ADVERTISEMENT

Vijay Hazare Trophy:ಪಡಿಕ್ಕಲ್ ಶತಕ; 413 ರನ್ ಗುರಿ ಬೆನ್ನತ್ತಿ ಗೆದ್ದ ಕರ್ನಾಟಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 13:42 IST
Last Updated 24 ಡಿಸೆಂಬರ್ 2025, 13:42 IST
   

ಅಹಮದಾಬಾದ್: ದೇವದತ್ತ ಪಡಿಕ್ಕಲ್‌ ಅವರ 147 ರನ್‌ಗಳ ಅಮೋಘ ಶತಕದ ಆಟದ ಎದುರು ಜಾರ್ಖಂಡ್ ತಂಡದ  ಇಶಾನ್ ಕಿಶನ್ ಅವರ ಮಿಂಚಿನ ಶತಕದ ಆಟ (39 ಎಸೆತಗಳಲ್ಲಿ 125) ಮಸುಕಾಯಿತು. ಸೇರಿಗೆ ಸವ್ವಾಸೇರು ಎನ್ನುವಂತೆ ಜಾರ್ಖಂಡ್ ತಂಡದ ಭಾರಿ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಬುಧವಾರ 5 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಆರಂಭ ಮಾಡಿತು.

ಇದು ವಿಜಯ್ ಹಜಾರೆ ಟ್ರೋಫಿಯಲ್ಲಿ ‘ದಾಖಲೆ ಚೇಸ್‌’ ಎನಿಸಿತು. ಸರ್ದಾರ್‌ ಪಟೇಲ್ ‘ಬಿ’ ಕ್ರೀಡಾಂಗಣದಲ್ಲಿ ರನ್‌ಹೊಳೆ ಕಂಡ ಎಲೀಟ್ ‘ಎ’ ಗುಂಪಿನ ಈ ಪಂದ್ಯದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಜಾರ್ಖಂಡ್‌ 9 ವಿಕೆಟ್‌ಗೆ 412 ರನ್‌ಗಳ ಭಾರಿ ಮೊತ್ತ ಕಲೆಹಾಕಿತು. ಆದರೆ ಕರ್ನಾಟಕ ಇನ್ನೂ 15 ಎಸೆತಗಳು ಬಾಕಿಯಿರುವಂತೆ 5 ವಿಕೆಟ್‌ಗೆ 413 ರನ್ ಹೊಡೆದು ಗೆಲುವು ಆಚರಿಸಿತು. ಆರಂಭ ಆಟಗಾರ ಪಡಿಕ್ಕಲ್ ಅವರಿಗೆ ಇತರ ಬ್ಯಾಟರ್‌ಗಳು ಬೆಂಬಲ ನೀಡಿದರು.

ನಾಲ್ಕು ದಿನಗಳ ಹಿಂದಷ್ಟೇ ಟಿ20 ವಿಶ್ವಕಪ್‌ ಆಡುವ ಭಾರತ ತಂಡಕ್ಕೆ ಆಯ್ಕೆಯಾದ ಸಂಭ್ರಮದಲ್ಲಿರುವ ವಿಕೆಟ್‌ಕೀಪರ್ ಇಶಾನ್ ಕಿಶನ್ ಏಳು ಬೌಂಡರಿ, 14 ಸಿಕ್ಸರ್‌ಗಳನ್ನು ಸಿಡಿಸಿದರು.

ADVERTISEMENT

ಆರಂಭ ಆಟಗಾರ ಶಿಖರ್ ಮೋಹನ್ (44), ವಿರಾಟ್‌ ಸಿಂಗ್ (88, 68ಎ, 4x8, 6x4) ಮತ್ತು ಕುಮಾರ್ ಕುಶಾಗ್ರ (63, 47ಎ, 4x3, 6x5) ಅವರು ಜಾರ್ಖಂಡ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಹೀಗಾಗಿ ಆ ತಂಡ 38 ಓವರುಗಳಲ್ಲಿ 4 ವಿಕೆಟ್‌ಗೆ 239 ರನ್ ಗಳಿಸಿ ಉತ್ತಮ ಆರಂಭ ಮಾಡಿತ್ತು. ವಿರಾಟ್ ಸಿಂಗ್ ಮತ್ತು ಕುಶಾಗ್ರ ನಾಲ್ಕನೇ ವಿಕೆಟ್‌ಗೆ 129 ರನ್ ಸೇರಿಸಿದರು. ಇದರಿಂದ ಇಶಾನ್ ಕಿಶನ್ ಅವರಿಗೆ ಪರಾಕ್ರಮ ಮೆರೆಯಲು ಸಾಧ್ಯವಾಯಿತು. ಅವರು ಕಟ್‌, ಪುಲ್‌, ಡ್ರೈವ್‌ಗಳ ಮೂಲಕ ಚೆಂಡನ್ನು ಕ್ರೀಡಾಂಗಣದ ಮೂಲೆಮೂಲೆಗೆ ಅಟ್ಟಿದರು. ಇದರಿಂದ ತಂಡ ಸುಲಭವಾಗಿ 400ರ ಗಡಿ ದಾಟಿತು. ಕರ್ನಾಟಕದ ಪರ ವೇಗಿ ಅಭಿಲಾಷ್‌ ಶೆಟ್ಟಿ 72 ರನ್ನಿಗೆ 4 ವಿಕೆಟ್ ಪಡೆದರು.

ಈ ದೊಡ್ಡ ಮೊತ್ತದೆದುರು ಕರ್ನಾಟಕ ಧೃತಿಗೆಡಲಿಲ್ಲ. ನಾಯಕ ಮಯಂಕ್ ಅಗರವಾಲ್ (54, 34ಎ, 4x10) ಮತ್ತು ದೇವದತ್ತ ಪಡಿಕ್ಕಲ್ ಅವರು ಕೇವಲ 11.5 ಓವರುಗಳಲ್ಲಿ 114 ರನ್ ಸೇರಿಸುವ ಮೂಲಕ ಕರ್ನಾಟಕ ತಂಡಕ್ಕೆ ಅಗತ್ಯವಾಗಿದ್ದ ಅಮೋಘ ಆರಂಭ ಒದಗಿಸಿದರು.

ನಂತರ ಮಧ್ಯಮ ಕ್ರಮಾಂಕದ ಆಟಗಾರರಾದ ಕರುಣ್ ನಾಯರ್ (29), ಆರ್.ಸ್ಮರಣ್ (25), ಕೃಷ್ಣನ್ ಶ್ರೀಜಿತ್ (38) ಅವರೂ ಉಪಯುಕ್ತ ಕೊಡುಗೆ ನೀಡಿದರು. 118 ಎಸೆತಗಳ ಇನಿಂಗ್ಸ್‌ನಲ್ಲಿ ಹತ್ತು ಬೌಂಡರಿ, ಏಳು ಸಿಕ್ಸರ್‌ಗಳನ್ನು ಬಾರಿಸಿದ ದೇವದತ್ತ 41ನೇ ಓವರಿನಲ್ಲಿ ನಿರ್ಗಮಿಸಿದರು. ಆಗ ಮೊತ್ತ 5 ವಿಕೆಟ್‌ಗೆ 325.

ಈ ಹಂತದಲ್ಲಿ ಅಭಿನವ್ ಮನೋಹರ್ (ಔಟಾಗದೇ 56, 32ಎ) ಮತ್ತು ಧ್ರುವ್ ಪ್ರಭಾಕರ್ (ಔಟಾಗದೇ 40, 22 ಎಸೆತ) ಅವರು ಮುರಿಯದ ಆರನೇ ವಿಕೆಟ್‌ಗೆ ಕೇವಲ 41 ಎಸೆತಗಳಲ್ಲಿ 88 ರನ್‌ಗಳ ಬಿರುಸಿನ ಜೊತೆಯಾಟವಾಡಿದರು. ತಂಡ ಇನ್ನೂ 2.3 ಓವರುಗಳಿರುವಾಗ ಗುರಿತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.