಎದುರಿಸಿದ ಸಿದ್ದಾರ್ಥ್ ಐದು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 76 ರನ್ ಗಳಿಸಿದರು.

ಬಳಿಕ ಪ್ರಸಿದ್ಧ ಕೃಷ್ಣ ಮತ್ತು ಅಭಿಮನ್ಯು ಮಿಥುನ್ ಹಾಗೂ ಶ್ರೇಯಸ್ ಗೋಪಾಲ್ ಬೌಲಿಂಗ್‌ಗೆ ತತ್ತರಿಸಿದ ಬಿಹಾರ 27.2 ಓವರ್‌ಗಳಲ್ಲೇ 87 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಶಕಿಬುಲ್ ಗನಿ 37 ರನ್ ಗಳಿಸಿದರು.

ಕರ್ನಾಟಕ ಪರ ಪ್ರಸಿದ್ಧ ಕೃಷ್ಣ ನಾಲ್ಕು ಮತ್ತು ಮಿಥುನ್ ಹಾಗೂ ಶ್ರೇಯಸ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಉತ್ತರ ಪ್ರದೇಶ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ ಕರ್ನಾಟಕ 9 ರನ್ ಅಂತರದ ಸೋಲಿಗೆ ಶರಣಾಗಿತ್ತು. ಈ ಗೆಲುವಿನೊಂದಿಗೆ ನಾಲ್ಕು ಅಂಕ ಸಂಪಾದಿಸಿರುವ ಕರ್ನಾಟಕ, ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.