
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ಬರೋಡಾ ತಂಡದ ಸಂಘಟಿತ ಬೌಲಿಂಗ್ ದಾಳಿ ಎದುರು ಕುಸಿಯುತ್ತಿದ್ದ ಕರ್ನಾಟಕ ತಂಡಕ್ಕೆ ಸುಕೃತ್ ಜೆ. (107 ರನ್; 211 ಎ; 4x12, 6x2) ಆಸರೆಯಾದರು. ಅವರ ಶತಕದ ಬಲದಿಂದ ರಾಜ್ಯ ತಂಡವು ಗುರುವಾರ ಆರಂಭಗೊಂಡ ವಿಜಯ್ ಮರ್ಚಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗೆ 225 ರನ್ ಗಳಿಸಿತು.
ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಆರೂಷ್ ಜೈನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಯುವರಾಜ್ ಸಿಂಹ (63ಕ್ಕೆ3), ಪ್ರಣವ್ ಕೆ. (36ಕ್ಕೆ2) ಹಾಗೂ ಸುಮಿತ್ ಮಕ್ವಾನಾ (48ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಎದುರಿಸುವಲ್ಲಿ ಕರ್ನಾಟಕದ ಬ್ಯಾಟರ್‌ಗಳು ಎಡವಿದರು.
46 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜ್ಯ ತಂಡಕ್ಕೆ ಶ್ಯಮಂತಕ್ ಅನಿರುದ್ಧ್ (44) ಹಾಗೂ ಸುಕೃತ್ ಅವರು 52 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಆದರೆ, ಅದೇ ವೇಳೆ ಶ್ಯಮಂತಕ್ ರನ್ ಔಟ್ ಆದರು. ಮತ್ತೆ ವಿಕೆಟ್‌ಗಳು ಬೇಗಬೇಗನೆ ಉದುರಿದವು. 127 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ರಾಜ್ಯ ತಂಡವು ಅಲ್ಪ ಮೊತ್ತಕ್ಕೆ ಕುಸಿಯುವ ಅತಂಕ ಎದುರಾಗಿತ್ತು.
ಆದರೂ, ತಾಳ್ಮೆ ಕಳೆದುಕೊಳ್ಳದ ಸುಕೃತ್ ಹಾಗೂ ಸಮರ್ಥ್ ಎಂ. ಕುಲಕರ್ಣಿ (ಔಟಾಗದೇ 15; 99 ಎ; 4x3) 9ನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಶತಕ ಗಳಿಸಿದ್ದ ಸುಕೃತ್ ಅವರನ್ನು ಯುವರಾಜ್ ಕೊನೆಗೂ ಬೌಲ್ಡ್ ಮಾಡಿದರು. ಸಮರ್ಥ‌್ ಅವರೊಂದಿಗೆ ವಿಧಾತ್ ಎಸ್. (ಔಟಾಗದೇ 5; 4ಎ, 4x1) ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 90 ಓವರ್‌ಗಳಲ್ಲಿ 225 (ಸುಕೃತ್ ಜೆ. 107, ಶ್ಯಮಂತಕ್ ಅನಿರುದ್ಧ್ 44, ಸಮರ್ಥ್ ಎಂ. ಕುಲಕರ್ಣಿ ಔಟಾಗದೇ 15; ಯುವರಾಜ್ ಸಿನ್ಹ್ 63ಕ್ಕೆ3, ಪ್ರಣವ್ ಕೆ. 36ಕ್ಕೆ2, ಸುಮಿತ್ ಮಕ್ವಾನಾ 48ಕ್ಕೆ2). ಬರೋಡಾ ವಿರುದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.