
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರವು ಶರತ್ತುಬದ್ಧ ಅನುಮತಿ ನೀಡಿದೆ.
ಆದರೆ ಈಗ ಅದಕ್ಕೂ ಮುನ್ನವೇ ಈ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳುವ ತವಕದಲ್ಲಿ ಬೆಂಗಳೂರು ಕ್ರಿಕೆಟ್‌ಪ್ರಿಯರು ಇದ್ದಾರೆ.
ಇದೇ 24ರಂದು ಇಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಡಿ ಗುಂಪಿನ ಪಂದ್ಯ ನಡೆಯಲಿದೆ. ಅದರಲ್ಲಿ ದೆಹಲಿ ಮತ್ತು ಆಂಧ್ರ ತಂಡಗಳು ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಕೊಹ್ಲಿ ಅವರು ಎರಡು ಪಂದ್ಯಗಳಲ್ಲಿ ತಮ್ಮ ತವರು ದೆಹಲಿ ತಂಡವನ್ನು ಪ್ರತಿನಿಧಿಸಲಿದ್ಧಾರೆ.
ವಿರಾಟ್ ಅವರಿಗೆ ಬೆಂಗಳೂರು ಎರಡನೇ ತವರು ಇದ್ದಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವರು ಆರಂಭದಿಂದಲೂ ಆಡುತ್ತಿದ್ದಾರೆ. ಅದರಿಂದಾಗಿ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಅವರಿಗೆ ಇದ್ದಾರೆ. ಆದ್ದರಿಂದ ಒಂದೊಮ್ಮೆ ಅವರು ಡಿ. 24ರ ಪಂದ್ಯದಲ್ಲಿ ಆಡಿದರೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಆದರೆ ಟೂರ್ನಿಯ ಯಾವ ಪಂದ್ಯಗಳಲ್ಲಿ ವಿರಾಟ್ ಆಡಲಿದ್ದಾರೆಂಬುದು ಇನ್ನೂ ಖಚಿತವಾಗಿಲ್ಲ.
ಈ ಕಾರಣಕ್ಕಾಗಿಯೇ ಸರ್ಕಾರದಿಂದ ಅನುಮತಿ ಪಡೆಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪದಾಧಿಕಾರಿಗಳು ಶನಿವಾರ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ.
‘ವಿರಾಟ್ ಅವರು ದೆಹಲಿ ತಂಡದಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುವುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಗೃಹ ಸಚಿವರನ್ನು ಭೇಟಿಯಾಗಿ ಅನುಮತಿ ಕೇಳಿಕೊಂಡಿದ್ದೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದರು. ಆಗಿನಿಂದ ಇಲ್ಲಿಯವರೆಗೆ ಕ್ರೀಡಾಂಗಣದಲ್ಲಿ ಬಿಸಿಸಿಐ ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ.
ವಿರಾಟ್ ಅವರು 2010ರಲ್ಲಿ ಕೊನೆಯ ಬಾರಿಗೆ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದರು. ಪ್ರಸ್ತುತ ದೆಹಲಿ ತಂಡದಲ್ಲಿ ಭಾರತ ತಂಡದ ಆಟಗಾರರಾದ ರಿಷಭ್ ಪಂತ್, ಹರ್ಷಿತ್ ರಾಣಾ, ಇಶಾಂತ್ ಶರ್ಮಾ ಮತ್ತು ನವದೀಪ್ ಸೈನಿ ಇದ್ದಾರೆ.
ಡಿ ಗುಂಪಿನ ಕೆಲವು ಪಂದ್ಯಗಳು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.