
ಬೆಂಗಳೂರು: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ಬುಧವಾರ ಮಧ್ಯಾಹ್ನ ವಿರಾಟ್ ಕೊಹ್ಲಿಯ ಬ್ಯಾಟಿಗೆ ಚೆಂಡು ಬಡಿದ ಸದ್ದು ಪ್ರತಿಧ್ವನಿಸುತ್ತಿತ್ತು. ಪ್ರೇಕ್ಷಕರೇ ಇಲ್ಲದ ಕ್ರೀಡಾಂಗಣದಲ್ಲಿ ಸಹ ಆಟಗಾರರ ಚಪ್ಪಾಳೆ, ಕೇಂದ್ರದ ಸಿಬ್ಬಂದಿಯ ಹರ್ಷೋದ್ಗಾರಗಳಷ್ಟೇ ಕೇಳುತ್ತಿದ್ದವು.
ಆದರೆ ‘ಬ್ಯಾಟಿಂಗ್ ಚಾಂಪಿಯನ್’ ವಿರಾಟ್ ಕೊಹ್ಲಿ ಅವರು ಮಾತ್ರ ತಮ್ಮದೇ ಲಹರಿಯಲ್ಲಿದ್ದರು. ಈಚೆಗೆ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಘಟಾನುಘಟಿ ಬೌಲರ್‌ಗಳು ಆಡಿದ ರೀತಿಯಲ್ಲಿಯೇ ಆಂಧ್ರದ ಎದುರೂ ಆಡಿದರು. ಅವರ ಶತಕದ ಆಟದಿಂದಾಗಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಅಮೋಘ ಆರಂಭ ದೊರೆಯಿತು. ಆಂಧ್ರದ ಎದುರು ಗೆದ್ದ ದೆಹಲಿ ತಂಡವು ಈಗ ಶುಕ್ರವಾರ ನಡೆಯಲಿರುವ ಎರಡನೇ ಹಣಾಹಣಿಯಲ್ಲಿ ಗುಜರಾತ್ ಎದುರು ಕಣಕ್ಕಿಳಿಯಲಿದೆ.
15 ವರ್ಷಗಳ ನಂತರ ತಮ್ಮ ತವರು ತಂಡವನ್ನು ಈ ಟೂರ್ನಿಯಲ್ಲಿ ವಿರಾಟ್ ಪ್ರತಿನಿಧಿಸುತ್ತಿದ್ದಾರೆ. ತಂಡದಲ್ಲಿ ವೇಗಿ ಇಶಾಂತ್ ಶರ್ಮಾ ಒಬ್ಬರನ್ನು ಬಿಟ್ಟರೆ ಉಳಿದೆಲ್ಲ ಆಟಗಾರರೂ ವಿರಾಟ್ ಅವರಿಗೆ ಜೂನಿಯರ್ಸ್. ಆದರೂ ಅವರೊಂದಿಗೆ ಉತ್ತಮ ತಾಳಮೇಳ ಸಾಧಿಸುವಲ್ಲಿ 37 ವರ್ಷದ ವಿರಾಟ್ ಯಶಸ್ವಿಯಾಗಿದ್ದಾರೆ. ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ವಿರಾಟ್ ಅವರೊಂದಿಗೆ ಪ್ರಿಯಾಂಶ್ ಆರ್ಯ ಹಾಗೂ ನಿತೀಶ್ ರಾಣಾ ಜೊತೆಯಾಟಗಳನ್ನು ಆಡಿದ್ದರು. ಈ ಇಬ್ಬರೂ ಆಟಗಾರರಿಗಿಂತಲೂ ಚುರುಕಾಗಿ ಪಿಚ್‌ನಲ್ಲಿ 2 ಮತ್ತು 3 ರನ್‌ಗಳನ್ನು ಗಳಿಸಿದರು ವಿರಾಟ್. ಬಿರುಬಿಸಿಲಿನಲ್ಲಿ ಫೀಲ್ಡಿಂಗ್ ಮಾಡುವಾಗಲೂ ಅವರು ಹದ ತಪ್ಪಲಿಲ್ಲ.
ಆದರೆ ತಂಡದ ನಾಯಕ ರಿಷಭ್ ಪಂತ್ ಅವರಿಗೆ ಲಯಕ್ಕೆ ಮರಳುವ ಸವಾಲು ಇದೆ. ಅದಕ್ಕಾಗಿಯೇ ಬುಧವಾರ ಪಂದ್ಯದ ನಂತರ ಸುಮಾರು 40 ನಿಮಿಷ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ದೆಹಲಿ ತಂಡದ ಬೌಲರ್‌ಗಳಾದ ಸಿಮರ್‌ಜೀತ್ ಸಿಂಗ್, ಇಶಾಂತ್, ನವದೀಪ್ ಸೈನಿ ಅವರಿಗೆ ಗುಜರಾತ್ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇದೆ.
ಚಿಂತನ್ ಗಜ ನಾಯಕತ್ವದ ಗುಜರಾತ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಜಯಿಸಿದೆ.ಬ್ಯಾಟರ್ ಆರ್ಯ ದೇಸಾಯಿ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಉತ್ತಮ ಲಯದಲ್ಲಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.