ADVERTISEMENT

ವಿಜಯ್ ಹಜಾರೆ ಕ್ವಾರ್ಟರ್‌ಫೈನಲ್: ಮಯಂಕ್ ಪಡೆಗೆ ಮುಂಬೈಗೆ ಸವಾಲು ಮೀರುವ ಹುಮ್ಮಸ್ಸು

ಗಿರೀಶದೊಡ್ಡಮನಿ
Published 11 ಜನವರಿ 2026, 23:34 IST
Last Updated 11 ಜನವರಿ 2026, 23:34 IST
ದೇವದತ್ತ ಪಡಿಕ್ಕಲ್ 
ದೇವದತ್ತ ಪಡಿಕ್ಕಲ್    

ಬೆಂಗಳೂರು: ದೇಶಿ ಕ್ರಿಕೆಟ್‌ ಕ್ಷೇತ್ರದ ‘ಬದ್ಧ ಪ್ರತಿಸ್ಪರ್ಧಿ’ಗಳಾದ ಕರ್ನಾಟಕ ಮತ್ತು ಮುಂಬೈ ತಂಡಗಳು ಸೋಮವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 

ನಗರದ ಹೊರವಲಯದಲ್ಲಿರುವ ಸಿಂಗಹಳ್ಳಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನ (1)ದಲ್ಲಿ ಈ ಪಂದ್ಯ ನಡೆಯಲಿದೆ. ಅದರಿಂದಾಗಿ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ತವರೂರಿನಲ್ಲಿ ಆಡುವ ಅವಕಾಶ ಲಭಿಸಿದೆ. ಎ ಗುಂಪಿನಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಎಂಟರ ಘಟ್ಟವನ್ನು ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಪ್ರವೇಶಿಸಿದೆ. ತಂಡವು ಗುಂಪು ಹಂತದ ಪಂದ್ಯಗಳನ್ನು ಅಹಮದಾಬಾದಿನಲ್ಲಿ ಆಡಿತ್ತು. 

ಭಾರತ ತಂಡದ ಆಯ್ಕೆಗಾರರ ಗಮನ ಸೆಳೆಯಲು ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ರನ್‌ ಹೊಳೆ ಹರಿಸುತ್ತಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ಮುಂಬೈನ ಸರ್ಫರಾಜ್ ಖಾನ್ ಕೂಡ ಇಲ್ಲಿ ಮುಖಾಮುಖಿಯಾಗಲಿದ್ದಾರೆ. 

ADVERTISEMENT

ಟೂರ್ನಿಯ ಗುಂಪು  ಹಂತದಲ್ಲಿ ದೇವದತ್ತ ಅವರು ನಾಲ್ಕು ಶತಕಸಹಿತ 640 ರನ್ ಗಳಿಸಿದ್ದಾರೆ. ನಾಯಕ ಮಯಂಕ್ ಎರಡು ಕರುಣ್ ನಾಯರ್ ಒಂದು ಶತಕ ಗಳಿಸಿದ್ದಾರೆ. ಸ್ಮರಣ್ ರವಿಚಂದ್ರನ್, ಕೆ.ಎಲ್. ಶ್ರೀಜಿತ್, ಅಭಿವನ್ ಮನೋಹರ್ ಹಾಗೂ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಅವರು ಉತ್ತಮ ಲಯದಲ್ಲಿದ್ದಾರೆ. ಗುಂಪು ಹಂತದಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದಿದ್ದ ತಂಡವು ಕೊನೆಯ ಹಣಾಹಣಿಯಲ್ಲಿ ಮಧ್ಯಪ್ರದೇಶ ಎದುರು ಸೋತಿತ್ತು. ದೇವದತ್ತ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ದೀರ್ಘ ಇನಿಂಗ್ಸ್ ಆಡಿರಲಿಲ್ಲ. ಸೋಲಿಗೆ ಇದು ಪ್ರಮುಖ ಕಾರಣವಾಗಿತ್ತು.

ಕೆ.ಎಲ್. ರಾಹುಲ್, ವೇಗಿ ಪ್ರಸಿದ್ಧ ಕೃಷ್ಣ ಅವರು ಭಾರತ ತಂಡದಲ್ಲಿ ಆಡಲು ತೆರಳಿದ್ದಾರೆ. ಆದ್ದರಿಂದ ಶ್ರೀಜಿತ್ ಕೀಪಿಂಗ್ ಹೊಣೆ ನಿಭಾಯಿಸುವರು. ಬೌಲಿಂಗ್ ವಿಭಾಗವನ್ನು ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ ಮತ್ತು ವಿದ್ಯಾಧರ್ ಪಾಟೀಲ ಅವರೇ ಮುನ್ನಡೆಸಬೇಕಿದೆ. ಹೊಸ ಪ್ರತಿಭೆ ಶ್ರೀಶಾ ಆಚಾರ್ ಮತ್ತು ಶ್ರೇಯಸ್ ಅವರು ಸ್ಪಿನ್‌ ವಿಭಾಗದ ಪ್ರಮುಖರಾಗಿದ್ದಾರೆ. 

ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಗೈರುಹಾಜರಿ ಕಾಡಬಹುದು. ಖಾನ್ ಸಹೋದರರ (ಸರ್ಫರಾಜ್ ಮತ್ತು ಮುಷೀರ್) ಮೇಲೆ ಬ್ಯಾಟಿಂಗ್ ವಿಭಾಗವು ಹೆಚ್ಚು ಅವಲಂಬಿತವಾಗಿದೆ. ಗುಂಪು ಹಂತದಲ್ಲಿ ಸರ್ಫರಾಜ್  ಒಂದು ಶತಕ ಮತ್ತು  ಎರಡು ಅರ್ಧಶತಕಸಹಿತ 303 ರನ್ ಸೇರಿಸಿದ್ದಾರೆ. ಮುಷೀರ್ 3 ಅರ್ಧಶತಕ ಹೊಡೆದಿದ್ದಾರೆ ಮತ್ತು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಓಂಕಾರ್ ತರ್ಮಳೆ ಮತ್ತು ಶಿವಂ ದುಬೆ ಅವರು ಬೌಲಿಂಗ್ ವಿಭಾಗದ ಹೊಣೆ ನಿಭಾಯಿಸಬೇಕಿದೆ. ಶ್ರೇಯಸ್ ಗೈರಿನಲ್ಲಿ ಸಿದ್ಧೇಶ್ ಲಾಡ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಸಿ ಗುಂಪಿನಲ್ಲಿ  20 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಎಂಟರ ಘಟ್ಟಕ್ಕೆ ಬಂದಿದೆ. 

ಕೇಂದ್ರದ ಎರಡನೇ ಮೈದಾನದಲ್ಲಿ ನಡೆಯಲಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಪ್ರದೇಶ ಮತ್ತು ಸೌರಾಷ್ಟ್ರ ಹಣಾಹಣಿ ನಡೆಸಲಿವೆ. 

ತಂಡಗಳು

ಕರ್ನಾಟಕ: ಮಯಂಕ್ ಅಗರವಾಲ್ (ನಾಯಕ) ದೇವದತ್ತ ಪಡಿಕ್ಕಲ್ ಕರುಣ್ ನಾಯರ್ ಸ್ಮರಣ್ ರವಿಚಂದ್ರನ್ ಕೆ.ಎಲ್. ಶ್ರೀಜಿತ್ (ವಿಕೆಟ್‌ಕೀಪರ್) ಅಭಿನವ್ ಮನೋಹರ್ ಶ್ರೇಯಸ್ ಗೋಪಾಲ್ ವೈಶಾಖ ವಿಜಯಕುಮಾರ್ ಎಲ್. ಮನ್ವಂತ್ ಕುಮಾರ್ ಶ್ರೀಶಾ ಆಚಾರ್ ಅಭಿಲಾಷ್ ಶೆಟ್ಟಿ ಬಿ.ಆರ್. ಶರತ್ ಹರ್ಷಿಲ್ ಧರ್ಮಾನಿ ಧ್ರುವ ಪ್ರಭಾಕರ್ ವಿದ್ಯಾಧರ್ ಪಾಟೀಲ. 

ಮುಂಬೈ: ಸಿದ್ಧೇಶ್ ಲಾಡ್ (ನಾಯಕ) ಅಂಗಕ್ರಿಷ್ ರಘುವಂಶಿ ಮುಷೀರ್ ಖಾನ್ ಸರ್ಫರಾಜ್ ಖಾನ್ ಹಾರ್ದಿಕ್ ತಮೋರೆ (ವಿಕೆಟ್‌ಕೀಪರ್) ಶಮ್ಸ್ ಮುಲಾನಿ ಶಶಾಂಕ್ ಅತಾರ್ಡೆ ಓಂಕಾರ್ ತುಕಾರಾಂ ತರ್ಮಳೆ ತುಷಾರ್ ದೇಶಪಾಂಡೆ ತನುಷ್ ಕೋಟ್ಯಾನ್ ಮೋಹಿತ್ ಅವಸ್ತಿ ಅಥರ್ವ ಅಂಕೋಲೆಕರ್ ಸೂರ್ಯಾಂಶ್ ಶೆಡಗೆ ಆಕಾಶ್ ಆನಂದ್ ಇಶಾನ್ ಮೂಲಚಂದಾನಿ. 

ಪಂದ್ಯ ಆರಂಭ: ಬೆಳಿಗ್ಗೆ 9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.