'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆ ಭಾನುವಾರದ ಸಂಚಿಕೆ
ಬೆಂಗಳೂರು: ಆಸ್ಟ್ರೇಲಿಯಾದ ಯುವ ಕ್ರಿಕೆಟ್ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಡಿಕ್ಕಿ ಹೊಡೆದ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲಿನ ಹಲವು ಪತ್ರಿಕೆಗಳು ವಿರಾಟ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರೆ ಕೆಲ ಪತ್ರಿಕೆಗಳು (ಟ್ಯಾಬ್ಲಾಯ್ಡ್) ತೀರಾ ಕೆಳಮಟ್ಟಕ್ಕೆ ಇಳಿದು ವಿರಾಟ್ ಅವರನ್ನು ಅವಮಾನಿಸುತ್ತಿವೆ.
ಮೊನ್ನೆಯಷ್ಟೇ ಕೊಹ್ಲಿ ಅವರನ್ನು ಕೋಡಂಗಿಗೆ ಹೋಲಿಸುವ ಮೂಲಕ ಉದ್ಧಟತನ ಮೆರೆದಿದ್ದ 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆ ಭಾನುವಾರದ ಸಂಚಿಕೆಯಲ್ಲಿ ಸ್ಯಾಮ್ ಕೊನ್‌ಸ್ಟಸ್ ಅವರ ದೊಡ್ಡ ಫೋಟೊ ಹಾಕಿ ಅದಕ್ಕೆ ‘Virat I am your Father’ (ಹೇ ವಿರಾಟ್ ನಾನು ನಿನ್ನ ತಂದೆ) ಎಂದು ಹೆಡ್‌ಲೈನ್ ಕೊಟ್ಟಿದೆ.
ಈ ಸಂಚಿಕೆಯ ಚಿತ್ರವನ್ನು ಆ ಪತ್ರಿಕೆಯ ಕ್ರೀಡಾ ಪುಟದ ಸಂಪಾದಕ ಜಾಕಬ್ ವಾಡೆಲ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ರೀಡಾಭಿಮಾನಿಗಳಿಂದ ಹಾಗೂ ಕೊಹ್ಲಿ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಪರಸ್ಪರ ಡಿಕ್ಕಿಯಾಗಿ ವಾಗ್ವಾದ ನಡೆಸಿದ್ದ ಕೊಹ್ಲಿ ಅವರಿಗೆ ದಂಡ ಹಾಗೂ ಡಿಮೆರಿಟ್ ಪಾಯಿಂಟ್ ವಿಧಿಸಲಾಗಿತ್ತು.
ಕೊಹ್ಲಿ ಅವರನ್ನು ತೀರಾ ಕೆಳಮಟ್ಟಕ್ಕೆ ಇಳಿದು ಹೀಯಾಳಿಸಲಾಗಿದೆ. 19 ವರ್ಷದ ಯುವ ಆಟಗಾರನ ಪದಾರ್ಪಣೆ ಪಂದ್ಯದಲ್ಲಿ ಅತಿರೇಕದ ವರ್ತನೆ ತೋರಿದ ಕೊಹ್ಲಿ ಅವರನ್ನು ಹೇಡಿ ಎಂದು ಜರಿಯಲಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಳಿಯಲಾಗಿದೆ.
ಈ ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ವಿಶ್ಲೇಷಕರು, ಪಂಡಿತರು ಹಾಗೂ ಮಾಜಿ ಆಟಗಾರರು ಕೊಹ್ಲಿ ವರ್ತನೆಯನ್ನು ಬಲವಾಗಿ ಖಂಡಿಸಿದ್ದರಲ್ಲದೆ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲೂ ಕೊಹ್ಲಿ ವಿರುದ್ಧ ಲೇಖನ ಪ್ರಕಟಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.