ADVERTISEMENT

ವಿಜಯ್ ಹಜಾರೆ ಟ್ರೋಫಿ | ವೈಶಾಖ ಅಮೋಘ ಬೌಲಿಂಗ್: ಸೆಮಿಗೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:40 IST
Last Updated 11 ಡಿಸೆಂಬರ್ 2023, 13:40 IST
ವೈಶಾಖ ವಿಜಯಕುಮಾರ್
ವೈಶಾಖ ವಿಜಯಕುಮಾರ್   

ರಾಜ್‌ಕೋಟ್: ವೈಶಾಖ ವಿಜಯಕುಮಾರ್ ಅವರ ಶಿಸ್ತಿನ ದಾಳಿಯ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. 

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಎ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ತಂಡವು 7 ವಿಕೆಟ್‌ಗಳಿಂದ ವಿದರ್ಭ ಎದುರು ಜಯಿಸಿತು. ಇದೇ 14ರಂದು ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಯಂಕ್ ಬಳಗವು ರಾಜಸ್ಥಾನ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ವೈಶಾಖ (44ಕ್ಕೆ4) ಮತ್ತು ಬೌಲರ್‌ಗಳು ವಿದರ್ಭ ತಂಡವನ್ನು 173 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

ADVERTISEMENT

ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು 40.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 177 ರನ್ ಗಳಿಸಿ ಗೆದ್ದಿತು. ಕರ್ನಾಟಕದ ಆರಂಭಿಕ ಜೋಡಿ  ಆರ್. ಸಮರ್ಥ್ (ಔಟಾಗದೆ 72, 113ಎ, 4X7) ಮತ್ತು ಮಯಂಕ್ (51; 64ಎ, 4X6, 6X1) ಲಯ ಕಂಡುಕೊಂಡರು. ಮೊದಲ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು.

ವೈಶಾಖ ದಾಳಿ: ವಿದರ್ಭ ತಂಡವನ್ನು ಪ್ರತಿನಿಧಿಸಿರುವ ಕರುಣ್ ನಾಯರ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ವೈಶಾಖ ಮಿಂಚಿದರು. 

ಕರುಣ್ ಅವರು ಮೂರು ಎಸೆತಗಳಲ್ಲಿ ಐದು ರನ್‌ ಮಾತ್ರ ಗಳಿಸಿ  ಔಟಾದರು. ಅವರನ್ನು ವೈಶಾಖ ಕ್ಲೀನ್‌ ಬೌಲ್ಡ್‌ ಮಾಡಿದರು.

ವೈಶಾಖ, ಕೌಶಿಕ್ ಮತ್ತು ಮನೋಜ್ ಅವರ ಸಂಘಟಿತ ದಾಳಿ ಹಾಗೂ  ಫೀಲ್ಡರ್‌ಗಳ ಚುರುಕುತನದಿಂದಾಗಿ ವಿದರ್ಭ ತಂಡವು ಆರಂಭಿಕ ಹಂತದಲ್ಲಿಯೇ ಪೆಟ್ಟು ತಿಂದಿತು. ಕೇವಲ 70 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು.

ಆರಂಭಿಕ ಬ್ಯಾಟರ್ ಅಥರ್ವ ತೈಡೆ ಅವರನ್ನು ತಮ್ಮ ಚುರುಕಿನ ಫೀಲ್ಡಿಂಗ್‌ ಮೂಲಕ ರನ್‌ಔಟ್ ಮಾಡಿದ ಮಯಂಕ್ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಅಮನ್ ನಾಯ್ಕಂಡೆ ಅವರಿಗೆ ಖಾತ ತೆರೆಯಲು ವೈಶಾಖ ಅಡ್ಡಿಯಾದರು.

ಹರ್ಷ ದುಬೆ (1 ರನ್) ಕೂಡ ವೈಶಾಖಗೆ ವಿಕೆಟ್ ಒಪ್ಪಿಸಿದರು. ಇನ್ನೊಂದು ಬದಿಯಿಂದ ಕೌಶಿಕ್ ರನ್‌ಗಳಿಗೆ ಕಡಿವಾಣ ಹಾಕಿದರು. ಮನೋಜ್ ಮತ್ತು ಜೆ. ಸುಚಿತ್ ಅವರು ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು:

ವಿದರ್ಭ: 44.5 ಓವರ್‌ಗಳಲ್ಲಿ 173 (ಅಕ್ಷಯ್ ವಾಡ್ಕರ್ 32, ಯಶ್ ಕದಂ 38, ಶುಭಂ ದುಬೆ 41, ದರ್ಶನ್ ನಾಯ್ಕಂಡೆ 20, ವೈಶಾಖ ವಿಜಯಕುಮಾರ್ 44ಕ್ಕೆ4, ಮನೋಜ್ ಬಾಂಢಗೆ 27ಕ್ಕೆ2, ಜೆ. ಸುಚಿತ್ 30ಕ್ಕೆ2)

ಕರ್ನಾಟಕ: 40.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 177 (ಆರ್. ಸಮರ್ಥ್ ಔಟಾಗದೆ 72, ಮಯಂಕ್ ಅಗರವಾಲ್ 51, ನಿಕಿನ್ ಜೋಸ್ 31, ಕೃಷ್ಣನ್ ಶ್ರೀಜಿತ್ 15, ಹರ್ಷ ದುಬೆ 32ಕ್ಕೆ2) ಫಲಿತಾಂಶ: ಕರ್ನಾಟಕ ತಂಡಕ್ಕೆ 7 ವಿಕೆಟ್‌ಗಳ ಜಯ.

ಲೊಮ್ರೊರ್ ಶತಕ: ಸೆಮಿಗೆ ರಾಜಸ್ಥಾನ

ಮಹಿಪಾಲ್ ಲೊಮ್ರೊರ್ ಅಜೇಯ ಶತಕದ (122; 114ಎ 4X6 6X6)  ಬಲದಿಂದ ರಾಜಸ್ಥಾನ ತಂಡವು 200 ರನ್‌ಗಳ ಭರ್ಜರಿ ಅಂತರದಿಂದ ಕೇರಳ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಇನ್ನುಳಿದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಮುಂಬೈ ತಂಡವು ತಮಿಳುನಾಡು ಎದುರು 7 ವಿಕೆಟ್‌ಗಳಿಂದ ಸೋತಿತು. ಇನ್ನೊಂದರಲ್ಲಿ ಹರಿಯಾಣ ತಂಡವು 4 ವಿಕೆಟ್‌ಗಳಿಂದ ಬಂಗಾಳವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು

ರಾಜಸ್ಥಾನ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 267 (ಮಹಿಪಾಲ್ ಲೊಮ್ರೊರ್ ಔಟಾಗದೆ 122 ಕುನಾಲ್ ಸಿಂಗ್ ರಾಥೋಡ್ 66 ಬಸಿಲ್ ಥಂಪಿ 57ಕ್ಕೆ2 ಅಕಿನ್ ಸಲ್ಹಾರ್ 62ಕ್ಕೆ3)

ಕೇರಳ: 21 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 67 (ಸಚಿನ್ ಬೇಬಿ 28 ರೋಹನ್ ಕನ್ನುಮಾಳ 11 ಖಲೀಲ್ ಅಹಮದ್ 15ಕ್ಕೆ2 ಅರಾಫತ್ ಖಾನ್ 20ಕ್ಕೆ3 ಅನಿಕೇತ್ ಚೌಧರಿ 4ಕ್ಕೆ4)

ಫಲಿತಾಂಶ: ರಾಜಸ್ಥಾನ ತಂಡಕ್ಕೆ 200 ರನ್‌ಗಳ ಜಯ.

ಮುಂಬೈ: 48.3 ಓವರ್‌ಗಳಲ್ಲಿ 227 (ಜಯ್ ಗೋಕುಲ್ ಬಿಸ್ತಾ 37 ಹಾರ್ದಿಕ್ ತಮೊರೆ 24 ಪ್ರಸಾದ್ ಪವಾರ್ 59 ಶಿವಂ ದುಬೆ 45 ಶಮ್ಸ್ ಮುಲಾನಿ 27 ಎಂ. ಸಿದ್ಧಾರ್ಥ್ 35ಕ್ಕೆ2 ಚಕ್ರವರ್ತಿ 37ಕ್ಕೆ3 ಸಾಯಿಕಿಶೋರ್ 51ಕ್ಕೆ3 ಬಾಬಾ ಅಪರಾಜಿತ್ 31ಕ್ಕೆ2)

ತಮಿಳುನಾಡು: 43.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 229 (ಬಾಬಾ ಅಪರಾಜಿತ್ 45 ಎನ್. ಜಗದೀಶನ್ 27 ಬಾಬಾ ಇಂದ್ರಜೀತ್ ಔಟಾಗದೆ 103 ವಿಜಯ್ ಶಂಕರ್ ಔಟಾಗದೆ 51 ತನುಷ್ ಕೋಟ್ಯಾನ್ 55ಕ್ಕೆ1)

ಫಲಿತಾಂಶ: ತಮಿಳುನಾಡು ತಂಡಕ್ಕೆ 7 ವಿಕೆಟ್‌ ಜಯ.

ಬಂಗಾಳ: 50 ಓವರ್‌ಗಳಲ್ಲಿ 225 (ಅಭಿಷೇಕ್ ಪೊರೆಲ್ 24 ಸುದೀಪ್ ಘರಮಿ 21 ಶಾಬಾಜ್ ಅಹಮದ್ 100 ಪ್ರದಿಪ್ತ್ ಪ್ರಾಮಾಣಿಕ್ 21 ಸುಮಿತ್ ಕುಮಾರ್ 27ಕ್ಕೆ2 ಯಜುವೇಂದ್ರ ಚಾಹಲ್ 37ಕ್ಕೆ4 ರಾಹುಲ್ ತೆವಾಟಿಯಾ 32ಕ್ಕೆ2)

ಹರಿಯಾಣ: 45.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 226 (ಅಂಕಿತ್ ಕುಮಾರ್ 102 ಅಶೋಕ್ ಮನೇರಿಯಾ 39 ನಿಶಾಂತ್ ಸಿಂಧು 27 ಮೊಹಮ್ಮದ್ ಕೈಫ್ 44ಕ್ಕೆ2 ಪ್ರದಿಪ್ತ್ ಪ್ರಾಮಾಣಿಕ್ 29ಕ್ಕೆ2)

ಫಲಿತಾಂಶ:ಹರಿಯಾಣ ತಂಡಕ್ಕೆ 4 ವಿಕೆಟ್‌ಗಳ ಜಯ.

ಸೆಮಿಫೈನಲ್: ಹರಿಯಾಣ–ತಮಿಳುನಾಡು (ಡಿ. 13) ಕರ್ನಾಟಕ–ರಾಜಸ್ಥಾನ (ಡಿ. 14) ಸ್ಥಳ: ರಾಜ್‌ಕೋಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.