
ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಈ ಸಲದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ‘ಬದ್ಧ ಎದುರಾಳಿ’ ಮುಂಬೈ ತಂಡದ ವಿರುದ್ಧ ಆಡಲಿದೆ.
ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯಲಿವೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎ ಗುಂಪಿನ ಕೊನೆಯ ಸುತ್ತಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು 7 ವಿಕೆಟ್‌ಗಳಿಂದ ಕರ್ನಾಟಕದ ಎದುರು ಗೆದ್ದಿತು. ಒಟ್ಟು 20 ಅಂಕ ಗಳಿಸಿ ಎಂಟರ ಘಟ್ಟ ಪ್ರವೇಶಿಸಿತು. 24 ಅಂಕ ಗಳಿಸಿದ್ದ ಕರ್ನಾಟಕ ಅಗ್ರಸ್ಥಾನದಲ್ಲಿ ಉಳಿಯಿತು. ಆದರೆ ಗುಂಪು ಹಂತದಲ್ಲಿ ಕರ್ನಾಟಕದ ಅಜೇಯ ಓಟಕ್ಕೆ ಮಧ್ಯಪ್ರದೇಶ ತಡೆಯೊಡ್ಡಿತು.
ಶಿವಾಂಗ್–ಅಯ್ಯರ್ ಮಿಂಚು
ಪಾಯಿಂಟ್ ಪಟ್ಟಿಯಲ್ಲಿದ್ದ ನಾಲ್ಕನೇ ಸ್ಥಾನದಲ್ಲಿದ್ದ ಮಧ್ಯಪ್ರದೇಶ ತಂಡಕ್ಕೆ ಎರಡನೇ ಸ್ಥಾನಕ್ಕೇರಲು ಕರ್ನಾಟಕದ ಎದುರಿನ ಜಯ ಅನಿವಾರ್ಯವಾಗಿತ್ತು. ತಂಡದ ಶಿವಾಂಗ್ ಕುಮಾರ್ (45ಕ್ಕೆ5) ಮತ್ತು ನಾಯಕ ವೆಂಕಟೇಶ್ ಅಯ್ಯರ್ (ಔಟಾಗದೇ 65; 33ಎ, 4X4, 6X5) ಅಜೇಯ ಅರ್ಧಶತಕದ ಬಲದಿಂದ ಮಧ್ಯಪ್ರದೇಶ ಗೆದ್ದಿತು.
ಟಾಸ್ ಗೆದ್ದ ಮಧ್ಯಪ್ರದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕತಂಡದ ಆರಂಭಿಕ ಜೋಡಿ ಮಯಂಕ್ ಅಗರವಾಲ್ (49; 59ಎ, 4X5, 6X1) ಮತ್ತು ದೇವದತ್ತ ಪಡಿಕ್ಕಲ್ (35; 39ಎ, 4X2, 6X2) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 77 ರನ್ ಸೇರಿಸಿದರು. ಟೂರ್ನಿಯಲ್ಲಿ ನಾಲ್ಕು ಶತಕ ಗಳಿಸಿರುವ ದೇವದತ್ತ ಉತ್ತಮ ಲಯದಲ್ಲಿದ್ದರು. ಆದರೆ 14ನೇ ಓವರ್‌ನಲ್ಲಿ ದೇವದತ್ತ ವಿಕೆಟ್ ಉರುಳಿಸಿದ ತ್ರಿಪುರೇಶ್ ಸಿಂಗ್ ಮಧ್ಯಪ್ರದೇಶಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಇದಾಗಿ ನಾಲ್ಕು ಓವರ್‌ಗಳ ನಂತರ ಕರುಣ್ ನಾಯರ್ ರನ್‌ಔಟ್ ಆದರು. ಈ ಹಂತದಲ್ಲಿ ಚುರುಕಾದ ಅಯ್ಯರ್ ಪಡೆಯ ಬೌಲರ್‌ಗಳು ಕರ್ನಾಟಕ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಕುಮಾರ್ ಕಾರ್ತಿಕೆಯ ಅವರು ಮಯಂಕ್ ವಿಕೆಟ್ ಗಳಿಸಿದರು.
ಇಲ್ಲಿಂದ ಮುಂದೆ ಎಡಗೈ ಸ್ಪಿನ್ನರ್ ಶಿವಾಂಗ್ ತಮ್ಮ ಕೈಚಳಕ ಮೆರೆದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಜೊತೆಯಾಟವಾಡದಂತೆ ನೋಡಿಕೊಂಡರು. ಈ ಪರಿಸ್ಥಿತಿಯಲ್ಲಿಯೂ ವಿದ್ಯಾಧರ್ ಪಾಟೀಲ ಅಜೇಯ 34 ರನ್ ಗಳಿಸಿದರು. ಅದರಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಇದ್ದವು. ಇದರಿಂದಾಗಿ ಕರ್ನಾಟಕ ತಂಡವು 47.4 ಓವರ್‌ಗಳಲ್ಲಿ 207 ರನ್‌ಗಳ ಗಳಿಸಿತು.
ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶವು 23.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 208 ರನ್ ಗಳಿಸಿ ಗೆದ್ದಿತು. ತಂಡದ ಆರಂಭಿಕ ಬ್ಯಾಟರ್ ಯಶ್ ದುಬೆ (40; 43ಎ) ಮತ್ತು ಹಿಮಾಂಶು ಮಂತ್ರಿ (34; 35ಎ) ಮೊದಲ ವಿಕೆಟ್‌ಗೆ 78 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ಅಯ್ಯರ್ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಅಕ್ಷತ್ ರಘುವಂಶಿ (26ರನ್) ಮತ್ತು ತ್ರಿಪುರೇಶ್ ಸಿಂಗ್ (ಔಟಾಗದೇ 36) ಉಪಯುಕ್ತ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 47.4 ಓವರ್‌ಗಳಲ್ಲಿ 207(ಮಯಂಕ್ ಅಗರವಾಲ್ 49, ದೇವದತ್ತ ಪಡಿಕ್ಕಲ್ 35, ವಿದ್ಯಾಧರ್ ಪಟೀಲ್ ಔಟಾಗದೇ 34, ಶಿವಾಂಗ್ ಕುಮಾರ್ 45ಕ್ಕೆ5) ಮಧ್ಯಪ್ರದೇಶ: 23.2 ಓವರ್‌ಗಳಲ್ಲಿ 3ಕ್ಕೆ208 (ಯಶ್ ದುಬೆ 40, ಹಿಮಾಂಶು ಮಂತ್ರಿ 34, ವೆಂಕಟೇಶ್ ಅಯ್ಯರ್ ಔಟಾಗದೇ 65, ಅಕ್ಷತ್ ರಘುವಂಶಿ 26, ತ್ರಿಪುರೇಶ್ ಸಿಂಗ್ ಔಟಾಗದೇ 36, ವಿದ್ಯಾಧರ್ ಪಾಟೀಲ 24ಕ್ಕೆ1, ಶ್ರೀಷಾ ಆಚಾರ್ 42ಕ್ಕೆ1, ಶ್ರೇಯಸ್ ಗೋಪಾಲ್ 36ಕ್ಕೆ1) ಫಲಿತಾಂಶ: ಮಧ್ಯಪ್ರದೇಶ ತಂಡಕ್ಕೆ 7 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.