
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಆರ್ಯಸಿನ್ಹ್ ಎನ್. ಚಾವ್ಡಾ ಅವರ ಶತಕ, ಶ್ಯಮಂತಕ್ ಅನಿರುದ್ಧ್ ಮತ್ತು ಆದಿತ್ಯ ಝಾ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಬುಧವಾರ 131.5 ಓವರ್‌ಗಳಲ್ಲಿ 9 ವಿಕೆಟ್‌ಗೆ 473 ರನ್ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು.
ಛತ್ತೀಸಗಢದ ಭಿಲಾಯಿಯಲ್ಲಿ ನಡೆಯುತ್ತಿರುವ ಡಿ ಗುಂಪಿನ ಪಂದ್ಯದಲ್ಲಿ 5 ವಿಕೆಟ್‌ಗೆ 262 ರನ್ ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡಕ್ಕೆ ಶ್ಯಮಂತಕ್ (92) ಹಾಗೂ ಆರ್ಯಸಿನ್ಹ್ ಆಸರೆಯಾದರು. ಆರಂಭ ಆಟಗಾರ ಆರ್. ರೋಹಿತ್ ರೆಡ್ಡಿ ಅವರು ಮಂಗಳವಾರ 8 ರನ್ ಗಳಿಂದ ಶತಕ ವಂಚಿತರಾದರೆ, ಬುಧವಾರ ಶ್ಯಮಂತಕ್ ಅವರೂ ಇಷ್ಟೇ ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಕೆಳ ಕ್ರಮಾಂಕದ ಆಟಗಾರ ಆದಿತ್ಯ ಅವರು ಔಟಾಗದೇ 65 ರನ್ ಗಳಿಸಿದರು.
ಇನಿಂಗ್ಸ್ ಆರಂಭಿಸಿದ ಆಂಧ್ರ ಪ್ರದೇಶ ತಂಡವು ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಟಿ.ಹರ್ಷ ಸಾಯಿ ಸಾತ್ವಿಕ್ (ಔಟಾಗದೇ 84) ಹಾಗೂ ಭಾನು ಶ್ರೀ ಹರ್ಷ (ಔಟಾಗದೇ 88) ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 131.5 ಓವರ್‌ಗಳಲ್ಲಿ 9 ವಿಕೆಟ್‌ಗೆ 473 (ಆರ್ಯಸಿನ್ಹ್ ಎನ್. ಚಾವ್ಡಾ 119, ಶ್ಯಮಂತಕ್ ಅನಿರುದ್ಧ್ 92, ಆದಿತ್ಯ ಝಾ ಔಟಾಗದೇ 65; ಯಲಮಂಚಿಲಿ ಲಲಿತ್ 53ಕ್ಕೆ3, ಕೆ.ಗೌತಮ್ ಆರ್ಯ 146ಕ್ಕೆ3).
ಆಂಧ್ರ ಪ್ರದೇಶ: 48 ಓವರ್‌ಗಳಲ್ಲಿ 2 ವಿಕೆಟ್‌ಗೆ 189 (ಟಿ.ಹರ್ಷ ಸಾಯಿ ಸಾತ್ವಿಕ್ ಔಟಾಗದೇ 84, ಭಾನು ಶ್ರೀ ಹರ್ಷ ಔಟಾಗದೇ 88; ಸಮರ್ಥ್ ಎಂ. ಕುಲಕರ್ಣಿ 25ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.