ADVERTISEMENT

ವಿಜಯ್ ಹಜಾರೆ ಟ್ರೋಫಿ | ಸೌರಾಷ್ಟ್ರ–ವಿದರ್ಭ ನಡುವೆ ಫೈನಲ್: ಸಮಬಲದ ತಂಡಗಳ ಹೋರಾಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 23:20 IST
Last Updated 17 ಜನವರಿ 2026, 23:20 IST
<div class="paragraphs"><p>ಸೌರಾಷ್ಟ್ರದ ಹರ್ವಿಕ್ ದೇಸಾಯಿ ಮತ್ತು ವಿಶ್ವರಾಜ್ ಜಡೇಜ&nbsp; </p></div>

ಸೌರಾಷ್ಟ್ರದ ಹರ್ವಿಕ್ ದೇಸಾಯಿ ಮತ್ತು ವಿಶ್ವರಾಜ್ ಜಡೇಜ 

   

 –ಪಿಟಿಐ ಚಿತ್ರ

ಬೆಂಗಳೂರು: ಸೆಮಿಫೈನಲ್ ಪಂದ್ಯಗಳನ್ನು ಅಮೋಘ ರೀತಿಯಲ್ಲಿ ಗೆದ್ದುಕೊಂಡಿರುವ ವಿದರ್ಭ ಮತ್ತು ಸೌರಾಷ್ಟ್ರ ತಂಡಗಳೆರಡೂ ಈಗ ಆತ್ಮವಿಶ್ವಾಸದಿಂದ ಇವೆ. ಭಾನುವಾರ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಈ ತಂಡಗಳ ನಡುವೆ ಸಮಬಲದ ಹೋರಾಟದ ನಿರೀಕ್ಷೆಯಿದೆ. ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕ್ರೀಡಾಂಗಣದಲ್ಲಿ ಕೌಶಲ ಮತ್ತು ಸಂಯಮದ ಪರೀಕ್ಷೆಯೂ ಆಗಲಿದೆ.

ADVERTISEMENT

ಎರಡು ಬಾರಿಯ ರನ್ನರ್ ಅಪ್ ಹಾಗೂ 2025ರ ರಣಜಿ ಚಾಂಪಿಯನ್ ವಿದರ್ಭ ತಂಡವು ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಸೋಲಿಸಿತ್ತು. ಪ್ರತಿಭಾನ್ವಿತ ಯುವ ಆಟಗಾರ ಅಮನ್ ಮೊಖಡೆ ಅವರ ಸೊಗಸಾದ ಶತಕ (138, 122ಎ) ಇದಕ್ಕೆ ಪ್ರಮುಖ ಕಾರಣವಾಗಿತ್ತು. ಎರಡು ಬಾರಿ ಈ ಪ್ರಶಸ್ತಿ ಗೆದ್ದಿರುವ ಸೌರಾಷ್ಟ್ರ ಇನ್ನೊಂದು ಸೆಮಿಫೈನಲ್‌ನಲ್ಲಿ ವಿಶ್ವರಾಜ್ ಜಡೇಜ ಅವರ ಅಜೇಯ 165 ರನ್‌ಗಳ ನೆರವಿನಿಂದ ಪಂಜಾಬ್ ತಂಡವನ್ನು ಸೋಲಿಸಿತ್ತು.

ಸೆಮಿಫೈನಲ್‌ನಲ್ಲಿ ವೈಯಕ್ತಿಕ ಪ್ರದರ್ಶನಗಳು ಎದ್ದುಕಂಡರೂ, ಸೌರಾಷ್ಟ್ರ ಮತ್ತು ವಿದರ್ಭ ತಂಡಗಳು ಉತ್ತಮ ಆಟಗಾರರನ್ನು ಹೊಂದಿದ್ದು ಸಾಂಘಿಕ ಪ್ರದರ್ಶನದ ಆಧಾರದಲ್ಲಿ ಇಲ್ಲಿಯವರೆಗೆ ತಲುಪಿವೆ. ಇದುವರೆಗಿನ ಪಂದ್ಯಗಳಲ್ಲಿ ಬೇರೆ ಬೇರೆ ಆಟಗಾರರು ಗೆಲುವಿಗೆ ಕಾರಣರಾಗಿದ್ದಾರೆ.

ಬ್ಯಾಟಿಂಗ್‌ ಆಗಲಿ, ಬೌಲಿಂಗ್ ಆಗಲಿ ಎರಡೂ ತಂಡಗಳು ಸಮಬಲ ಹೊಂದಿವೆ. ಯಾವ ತಂಡ ಟ್ರೋಫಿಯ ಮೇಲೆ ಕೈಇಡಬಹುದೆಂದು ಹೇಳುವುದು ಕ್ರಿಕೆಟ್ ಪಂಡಿತರಿಗೂ ಕಷ್ಟ.

ಶುಕ್ರವಾರವಷ್ಟೇ 25ನೇ ವರ್ಷಕ್ಕೆ ಕಾಲಿಟ್ಟ ಮೊಖಾಡೆ ಬ್ಯಾಟರ್‌ಗಳ ಪಟ್ಟಿಯಲ್ಲಿ 781 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಐದು ಶತಕಗಳು ಇದರಲ್ಲಿ ಒಳಗೊಂಡಿವೆ. ತಂಡಕ್ಕೆ ದೆಹಲಿಯ ‘ಆಮದು’ ಆಟಗಾರ ಧ್ರುವ್ ಶೋರೆ ಕೂಡ ಉಪಯುಕ್ತ ಆಟವಾಡಿದ್ದು 515 ರನ್ ಹೊಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ತಂಡ ಸೇರಿಕೊಂಡ ಕರ್ನಾಟಕದವರಾದ ಆರ್‌.ಸಮರ್ಥ್‌ ಕಾಣಿಕೆಯೂ (427 ರ‌ನ್) ಅಮೂಲ್ಯ. 

ಹೊಸ ಚೆಂಡಿನ ದಾಳಿ ನಡೆಸುವ ಯಶ್‌ ಠಾಕೂರ್ ಮತ್ತು ನಚಿಕೇತ್ ಭೂತೆ ತಲಾ 15 ವಿಕೆಟ್‌ಗಳನ್ನು ಗಳಿಸಿದ್ದಾರೆ. ಪ್ರತಿ ಪಂದ್ಯದಲ್ಲಿ  ಇಬ್ಬರಲ್ಲಿ ಒಬ್ಬರಾದರೂ ಯಶಸ್ಸು ಗಳಿಸುತ್ತಿದ್ದಾರೆ. ದರ್ಶನ್ ನಲ್ಕಂಡೆ (12 ವಿಕೆಟ್) ಹಿಂದೆಬಿದ್ದಿಲ್ಲ. ಸ್ಪಿನ್ನರ್‌ಗಳಾದ ಹರ್ಷ್‌ ದುಬೆ ಮತ್ತು ಯಶ್‌ ಕದಂ ಕ್ರಮವಾಗಿ 10 ಮತ್ತು 7 ವಿಕೆಟ್ ಗಳಿಸಿದ್ದಾರೆ.

ಸೌರಾಷ್ಟ್ರ ತಂಡದ ಯಶಸ್ಸಿಗೂ ಸಾಂಘಿಕ ಆಟ ಕಾರಣವಾಗಿದೆ. ಆರಂಭ ಆಟಗಾರರಾದ ಹರ್ವಿಕ್ ದೇಸಾಯಿ ಮತ್ತು ವಿಶ್ವರಾಜ್ ಜಡೇಜ ಕ್ರಮವಾಗಿ 561 ಮತ್ತು 536 ರನ್ ಗಳಿಸಿದ್ದಾರೆ. ತಲಾ ಮೂರು ಶತಕಗಳನ್ನೂ ಹೊಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಮ್ಮರ್ ಗಜ್ಜರ್ (430), ಪ್ರೇರಕ್ ಮಂಕಡ್‌ (361) ಮತ್ತು ಚಿರಾಗ್ ಜಾನಿ (308) ಅವರು ಸಕಾಲದಲ್ಲಿ ತಂಡದ ನೆರವಿಗೆ ಧಾವಿಸಿದ್ದಾರೆ. ಬೌಲಿಂಗ್‌ನಲ್ಲಿ ಅಂಕುರ್ ಪನ್ವರ್ ಅವರು 21 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವೇಗದ ದಾಳಿಯಲ್ಲಿ ಅವರಿಗೆ ಹೆಗಲು ನೀಡಿರುವ ಚೇತನ್ ಸಕಾರಿಯಾ ಮತ್ತು ಚಿರಾಗ್ ಜಾನಿ ಅವರೂ 15 ಮತ್ತು 11 ವಿಕೆಟ್‌ ಕಬಳಿಸಿದ್ದಾರೆ. ಸೆಮಿಫೈನಲ್ ಪಂದ್ಯಕ್ಕೆ ಅನುಭವಿ ಜಯದೇವ ಉನದ್ಕತ್ ಮರಳಿರುವುದು ತಂಡಕ್ಕೆ ನೆರವಾಗಬಹುದು.

ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಬಹಳಷ್ಟು ನಾಕೌಟ್ ಪಂದ್ಯಗಳಲ್ಲಿ ಹೆಚ್ಚಿನ ಮೊತ್ತಗಳು ದಾಖಲಾಗಿದ್ದು, ಇಲ್ಲೂ ರನ್ ಹಬ್ಬ ನಿರೀಕ್ಷಿಸಬಹುದು. ತಂಡಗಳು ಸಮಾನಬಲ ಹೊಂದಿದಂತೆ ಕಂಡರೂ ಸೌರಾಷ್ಟ್ರವು ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ವಿರುದ್ಧ 3–0 ದಾಖಲೆ ಹೊಂದಿದೆ. ಆದರೆ ಕರ್ನಾಟಕ ವಿರುದ್ಧ 0–4 ಸೋಲಿನ ಸರಣಿಗೆ ಸೆಮಿಫೈನಲ್‌ನಲ್ಲಿ ತೆರೆಯೆಳೆದಿದ್ದ ವಿದರ್ಭ ತಂಡವು, ಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧವೂ ಇಂಥದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.