ವಡೋದರಾ: ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಪ್ರಶಸ್ತಿಗಾಗಿ ಕರ್ನಾಟಕ ತಂಡವು ಕನ್ನಡಿಗ ಕರುಣ್ ನಾಯರ್ ನಾಯಕತ್ವದ ಬಳಗವನ್ನು ಎದುರಿಸಬೇಕಿದೆ.
ಗುರುವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಕರುಣ್ ನಾಯಕತ್ವದ ವಿದರ್ಭ ತಂಡವು 69 ರನ್‌ಗಳಿಂದ ಮಹಾರಾಷ್ಟ್ರ ವಿರುದ್ಧ ಜಯಿಸಿತು. ಅದರೊಂದಿಗೆ ತಮ್ಮ ‘ನಿಕಟಪೂರ್ವ ತಂಡ’ದ ಎದುರು ಸೆಣಸಲು ಕರುಣ್ ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ಅವರು ರನ್‌ಗಳ ಹೊಳೆ ಹರಿಸಿದ್ದಾರೆ. ಒಟ್ಟು 752 ರನ್‌ಗಳನ್ನು ಅವರು ಕಲೆಹಾಕಿದ್ದಾರೆ. ಅದರಲ್ಲಿ ಐದು ಶತಕಗಳು ಇವೆ. ಸೆಮಿಫೈನಲ್‌ನಲ್ಲಿಯೂ ಅವರದ್ದು ಮಿಂಚಿನ ಬ್ಯಾಟಿಂಗ್. 44 ಎಸೆತಗಳಲ್ಲಿ ಅಜೇಯ 88 ರನ್ ಗಳಿಸಿದರು. ಅದರಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳ ಭರಾಟೆ ಇತ್ತು. ಅವರಿಗಿಂತ ಮುನ್ನ ವಿದರ್ಭ ಆರಂಭಿಕ ಜೋಡಿ ಧ್ರುವ ಶೋರೆ (114; 120ಎ, 4X14, 6X1) ಮತ್ತು ಯಶ್ ರಾಥೋಡ್ (116; 101ಎ, 4X14, 6X1) ಅವರಿಬ್ಬರೂ ಶತಕ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 224 ರನ್ ಸೇರಿಸಿದರು.
ಈ ಅಡಿಪಾಯದ ಮೇಲೆ ಕರುಣ್ ಮಿಂಚಿನ ಬ್ಯಾಟಿಂಗ್ ಮೂಲಕ ರನ್‌ಗಳ ಸೌಧ ಕಟ್ಟಿದರು. ತಂಡವು 50 ಓವರ್‌ಗಳಲ್ಲಿ 3 ವಿಕೆಟ್‌ಗೆ 380 ರನ್ ಗಳಿಸಿತು.
ಇದಕ್ಕುತ್ತರವಾಗಿ ಋತುರಾಜ್ ಗಾಯಕವಾಡ ನಾಯಕತ್ವದ ಮಹಾರಾಷ್ಟ್ರ ನಿಗದಿತ ಓವರ್‌ಗಳಲ್ಲಿ 7ಕ್ಕೆ311 ರನ್ ಗಳಿಸಿತು. ಯುವಪ್ರತಿಭೆ ಅರ್ಷಿನ್ ಕುಲಕರ್ಣಿ (90; 101ಎ), ಅಂಕಿತ್ ಭಾವ್ನೆ (50; 49ಎ) ಮತ್ತು ನಿಖಿಲ್ ನಾಯಕ (49; 26ಎ) ಅವರ ಹೋರಾಟಕ್ಕೆ ಗೆಲುವು ದಕ್ಕಲಿಲ್ಲ.
2022ರಲ್ಲಿ ಫಾರ್ಮ್ ಕೊರತೆ ಅನುಭವಿಸಿದ್ದ ಕರುಣ್ ಅವರು ಕರ್ನಾಟಕ ತಂಡದಿಂದ ಸ್ಥಾನ ಕಳೆದುಕೊಂಡಿದ್ದರು. ಅದರ ನಂತರ ಅವರು ವಿದರ್ಭಕ್ಕೆ ವಲಸೆ ಹೋಗಿದ್ದರು. ತಮ್ಮ ವೈಫಲ್ಯದ ಕೂಪದಿಂದ ಮೇಲೆದ್ದು ನಿಂತಿರುವ ಕರುಣ್ ಬ್ಯಾಟಿಂಗ್ ವೈಭವ ಮೆರೆಯುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಹೊಡೆದ ಅನುಭವಿ 33 ವರ್ಷದ ಕರುಣ್ ಈಗ ತಮ್ಮ ಮುಂದಾಳತ್ವದ ವಿದರ್ಭಕ್ಕೆ ಟ್ರೋಫಿ ಜಯಿಸಿಕೊಡುವ ಛಲದಲ್ಲಿದ್ದಾರೆ. ಅದಕ್ಕಾಗಿ ತಮ್ಮ ಹಳೆಯ ಮಿತ್ರ ಮಯಂಕ್ ಅಗರವಾಲ್ ನಾಯಕತ್ವದ ಬಳಗವನ್ನು ಮಣಿಸುವ ಸವಾಲು ಅವರ ಮುಂದಿದೆ.
‘ಪ್ರಿಯ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು..’ ಎಂದು ಎರಡು ವರ್ಷಗಳ ಹಿಂದೆ ಟ್ವೀಟ್ ಮಾಡಿದ್ದ ಕರುಣ್ ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡಿದ್ದಾರೆ. ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ.
ಸಂಕ್ಷಿಪ್ತ ಸ್ಕೋರು: ವಿದರ್ಭ: 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 380 (ಧ್ರುವ ಶೋರೆ 114, ಯಶ್ ರಾಥೋಡ್ 116, ಕರುಣ್ ನಾಯರ್ ಔಟಾಗದೇ 88, ಜಿತೇಶ್ ಶರ್ಮಾ 51, ಮುಕೇಶ್ ಚೌಧರಿ 80ಕ್ಕೆ2) ಮಹಾರಾಷ್ಟ್ರ: 50 ಓವರ್‌ಗಳಲ್ಲಿ 7ಕ್ಕೆ311 (ಅರ್ಷಿನ್ ಕುಲಕರ್ಣಿ 90, ರಾಹುಲ್ ತ್ರಿಪಾಠಿ 27, ಸಿದ್ಧೇಶ್ ವೀರ್ 30, ಅಂಕಿತ್ ಭಾವ್ನೆ 50, ಅಜೀಂ ಖಾಜಿ 29, ನಿಖಿಲ್ ನಾಯಕ್ 49, ಸತ್ಯಜೀತ್ ಬಚಾವ್ ಔಟಾಗದೆ 20, ದರ್ಶನ್ ನಾಯ್ಕಂಡೆ 64ಕ್ಕೆ3, ನಚಿಕೇತ್ ಭೂತೆ 68ಕ್ಕೆ3) ಫಲಿತಾಂಶ: ವಿದರ್ಭ ತಂಡಕ್ಕೆ 69 ರನ್‌ಗಳ ಜಯ. ಪಂದ್ಯಶ್ರೇಷ್ಠ: ಯಶ್ ರಾಥೋಡ್
ಫೈನಲ್: ಕರ್ನಾಟಕ– ವಿದರ್ಭ (ಜ. 18)
(ಮಾಹಿತಿ: ಬಿಸಿಸಿಐ ಡಾಟ್ ಟಿವಿ ಮತ್ತು ವೆಬ್‌ಸೈಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.