ಬೆಂಗಳೂರು: ನಾಯಕ ಮಯಂಕ್ ಅಗರವಾಲ್ (ಔಟಾಗದೇ 139;127ಎ) ಅವರ ಅಮೋಘ ಶತಕ ಮತ್ತು ಅಭಿಲಾಷ್ ಶೆಟ್ಟಿ (44ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು.
ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ (ಬಿ) ಗುರುವಾರ ನಡೆದ ರೋಚಕ ಹಣಾಹಣಿಯಲ್ಲಿ ಮಯಂಕ್ ಬಳಗವು 1 ವಿಕೆಟ್‌ಗಳಿಂದ ಬಲಿಷ್ಠ ಪಂಜಾಬ್ ತಂಡವನ್ನು ಮಣಿಸಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿತು.
ಈ ಮೊದಲು ಮುಂಬೈ ಮತ್ತು ಪುದುಚೇರಿ ತಂಡವನ್ನು ಹಣಿದಿದ್ದ ಕರ್ನಾಟಕ ತಂಡ, ಒಟ್ಟು 12 ಅಂಕ ಸಂಪಾದಿಸಿದೆ. ಅಗ್ರಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾ ನಾಯಕತ್ವದ ಪಂಜಾಬ್ (8 ಅಂಕ) ಈ ಸೋಲಿನೊಂದಿಗೆ ಮೂರನೇ ಸ್ಥಾನಕ್ಕೆ ಸರಿಯಿತು. ಮುಂಬೈ (8) ಎರಡನೇ ಸ್ಥಾನದಲ್ಲಿದೆ.
ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 49.2 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಅನ್ಮೋಲ್‌ಪ್ರೀತ್ ಸಿಂಗ್ (51;60ಎ) ಮತ್ತು ಅನ್ಮೋಲ್ ಮಲ್ಹೋತ್ರಾ (42;43ಎ) ಉಪಯುಕ್ತ ಕಾಣಿಕೆ ನೀಡಿದರು. ಪಂಜಾಬ್ ನಾಲ್ಕು ವಿಕೆಟ್‌ಗೆ 192 ರನ್ ಗಳಿಸಿ ಸುಸ್ಥಿತಿಯಲ್ಲಿದ್ದಾಗ ವೇಗದ ಬೌಲರ್ ಅಭಿಲಾಷ್ ದಾಳಿಗಿಳಿದು, ಕೇವಲ 10 ರನ್ ಅಂತರದಲ್ಲಿ ನಾಲ್ಕು ವಿಕೆಟ್ ಕಬಲಿಸಿ ಪಟ್ಟು ನೀಡಿದರು. ವಾಸುಕಿ ಕೌಶಿಕ್ ಮತ್ತು ನಿಕಿನ್ ಜೋಸ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಮಯಂಕ್ ಮತ್ತು ನಿಕಿನ್ (13) ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 84 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳು ಪತನಗೊಂಡು ಆತಂಕ ಸೃಷ್ಟಿಯಾಯಿತು. ಮುಂಬೈ ಮತ್ತು ಪುದುಚೇರಿ ವಿರುದ್ಧ ಕ್ರಮವಾಗಿ ಅಜೇಯ ಶತಕ ದಾಖಲಿಸಿದ್ದ ಕೆ.ಎಲ್.ಶ್ರೀಜಿತ್ (9), ಮತ್ತು ಆರ್.ಸ್ಮರಣ್ (5) ನಿರಾಸೆ ಮೂಡಿಸಿದರು. ಕೆ.ವಿ. ಅನೀಶ್ (7) ಅವರೂ ಬೇಗನೆ ನಿರ್ಗಮಿಸಿದರು.
ಈ ಹಂತದಲ್ಲಿ ಮಯಂಕ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಗೋಪಾಲ್ (29;39ಎ) ಅವರೊಂದಿಗೆ 67 ರನ್ ಸೇರಿದರು. ನಂತರ ಬಂದ ಪ್ರವೀಣ್ ದುಬೆ (11) ಮತ್ತು ಅಭಿನವ್ ಮನೋಹರ್ (20) ಅವರು ಮಯಂಕ್‌ಗೆ ಕೊಂಚ ಸಾಥ್ ನೀಡಿ, ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಈ ವೇಳೆ ಮೂರು ರನ್ ಅಂತರದಲ್ಲಿ ಮೂರು ವಿಕೆಟ್ ಪತನಗೊಂಡು, ಪಂದ್ಯ ಮತ್ತೆ ತಿರುವು ಪಡೆಯಿತು.
ಮತ್ತೊಂದೆಡೆ ಗಟ್ಟಿಯಾಗಿ ನಿಂತಿದ್ದ ಮಯಂಕ್ ಧೃತಿಗೆಡದೆ, ಒತ್ತಡವನ್ನು ನಿಭಾಯಿಸಿಕೊಂಡು ಮುರಿಯದ 10ನೇ ವಿಕೆಟ್ ಜೊತೆಯಾಟದಲ್ಲಿ ವಾಸುಕಿ ವೈಭವ್ (7;10ಎ) ಅವರೊಂದಿಗೆ 48 ರನ್ ಸೇರಿಸಿ ಗೆಲುವಿನ ರೂವಾರಿಯಾದರು. ಅವರ ಇನಿಂಗ್ಸ್‌ನಲ್ಲಿ 17 ಬೌಂಡಿರಿ ಮತ್ತು ಮೂರು ಸಿಕ್ಸರ್ ಒಳಗೊಂಡಿತ್ತು. ಇನ್ನೂ 15 ಎಸೆತ ಬಾಕಿ ಇರುವಂತೆ ಕರ್ನಾಟಕ 9 ವಿಕೆಟ್‌ಗೆ 251 ರನ್ ಗಳಿಸಿ ಜಯ ಸಾಧಿಸಿತು. ಪಂಜಾಬ್‌ನ ಸ್ಪಿನ್ನರ್ ಅಭಿಷೇಕ್ ಶರ್ಮಾ ನಾಲ್ಕು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಸನ್ವೀರ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.
ಕರ್ನಾಟಕ ಶನಿವಾರ ಅರುಣಾಚಲ ಪ್ರದೇಶ ತಂಡವನ್ನು ಎದುರಿಸಲಿದೆ. ಆಡಿರುವ ಮೂರೂ ಪಂದ್ಯಗಳನ್ನು ಸೋತಿರುವ ಅರುಣಾಚಲ ಪ್ರದೇಶ 8 ತಂಡಗಳ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರ್:
ಪಂಜಾಬ್: 49.2 ಓವರ್‌ಗಳಲ್ಲಿ 247 (ಪ್ರಭಾಸಿಮ್ರನ್ ಸಿಂಗ್ 26, ಅನ್ಮೋಲ್‌ಪ್ರೀತ್ ಸಿಂಗ್ 51, ನೆಹಾಲ್ ವಧೇರಾ 37, ಅನ್ಮೋಲ್ ಮಲ್ಹೋತ್ರಾ 42, ಸನ್ವೀರ್ ಸಿಂಗ್ 35; ವಾಸುಕಿ ಕೌಶಿಕ್ 43ಕ್ಕೆ 2, ಅಭಿಲಾಷ್ ಶೆಟ್ಟಿ 44ಕ್ಕೆ 5, ನಿಕಿನ್ ಜೋಸ್ 47ಕ್ಕೆ 2).
ಕರ್ನಾಟಕ: 47.3 ಓವರ್‌ಗಳಲ್ಲಿ 251 (ಮಯಂಕ್ ಅಗರವಾಲ್ ಔಟಾಗದೇ 139, ಶ್ರೇಯಸ್ ಗೋಪಾಲ್ 29, ಅಭಿನವ್ ಮನೋಹರ್ 20; ಅಭಿಷೇಕ್ ಶರ್ಮಾ 56ಕ್ಕೆ 4, ಅರ್ಷದೀಪ್ ಸಿಂಗ್ 48ಕ್ಕೆ 2, ಸನ್ವೀರ್ ಸಿಂಗ್ 33ಕ್ಕೆ 2). ಫಲಿತಾಂಶ: ಕರ್ನಾಟಕಕ್ಕೆ ಒಂದು ವಿಕೆಟ್ ಜಯ, ನಾಲ್ಕು ಅಂಕ. ಪಂದ್ಯದ ಆಟಗಾರ: ಮಯಂಕ್ ಅಗರವಾಲ್.
(ಮಾಹಿತಿ: ಬಿಸಿಸಿಐ.ಟಿವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.