
ಬೆಂಗಳೂರು: ಎಡಗೈ ಸ್ಪಿನ್ನರ್ ಸುವಿಕ್ ಗಿಲ್ ಅವರು ಒಟ್ಟು 11 ವಿಕೆಟ್ ಗಳಿಸುವ ಮೂಲಕ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಗೋವಾ ತಂಡದ ಎದುರು ಕರ್ನಾಟಕವು ಇನಿಂಗ್ಸ್ ಹಾಗೂ 147 ರನ್‌ಗಳಿಂದ ಗೋವಾ ತಂಡವನ್ನು ಮಣಿಸಿತು. ಕರ್ನಾಟಕ ತಂಡದ ಆರಂಭ ಆಟಗಾರರಾದ ನಿರಂಜನ್ ಅಶೋಕ್ ಮತ್ತು ಆರ್.ರೋಹಿತ್ ರೆಡ್ಡಿ ಅವರೂ ಶತಕಗಳ ಕಾಣಿಕೆ ನೀಡಿದರು.
ಛತ್ತೀಸಗಡದ ರಾಯಪುರದ ಆರ್‌ಡಿಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 154 ರನ್‌ಗಳೊಂದಿಗೆ ಆಟ ಮುಂದುವರಿಸಿದ ಆರೂಷ್ ಜೈನ್ ಬಳಗವು 76 ಓವರ್‌ಗಳಲ್ಲಿ 6 ವಿಕೆಟ್‌ಗೆ 434 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಿರಂಜನ್ (130) ಹಾಗೂ ರೋಹಿತ್ (104) ಶತಕ ದಾಖಲಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶ್ಯಮಂತಕ್ ಅನಿರುದ್ಧ್ ಅವರು 64 ಎಸೆತಗಳಲ್ಲಿ 82 ರನ್ ಗಳಿಸಿದರು. ಮೃಣಾಲ್ ನಾಯಕ್ (130ಕ್ಕೆ3) ಅವರು ಗೋವಾ ತಂಡದ ಯಶಸ್ವಿ ಬೌಲರ್ ಎನಿಸಿದರು.
ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಎದುರಿಸಿದ ವಿನೀತ್ ಕಾಮತ್ ಪಡೆಯು ಸುವಿಕ್ (55ಕ್ಕೆ6) ಬೌಲಿಂಗ್ ಎದುರು ಎರಡನೇ ಇನಿಂಗ್ಸ್‌ನಲ್ಲಿ 127 ರನ್‌ಗಳಿಗೆ ಕುಸಿಯಿತು. ಅದೀಪ್ ಮಿಸ್ಕಿನ್ (27) ಹಾಗೂ ಶೌನಕ್ ತೇಲಿ (ಔಟಾಗದೇ 23) ಕೊಂಚ ಹೋರಾಟ ತೋರಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸುಕೃತ್ ಜೆ. 23 ರನ್‌ಗಳಿಗೆ 2 ವಿಕೆಟ್ ಪಡೆದರೆ, ಅಥರ್ವ ಎಸ್. ದೇಶಪಾಂಡೆ (19ಕ್ಕೆ1) ಹಾಗೂ ವಿಧಾತ್ ಎಸ್. (3ಕ್ಕೆ1) ಉತ್ತಮ ಬೌಲಿಂಗ್ ಮಾಡಿದರು.
ಸುವಿಕ್ ಅವರು ಮೊದಲ ಇನಿಂಗ್ಸ್‌ನಲ್ಲಿ 32 ರನ್ ನೀಡಿ 5 ವಿಕೆಟ್ ಪಡೆದಿದ್ದರು.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ಗೋವಾ: 160; ಕರ್ನಾಟಕ: 76 ಓವರ್‌ಗಳಲ್ಲಿ 6 ವಿಕೆಟ್‌ಗೆ 434 ಡಿ. (ನಿರಂಜನ್ ಅಶೋಕ್ 130, ಆರ್. ರೋಹಿತ್ ರೆಡ್ಡಿ 104, ಶ್ಯಮಂತಕ್ ಅನಿರುದ್ಧ್ 82, ಸುಕೃತ್ ಜೆ. 37; ಮೃಣಾಲ್ ನಾಯಕ್ 130ಕ್ಕೆ3). ಎರಡನೇ ಇನಿಂಗ್ಸ್: ಗೋವಾ 39 ಓವರ್‌ಗಳಲ್ಲಿ 127 (ಅದೀಪ್ ಮಿಸ್ಕಿನ್ 27, ಶೌನಕ್ ತೇಲಿ ಔಟಾಗದೇ 23; ಸುವಿಕ್ ಗಿಲ್ 55ಕ್ಕೆ6, ಸುಕೃತ್ ಜೆ. 23ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.