
ಬೆಂಗಳೂರು: ಬುಧವಾರ ಬೆಳಿಗ್ಗೆ ಎಂಟು ಗಂಟೆಯಾದರೂ ಚಳಿ ಸರಿದಿರಲಿಲ್ಲ ಕಾವು ಹೆಚ್ಚಿಸಿಕೊಳ್ಳುವ ಭರದಲ್ಲಿದ್ದ ಬಿಸಿಲಿನ ಕಿರಣಗಳಲ್ಲಿ ಮಂಜಿನ ಹನಿಗಳು ಮಿನುಗಿ ಮರೆಯಾಗುತ್ತಿದ್ದವು. ಆದರೆ ಬೆಂಗಳೂರು ಹೊರವಲಯದ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮುಂದೆ ಜಮಾಯಿಸಿದ್ದ ಜನರಿಗೆ ಪ್ರಕೃತಿಯ ಈ ಚೆನ್ನಾಟದತ್ತ ಗಮನವಿರಲಿಲ್ಲ. ಅವರ ಚಿತ್ತವೆಲ್ಲ ತಮ್ಮ ನೆಚ್ಚಿನ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯತ್ತಲೇ ಇತ್ತು.
ದೆಹಲಿ ತಂಡದ ಆಟಗಾರರು ಇದ್ದ ಬಸ್ ಬರುತ್ತಿದ್ದಂತೆಯೇ ಕೊಹ್ಲಿ..ಕೊಹ್ಲಿ..ಆರ್‌ಸಿಬಿ..ಆರ್‌ಸಿಬಿ ಎಂದು ಜನರು ಕೂಗಿದರು. ಮುಖ್ಯದ್ವಾರದಿಂದ ಬಸ್ ಒಳಗೆ ಸಾಗಿತು. ಬೃಹತ್ ಗೇಟ್ ಮುಚ್ಚಿತು. ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಅಲ್ಲಿ ಸೇರಿದ್ದ ಜನರನ್ನು ಚದುರಿಸುವತ್ತ ಗಮನ ಹರಿಸಿದರು. ಆದರೆ ಅಭಿಮಾನಿಗಳ ಉತ್ಸಾಹಕ್ಕೆ ಕಡಿವಾಣ ಹಾಕಲು ಸಾಧ್ಯವೇ?
ಶ್ರೇಷ್ಠತಾ ಕೇಂದ್ರದ ಎರಡನೇ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ಆಂಧ್ರ ತಂಡಗಳ ಪೈಪೋಟಿಯನ್ನು ನೋಡುವ ಎಲ್ಲ ಪ್ರಯತ್ನಗಳನ್ನೂ ಜನರು ಮಾಡಿದರು. ಮೈದಾನದ ಸುತ್ತ ಇರುವ ಎತ್ತರದ ಕಂಪೌಂಡ್ ಹಿಂದೆ ನಿಂತು ಇಣುಕಿದರು. ರಸ್ತೆ ಬದಿ ನಿಂತ ಲಾರಿ, ಮರಗಳನ್ನು ಹತ್ತಿ ಕೊಹ್ಲಿಯನ್ನು ನೋಡುವ ಸಾಹಸ ಮಾಡಿದರು.
ಇದೆಲ್ಲದರ ನಡುವೆ ವಿರಾಟ್ ಚೆಂದದ ಶತಕ ದಾಖಲಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16 ಸಾವಿರ ರನ್‌ಗಳ ಗಡಿ ದಾಟಿದರು. ದೆಹಲಿ ತಂಡವು 4 ವಿಕೆಟ್‌ಗಳಿಂದ ಗೆದ್ದಿತು.
ಟಾಸ್ ಗೆದ್ದ ದೆಹಲಿ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ರಿಕಿ ಭುಯ್ (122; 105ಎ, 4X11, 6X7) ಅಬ್ಬರದ ಶತಕ ಬಾರಿಸಿದರು. ಇದರ ನಡುವೆಯೂ ದೆಹಲಿ ಬೌಲರ್ ಸಿಮರ್‌ಜೀತ್ ಸಿಂಗ್ ಐದು ವಿಕೆಟ್ ಗಳಿಸಿ ಪಂದ್ಯಶ್ರೇಷ್ಠರಾದರು. ಅದರಿಂದಾಗಿ ಆಂಧ್ರ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 298 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ದೆಹಲಿ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ನಿತೀಶ್ ಕುಮಾರ್ ರೆಡ್ಡಿ ಆಘಾತ ನೀಡಿದರು. ಮೂರನೇ ಎಸೆತದಲ್ಲಿಯೇ ಅರ್ಪಿತ್ ರಾಣಾ ವಿಕೆಟ್ ಪಡೆದರು. ಆಗ ಕ್ರೀಸ್‌ಗೆ ಬಂದ ವಿರಾಟ್ ತಾವೆದುರಿಸಿದ ಮೂರನೇ ಎಸೆತವನ್ನು ನೇರ ಬೌಂಡರಿಗೆರೆ ದಾಟಿಸಿದರು. ಇನ್ನೊಂದು ಬದಿಯಲ್ಲಿ ಪ್ರಿಯಾಂಶ್ ಕೂಡ ಬೀಸಾಟವಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಪ್ರಿಯಾಂಶ್ ಮತ್ತು ಕೊಹ್ಲಿ 113 ರನ್ ಸೇರಿಸಿದರು. ಪ್ರಿಯಾಂಶ್ ವಿಕೆಟ್ ಗಳಿಸಿದ ಕೆ.ಎಸ್. ರಾಜು ಜೊತೆಯಾಟವನ್ನು ಮುರಿದರು.
ಆದರೆ ಕೊಹ್ಲಿಗೆ ಆಂಧ್ರ ಫೀಲ್ಡರ್‌ಗಳು ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿ ಜೀವದಾನ ನೀಡಿದರು. ಕಟ್, ಸ್ಟ್ರೇಟ್ ಡ್ರೈವ್, ಪುಲ್‌ಗಳ ಸೊಗಸಾದ ಆಟ ತೋರಿದ ಕೊಹ್ಲಿ ಬಿರುಬಿಸಿಲಿನಲ್ಲಿ 83 ಎಸೆತಗಳಲ್ಲಿ ಶತಕ ಹೊಡೆದರು. 97 ರನ್ ಗಳಿಸಿದಾಗಲೂ ಅವರಿಗೆ ಒಂದು ಜೀವದಾನ ಲಭಿಸಿತ್ತು. ನಂತರದ ಎಸೆತವನ್ನು ಅಂಪೈರ್ ತಲೆ ಮೇಲಿಂದ ಬೌಂಡರಿಗಟ್ಟಿದ ಅವರು ಶತಕ ಗಳಿಸಿದರು. ದೆಹಲಿ ಆಟಗಾರರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಕಂಪೌಂಡ್ ಹೊರಗಿನಿಂದ ಇಣುಕುನೋಟ ಬೀರುತ್ತಿದ್ದವರ ಚಪ್ಪಾಳೆ ಸದ್ದು ಕೂಡ ಸೇರಿಕೊಂಡಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯಕ್ಕೆ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಆದ್ದರಿಂದ ಮಂಗಳವಾರ ಮಧ್ಯಾಹ್ನ ಈ ಪಂದ್ಯವನ್ನು ಬಿಸಿಸಿಐ ಸಿಒಇಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಸಂಜೆ ಪಂದ್ಯ ಮುಗಿದ ನಂತರ ಕೊಹ್ಲಿ ಪಯಣಿಸುವ ಬಸ್ ನೋಡಲು ಗೇಟ್ ಮುಂದೆ ಜನರ ದಂಡು ಸೇರಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೊಹ್ಲಿ ಅಭಿಮಾನಿಗಳ ಭರಾಟೆ ಜೋರಾಗಿತ್ತು.
ಸಂಕ್ಷಿಪ್ತ ಸ್ಕೋರು: ಆಂಧ್ರ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 298 (ರಶೀದ್ 31, ರಿಕಿ ಭುಯ್ 122, ನಿತೀಶಕುಮಾರ್ ರೆಡ್ಡಿ 23, ಹೇಮಂತ್ ರೆಡ್ಡಿ 27, ಪ್ರಸಾದ್ 28, ಸಿಮರ್‌ಜೀತ್ ಸಿಂಗ್ 54ಕ್ಕೆ5, ಪ್ರಿನ್ಸ್ ಯಾದವ್ 50ಕ್ಕೆ3) ದೆಹಲಿ: 37.4 ಓವರ್‌ಗಳಲ್ಲಿ 6ಕ್ಕೆ300 (ಪ್ರಿಯಾಂಶ್ ಆರ್ಯ 74, ವಿರಾಟ್ ಕೊಹ್ಲಿ 131, ನಿತೀಶ್ ರಾಣಾ 77, ಪಿವಿಎಸ್‌ಎನ್ ರಾಜು 74ಕ್ಕೆ2, ಹೇಮಂತ್ ರೆಡ್ಡಿ 6ಕ್ಕೆ2) ಫಲಿತಾಂಶ: ದೆಹಲಿ ತಂಡಕ್ಕೆ 4 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.