ADVERTISEMENT

ವಿಸ್ಡನ್‌ ದಶಕದ ಟಿ20 ತಂಡ: ಕೊಹ್ಲಿ, ಬೂಮ್ರಾಗೆ ಗೌರವ

ಧೋನಿಗಿಲ್ಲ ಸ್ಥಾನ

ಪಿಟಿಐ
Published 30 ಡಿಸೆಂಬರ್ 2019, 12:04 IST
Last Updated 30 ಡಿಸೆಂಬರ್ 2019, 12:04 IST
ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ
ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ   

ಲಂಡನ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ವೇಗಿ ಜಸ್‌ಪ್ರೀತ್‌ ಬೂಮ್ರಾ ವಿಸ್ಡನ್‌ ದಶಕದ ಅಂತರರಾಷ್ಟ್ರೀಯ ಟ್ವೆಂಟಿ–20 ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ತಂಡಕ್ಕೆ ಆಸ್ಟ್ರೇಲಿಯಾದ ಆ್ಯರನ್ ಫಿಂಚ್‌ ನಾಯಕರಾಗಿದ್ದು, ಮಹೇಂದ್ರ ಸಿಂಗ್‌ ಧೋನಿ ಈ ಪಟ್ಟಿಯಲ್ಲಿಲ್ಲ.

‘ಸ್ಥಳೀಯ ಟ್ವೆಂಟಿ–20 ಟೂರ್ನಿಗಳಲ್ಲಿ ಕೊಹ್ಲಿ ಸಾಧನೆ ಕಡಿಮೆ ಇರಬಹುದು, ಆದರೆ ಇದೇ ಮಾತನ್ನು ಅಂತರರಾಷ್ಟ್ರೀಯ ಟಿ–20 ಕುರಿತು ಹೇಳುವಂತಿಲ್ಲ. ಅವರ 53ರ ರನ್‌ ಸರಾಸರಿ ಈ ದಶಕದಲ್ಲೇ ಶ್ರೇಷ್ಠ ಸರಾಸರಿಯಾಗಿತ್ತು. ಅವರು ಇನ್ನೂ ಉತ್ತಮ ರೇಟ್‌ನಲ್ಲಿ ರನ್‌ ಕಲೆಹಾಕಬಲ್ಲರು’ ಎಂದುಕೊಹ್ಲಿ ಕುರಿತು ವಿಸ್ಡನ್‌ ತನ್ನ ವೆಬ್‌ಸೈಟ್‌ನಲ್ಲಿ ಅಭಿಪ್ರಾಯಪಟ್ಟಿದೆ.

‘ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಶ್ರೇಷ್ಠ ಆಟಗಾರ. ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಾಗ ಇನಿಂಗ್ಸ್‌ಗೆ ಸ್ಥಿರತೆ ನೀಡಬಲ್ಲರು’ ಎಂದು ವಿಸ್ಡನ್‌ ಹೇಳಿದೆ.

ADVERTISEMENT

ಮೂರೂ ಮಾದರಿ ಸೇರಿ ಇದುವರೆಗೆ ಒಟ್ಟು 21,444 ರನ್‌ ಕಲೆಹಾಕಿರುವ ಕೊಹ್ಲಿ ಸಾರ್ವಕಾಲಿಕ ರನ್‌ ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಕಾರಣ ವಿಸ್ಡನ್‌ ಟೆಸ್ಟ್‌ ಹಾಗೂ ಏಕದಿನ ತಂಡಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಸ್ಟೀವ್‌ ಸ್ಮಿತ್‌, ಡೇಲ್‌ ಸ್ಟೇನ್‌, ಎಬಿ ಡಿವಿಲಿಯರ್ಸ್, ಎಲ್ಲಿಸ್‌ ಪೆರ್ರಿ ಅವರನ್ನೊಳಗೊಂಡ ದಶಕದ ಐವರು ಶ್ರೇಷ್ಠ ಕ್ರಿಕೆಟಿಗರಲ್ಲೂ ಕೊಹ್ಲಿ ಇದ್ದಾರೆ.

ಸದ್ಯ ಐಸಿಸಿ ಟೆಸ್ಟ್‌ ಹಾಗೂ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಆಯ್ಕೆಯ ದಶಕದ ಟೆಸ್ಟ್‌ ತಂಡದ ನಾಯಕರಾಗಿದ್ದಾರೆ.

‘ಬೂಮ್ರಾ ಅವರ ಒಟ್ಟಾರೆ ಬೌಲಿಂಗ್‌ ಎಕಾನಮಿ ರೇಟ್‌ 6.71. ಇದು ವೇಗದ ಬೌಲರ್‌ಗಳ ಪೈಕಿವಿಶ್ವದಲ್ಲೇ ಎರಡನೇ ಶ್ರೇಷ್ಠ ಸರಾಸರಿ. ಡೇಲ್‌ ಸ್ಟೇನ್‌ ಮೊದಲ ಸ್ಥಾನದಲ್ಲಿದ್ದಾರೆ’ ಎಂದು ವಿಸ್ಡನ್‌ ಹೇಳಿದೆ.

ಬೂಮ್ರಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ಒಟ್ಟು 216 ವಿಕೆಟ್‌ ಕಿತ್ತಿದ್ದಾರೆ. ಅದರಲ್ಲಿ ಟ್ವೆಂಟಿ–20 ಮಾದರಿಯ ವಿಕೆಟ್‌ ಗಳಿಕೆ 51.

2007ರಟ್ವೆಂಟಿ–20 ವಿಶ್ವಕಪ್‌ ಟ್ರೋಫಿಯನ್ನು ಭಾರತಕ್ಕೆ ಗೆದ್ದುಕೊಟ್ಟ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ದಶಕದ ಟ್ವೆಂಟಿ–20 ತಂಡದಲ್ಲದಿರುವುದು ಅಚ್ಚರಿಯಾಗಿದೆ.

ವಿಸ್ಡನ್‌ ದಶಕದ ಟ್ವೆಂಟಿ–20 ತಂಡ: ಆ್ಯರನ್‌ ಫಿಂಚ್‌ (ನಾಯಕ), ಕಾಲಿನ್‌ ಮನ್ರೊ, ವಿರಾಟ್‌ ಕೊಹ್ಲಿ, ಶೇನ್‌ ವಾಟ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಸ್‌ ಬಟ್ಲರ್‌, ಮೊಹಮ್ಮದ್‌ ನಬಿ, ಡೇವಿಡ್‌ ವಿಲ್ಲಿ, ರಶೀದ್‌ ಖಾನ್‌, ಜಸ್‌ಪ್ರೀತ್‌ ಬೂಮ್ರಾ, ಲಸಿತ್‌ ಮಾಲಿಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.