ದೇವದತ್ತ ಪಡಿಕ್ಕಲ್
(ಚಿತ್ರ ಕೃಪೆ: X@Saabir_Saabu01)
ವಡೋದರಾ: ಎಡಗೈ ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ಗಳಿಸಿದ ಅಮೋಘ ಶತಕದ (102) ಬೆಂಬಲದೊಂದಿಗೆ ಕರ್ನಾಟಕ ತಂಡವು ಇಲ್ಲಿ ಬರೋಡಾ ವಿರುದ್ಧ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 281 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಬರೋಡಾ ನಾಯಕ ಕೃಣಾಲ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಮಯಂಕ್ ಅಗರವಾಲ್ ಕೇವಲ 6 ರನ್ ಗಳಿಸಿ ಔಟ್ ಆದರು.
ಬಳಿಕ ಕೆ.ವಿ. ಅನೀಶ್ ಜೊತೆ ಸೇರಿದ ಪಡಿಕ್ಕಲ್ ದ್ವಿತೀಯ ವಿಕೆಟ್‌ಗೆ ಶತಕದ (133) ಜೊತೆಯಾಟ ಕಟ್ಟಿದರು. ಅನೀಶ್ 64 ಎಸೆತಗಳಲ್ಲಿ 52 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಮಿಂಚಿದರು.
ಮಧ್ಯಮ ಕ್ರಮಾಂಕದಲ್ಲಿ ಎಸ್. ರವಿಚಂದ್ರನ್ (28), ಕೃಷ್ಣನ್ ಶ್ರೀಜಿತ್ (28) ಹಾಗೂ ಅಭಿನವ್ ಮನೋಹರ್ (21) ಉಪಯುಕ್ತ ಇನಿಂಗ್ಸ್ ಕಟ್ಟಿದರು. ಹಾರ್ದಿಕ್ ರಾಜ್ ಶೂನ್ಯಕ್ಕೆ ಔಟ್ ಆದರು.
ವಿಕೆಟ್‌ನ ಇನ್ನೊಂದು ತುದಿಯಿಂದ ನೆಲಕಚ್ಚಿ ಆಡಿದ ದೇವದತ್ತ ಪಡಿಕ್ಕಲ್ ಅಮೋಘ ಶತಕ ಸಾಧನೆ ಮಾಡಿದರು. ಪಡಿಕ್ಕಲ್ 99 ಎಸೆತಗಳಲ್ಲಿ 102 ರನ್ (15 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಇನ್ನುಳಿದಂತೆ ಶ್ರೇಯಾಸ್ ಗೋಪಾಲ್ 16 ಹಾಗೂ ಪ್ರಸಿದ್ಧ ಕೃಷ್ಣ 12* ರನ್ ಗಳಿಸಿದರು. ಬರೋಡಾ ಪರ ರಾಜ್ ಲಿಂಬಾನಿ ಹಾಗೂ ಎ. ಸೇತ್ ತಲಾ ಮೂರು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.