ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಣಜಿ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ
–ಪಿಟಿಐ ಚಿತ್ರ
ನವದೆಹಲಿ: ದೇಶದ ರಾಜಧಾನಿಯಲ್ಲಿ ಗುರುವಾರ ಕ್ರಿಕೆಟ್‌ಪ್ರೇಮಿಗಳು ಮೈಚಳಿ ಬಿಟ್ಟು ಎದ್ದರು. ಅರುಣ್ ಜೇಟ್ಲಿ ಕ್ರೀಡಾಂಗಣದತ್ತ ಧಾವಿಸಿದರು. ದೆಹಲಿ ಮತ್ತು ರೈಲ್ವೆಸ್ ತಂಡಗಳ ನಡುವಣ ರಣಜಿ ಟ್ರೋಫಿ ಟೂರ್ನಿಯ ಡಿ ಗುಂಪಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿದರು.
ಅವರ ಈ ಉತ್ಸುಕತೆಗೆ ಕಾರಣ ಭಾರತ ತಂಡದ ‘ಸೂಪರ್‌ಸ್ಟಾರ್’ ವಿರಾಟ್ ಕೊಹ್ಲಿ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಕ್ರೀಡಾಂಗಣದಲ್ಲಿ ಸೇರಿದ್ದರು. 12 ವರ್ಷಗಳ ನಂತರ ವಿರಾಟ್ ರಣಜಿ ಟೂರ್ನಿಯಲ್ಲಿ ಆಡಲು ಬಂದಿರುವುದು ಕ್ರಿಕಟ್‌ಪ್ರೇಮಿಗಳಷ್ಟೇ ಅಲ್ಲ; ದೆಹಲಿ ಮತ್ತು ರೈಲ್ವೆಸ್ ತಂಡದ ಆಟಗಾರರಲ್ಲಿಯೂ ಸಂಚಲನ ಮೂಡಿಸಿದೆ.
ದೆಹಲಿ ತಂಡದ ಬೌಲರ್ ನವದೀಪ್ ಸೈನಿ ಮತ್ತಿತರ ಆಟಗಾರರು ವಿರಾಟ್ ಅವರ ಅಭಿಮಾನಿಗಳಾಗಿ ಕ್ರಿಕೆಟ್‌ಗೆ ಕಾಲಿಟ್ಟವರು. ಅವರೆಲ್ಲರಿಗೂ ಈತ ತಮ್ಮ ಹೀರೊ ಜೊತೆಗೆ ಆಡುವ, ಒಡನಾಡುವ ಅವಕಾಶ ಲಭಿಸಿತು.
‘ಅವರು ಅಪಾರ ಚೈತನ್ಯಶಾಲಿ ವ್ಯಕ್ತಿ. ಅವರ ಸಾಮಿಪ್ಯದಿಂದಾಗಿ ನಮ್ಮೆಲ್ಲರಲ್ಲೂ ಹುರುಪು ಇಮ್ಮಡಿಸಿದೆ. ಅವರು ಫೀಲ್ಡಿಂಗ್, ಬ್ಯಾಟಿಂಗ್ ಅಥವಾ ಜಿಮ್‌ನಲ್ಲಿ ಮಾಡುವ ಕಸರತ್ತುಗಳು ಯುವ ಆಟಗಾರರಿಗೆ ಅನುಕರಣೀಯ. ಅವೆಲ್ಲವನ್ನೂ ಅಪಾರ ಶ್ರದ್ಧೆಯಿಂದ ಮಾಡುತ್ತಾರೆ’ ಎಂದು ನವದೀಪ್ ಸೈನಿ ದಿನದಾಟದ ನಂತರ ಸುದ್ದಿಗಾರರಿಗೆ ಹೇಳಿದರು.
‘ನಾವು ಬೆಳಿಗ್ಗೆ ಕ್ರೀಡಾಂಗಣಕ್ಕೆ ಪ್ರವೇಶಿಸುವ ಹಾದಿಯಲ್ಲಿ ಜನರ ದೊಡ್ಡ ಸಾಲು ನೋಡಿದೆವು. ಅದರಿಂದ ಇದೊಂದು ವಿಭಿನ್ನಯವಾದ ಪಂದ್ಯ. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಲಿದ್ದರೆಂದು ಅರ್ಥವಾಯಿತು’ ಎಂದು ಸೈನಿ ಹೇಳಿದರು.
‘ನಾವು ರಣಜಿ ಪಂದ್ಯ ಆಡುವಾಗ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರುವುದಿಲ್ಲ. ಇದು ನಮಗೆ ಹೊಸ ಅನುಭವ. ಬಹಳ ಖುಷಿಯಾಗುತ್ತಿದೆ’ ಎಂದು ರೈಲ್ವೆಸ್ ತಂಡದ ಉಪೇಂದ್ರ ಯಾದವ್ ಸಂತಸ ವ್ಯಕ್ತಪಡಿಸಿದರು.
ಬಿಗಿ ಭದ್ರತೆಯ ನಡುವೆಯೂ ಅಭಿಮಾನಿಯೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಕ್ರೀಡಾಂಗಣದೊಳಗೆ ನುಗ್ಗಿದ ಘಟನೆ ನಡೆಯಿತು. ಆ ವ್ಯಕ್ತಿಯು ಓಡಿಹೋಗಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯ ಕಾಲು ಮುಟ್ಟಿ ನಮಸ್ಕರಿಸಿದೆ ಭದ್ರತಾ ಸಿಬ್ಬಂದಿ ಓಡಿಬಂದು ಆ ವ್ಯಕ್ತಿಯನ್ನು ಹೊರಗೆ ಕರೆದೊಯ್ದರು.
ಬೆಳಿಗ್ಗೆ ಟಾಸ್ ಗೆದ್ದ ದೆಹಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ನವದೀಪ್ ಸೈನಿ (62ಕ್ಕೆ3), ಸಿದ್ಧಾಂತ್ ಶರ್ಮಾ (35ಕ್ಕೆ2) ಮೋನಿ ಗ್ರೇವಾಲ್ (49ಕ್ಕೆ2) ಮತ್ತು ಸಮಿತ್ ಮಾಥೂರ್ (20ಕ್ಕೆ3) ಅವರ ದಾಳಿಗೆ ರೈಲ್ವೆಸ್ ತಂಡವು 67.4 ಓವರ್‌ಗಳಲ್ಲಿ 241 ರನ್ ಗಳಿಸಿ ಆಲೌಟ್ ಆಯಿತು. ತಂಡದ ಉಪೇಂದ್ರ ಯಾದವ್ (95; 117ಎ) ಮತ್ತು ಕರ್ಣ್ ಶರ್ಮಾ (50; 105ಎ) ಅವರು ಅರ್ಧಶತಕ ಸಿಡಿಸಿದರು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದೆಹಲಿ ತಂಡವು ದಿನದಾಟದ ಮುಕ್ತಾಯಕ್ಕೆ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 41 ರನ್ ಗಳಿಸಿದೆ.
ಗ್ಯಾಲರಿಯಲ್ಲಿ ಸೇರಿದ್ದ ಯುವಕರು ‘ವಿರಾಟ್ ಭಯ್ಯಾ ಬ್ಯಾಟಿಂಗ್ ಕರನೇ ಕೇ ಲಿಯೇ ಆವೋ’ ಎಂದು ಕೂಗುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.