ADVERTISEMENT

Virat Kohli Retirement | ಟೆಸ್ಟ್ ಅಂಗಳದಲ್ಲಿ ವಿರಾಟ್ ಪರ್ವ

ದೀರ್ಘ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಚೇಸಿಂಗ್ ಮಾಸ್ಟರ್‌

ಗಿರೀಶ ದೊಡ್ಡಮನಿ
Published 13 ಮೇ 2025, 0:30 IST
Last Updated 13 ಮೇ 2025, 0:30 IST
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ    

ಬೆಂಗಳೂರು: ಟೆಸ್ಟ್ ಕ್ರಿಕೆಟ್‌ಗೆ ಸುಮಾರು ನೂರೈವತ್ತು ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಹಲವು ದಿಗ್ಗಜರು ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ.  ಸರ್‌ ಡಾನ್ ಬ್ರಾಡ್ಮನ್, ಸರ್‌ ಗ್ಯಾರಿಫೀಲ್ಡ್ ಸೊಬರ್ಸ್, ವಿವಿಯನ್ ರಿಚರ್ಡ್ಸ್,  ಸುನಿಲ್ ಗಾವಸ್ಕರ್, ಜಿ.ಆರ್. ವಿಶ್ವನಾಥ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರು ತಮ್ಮತಮ್ಮ ವಿಶಿಷ್ಟ ಶೈಲಿಯನ್ನು ಕ್ರಿಕೆಟ್‌ಪ್ರೇಮಿಗಳ ಮನದಲ್ಲಿ ಸ್ಥಾನ ಪಡೆದಿದ್ದಾರೆ.

ಕ್ರಿಕೆಟ್‌ ಆಟದ ಸಾಧನೆಗಳ ಮೂಲಕ ಈ ದಿಗ್ಗಜರ ಸಾಲಿನಲ್ಲಿ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಆದರೆ ಅವರು ಅವರೆಲ್ಲರಿಗಿಂತ ವಿಭಿನ್ನವೂ ಆಗಿದ್ದಾರೆ. ತಮ್ಮ 14 ವರ್ಷಗಳ ಟೆಸ್ಟ್‌ ಕ್ರಿಕೆಟ್ ಜೀವನದಲ್ಲಿ ಹಲವು ಏಳು, ಬೀಳುಗಳನ್ನು ಕಂಡ ವಿರಾಟ್, ದಾಖಲೆಗಳ ಬೆಟ್ಟವನ್ನೇ ಪೇರಿಸಿದ್ದಾರೆ.  ದೆಹಲಿಯ ಮಧ್ಯಮವರ್ಗದ ಕುಟುಂಬದ ಕುಡಿ ವಿರಾಟ್, ವಿಶ್ವದ ಟಾಪ್ 20 ಶ್ರೀಮಂತ ಆಟಗಾರರಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿದರು. ಅಷ್ಟೇ ಅಲ್ಲ. ತಾವೇ ಒಂದು ಜನಪ್ರಿಯ ಬ್ರ್ಯಾಂಡ್ ಆಗಿ ಬೆಳೆದರು. ತಮ್ಮ ‘ಮ್ಯಾನರಿಸಂ’ ಮೂಲಕವೇ ಯುವಸಮುದಾಯದ ಮನಗೆದ್ದವರು.  ಕೊಹ್ಲಿಯ ಕೇಶವಿನ್ಯಾಸ, ಗಡ್ಡ, ಮೀಸೆಗಳ ವಿನ್ಯಾಸವನ್ನೂ ಅನುಕರಿಸುವ ಹುಡುಗರು ಭಾರತವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಇದ್ದಾರೆ. ಅಷ್ಟರಮಟ್ಟಿಗೆ ಅವರ ಪ್ರಭಾವ ಗಾಢವಾಗಿದೆ. ತಮ್ಮ ಸಮಕಾಲೀನ ವಯೋಮಾನದವರನ್ನಷ್ಟೇ ಅಲ್ಲ; ಪ್ರಸ್ತುತ ಝೆನ್‌ ಝೀ ಪೀಳಿಗೆಗೂ 36 ವರ್ಷದ ವಿರಾಟ್ ಅಚ್ಚುಮೆಚ್ಚು. 

ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳು ಅಲ್ಪಾವಧಿಯಲ್ಲಿಯೇ ಲಕ್ಷಾಂತರ ಹಂಚಿಕೆಯಾಗುವ ಪರಿ ಅಸಾಧಾರಣವೇ ಸರಿ. ಸೋಮವಾರ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ ತಮ್ಮ ಟೆಸ್ಟ್ ಕ್ರಿಕೆಟ್ ವಿದಾಯ ಘೋಷಣೆಯ ಸಂದೇಶವೂ ಇದಕ್ಕೆ ಸಾಕ್ಷಿ. ‘ಜಂಟಲ್‌ಮ್ಯಾನ್ ಗೇಮ್‌’ ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಮೈದಾನದ ಒಳಗೆ ಮತ್ತು ಹೊರಗೆ ಹೀಗೆಯೇ ಇರಬೇಕು ಎಂದು ಹೇಳಲಾಗುತ್ತಿದ್ದ ಕೆಲವು ಅಲಿಖಿತ ನಿಯಮಗಳನ್ನು ಮುರಿದ ಆಟಗಾರ ಕೊಹ್ಲಿ. ‘ಕಮರ್ಷಿಯಲ್ ಕಾಲಘಟ್ಟದ ಕ್ರಿಕೆಟ್‌’ ಲೋಕದ ಐಕಾನ್ ಎಂಬುದರಲ್ಲಿ ಅನುಮಾನವೇ ಇಲ್ಲ. 

ADVERTISEMENT

ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಬಾಲಿವುಡ್ ಸಿನೆಮಾ ನೃತ್ಯಗಳ ಹೆಜ್ಜೆಹಾಕುತ್ತ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದರು. ತಮ್ಮ ತಂಡದ ಬೌಲರ್ ವಿಕೆಟ್ ಗಳಿಸಲಿ, ಯಾರೇ ಫೀಲ್ಡರ್‌ ಕ್ಯಾಚ್ ಪಡೆಯಲಿ ವಿರಾಟ್ ಕುಣಿದು ಕುಪ್ಪಳಿಸುತ್ತಾರೆ. ‘ಇದು ಟಿ.ವಿ ಕ್ಯಾಮೆರಾ ಗಮನ ಸೆಳೆಯುವ ಪ್ರಚಾರದ ಹುಚ್ಚು’ ಎಂಬ ಟೀಕೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದುಂಟು. ತಮ್ಮನ್ನು ಈ ಹಿಂದೆ ಕಿಚಾಯಿಸಿದ ಬೌಲರ್‌ಗಳನ್ನು ಗುರಿಯಾಗಿಸಿ ದಂಡಿಸುವ ಛಲದಂಕಮಲ್ಲ. ಅಷ್ಟೇ ಅಲ್ಲ. ಸೆಲಿಬ್ರೇಷನ್ ಇರಲಿ, ಸಾಧನೆ ಇರಲಿ ಯಾವುದನ್ನೂ ಬಾಕಿ ಇಟ್ಟುಕೊಳ್ಳುವ ಜಾಯಮಾನವೇ ಅಲ್ಲ. ಬಡ್ಡಿಸಮೇತ ತಿರುಗೇಟು ನೀಡಿ ಸಂಭ್ರಮಿಸಿದ್ದೇ ಹೆಚ್ಚು. 

‘ವಿರಾಟ್ ಸ್ವಭಾವವೇ ಅಂತಹದ್ದು. ತನ್ನ ಸಹಆಟಗಾರರ ಯಶಸ್ಸನ್ನು ಮುಕ್ತವಾಗಿ ಆಚರಿಸುತ್ತಾರೆ’ ಎಂದು ವೇಗದ ಬೌಲರ್ ಮೊಹಮ್ಮದ್ ಶಮಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. 

ತನ್ನ ಸಹಆಟಗಾರರ ಪರವಾಗಿ ಎದುರಾಳಿಗಳು ಮತ್ತು ಅಂಪೈರ್‌ಗಳೊಂದಿಗೆ ಜಟಾಪಟಿ ನಡೆಸಲು ಯಾವುದೇ ಹಂತದಲ್ಲಿ ಹಿಂಜರಿದಿಲ್ಲ. ತಮ್ಮ ಬಗ್ಗೆ ಟೀಕೆ ಮಾಡಿದವರು ಯಾರೇ ಆಗಿರಲಿ; ತಕ್ಕ ಪ್ರತ್ಯುತ್ತರ ನೀಡದೇ ಬಿಟ್ಟವರೂ ಅಲ್ಲ. ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್, ಸಂಜಯ್ ಮಾಂಜ್ರೇಕರ್ ಅವರಿಗೂ ತಿರುಗೇಟು ನೀಡುವಲ್ಲಿ ವಿರಾಟ್ ಹಿಂದೆ ಮುಂದೆ ನೋಡಿದವರಲ್ಲ. ಆದರೆ ಆ ರೀತಿ ಮಾಡುವ ಮುನ್ನ ತಮ್ಮ ಬ್ಯಾಟ್‌ನಿಂದ ರನ್ ಹೊಳೆ ಹರಿಸುವ ಛಲವೂ ಅವರದ್ದು ಎಂಬುದು ವಿಶೇಷ.  ಬೌಂಡರಿಗೆರೆ ದಾಟಿ ಹೊರ ಬಂದ ನಂತರ ವಯಸ್ಸು, ದೇಶ, ಭಾಷೆ ಮೀರಿದ ಸ್ನೇಹ ಸಂಬಂಧ ರೂಪಿಸಿಕೊಂಡಿರುವ ವ್ಯಕ್ತಿತ್ವ. 

ಹಣದ ಹರಿವು..

ವಿರಾಟ್ ಈ ಎತ್ತರಕ್ಕೆ ಬೆಳೆದ ಹಾದಿ ಸುಲಭವೇನೂ ಆಗಿರಲಿಲ್ಲ. ಪರದೇಶಗಳ ತಂಡಗಳಲ್ಲಿ ಅವರಿಗೆ ದೊಡ್ಡ ಸವಾಲು ಎಸೆಯುವ ಬೌಲರ್‌ಗಳು ಮತ್ತು ಪೈಪೋಟಿಯೊಡ್ಡುವ ಬ್ಯಾಟರ್‌ಗಳ ಸಂಖ್ಯೆ (ಸಚಿನ್ ತೆಂಡೂಲ್ಕರ್ ಕಾಲಕ್ಕೆ ಹೋಲಿಸಿದರೆ)  ಕಡಿಮೆ ಇತ್ತು. ಆದರೆ ನವಯುಗದ ಸವಾಲುಗಳನ್ನು ಮೀರಿ ನಿಲ್ಲುವುದು ಸರಳವೇನಾಗಿರಲಿಲ್ಲ. 

ನದಿಯಲ್ಲಿ ನೀರು ಹರಿದಂತೆ ಕ್ರಿಕೆಟ್‌ನಲ್ಲಿ ಹಣ ಹರಿಯುವ ಈ ಕಾಲಘಟ್ಟದಲ್ಲಿ ಭಾರತ ತಂಡದೊಳಗೆ ಕಾಲಿಟ್ಟು ದಂತಕಥೆಯಾಗಿ ಬೆಳೆಯುವುದು ಸುಲಭವಾದ ಮಾತಲ್ಲ. ಹರೆಯದ ವಯಸ್ಸಿನಲ್ಲಿ ಕೋಟಿ ಕೋಟಿ ಕಾಂಚಾಣ ಕೈಗೆ ಬಂದಾಗ ಉಂಟಾಗುವ ಚಿತ್ತಚಾಂಚಲ್ಯವನ್ನು ನಿಗ್ರಹಿಸಿಕೊಂಡು ಸಾಧನೆ ಮಾಡುವುದು ಹುಡುಗಾಟವಲ್ಲ. ಈ ಪರೀಕ್ಷೆಯಲ್ಲಿ ವಿರಾಟ್ ಅಗ್ರ ರ‍್ಯಾಂಕ್ ಗಳಿಸಿದ್ದಾರೆ.

2008ರಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಆರಂಭವಾಯಿತು. ಅಲ್ಲಿಂದ ಮುಂದೆ ಕ್ರಿಕೆಟ್‌ನಲ್ಲಿ ದುಡ್ಡೇ ದೊಡ್ಡಪ್ಪನಾಯಿತು. ಅದೇ ವರ್ಷ ವಿರಾಟ್ ಕೂಡ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಆ ಸಮಯದಲ್ಲಿ ಮಹೇಂದ್ರಸಿಂಗ್ ಧೋನಿ, ಸಚಿನ್, ವೀರೇಂದ್ರ ಸೆಹ್ವಾಗ್, ದ್ರಾವಿಡ್, ಜಹೀರ್ ಖಾನ್, ಗೌತಮ್ ಗಂಭೀರ್, ಯುವರಾಜ್ ಸಿಂಗ್ ಅವರೆಲ್ಲರೂ ತಂಡದ ತಾರೆಗಳಾಗಿದ್ದರು. ಆದರೆ ನಡವಳಿಕೆಯಲ್ಲಿ ವಿರಾಟ್ ತುಸು ಒರಟನಾಗಿದ್ದರು. ಅದರಿಂದಾಗಿ ಕೆಲ ವಿವಾದಗಳೂ ಅವರ ಬೆನ್ನುಬಿದ್ದವು.

ಇಂತಹ ಸಂದರ್ಭದಲ್ಲಿ ತಂಡದಲ್ಲಿದ್ದ ಹಿರಿಯರು ಕಿವಿ ಹಿಂಡಿ ಬುದ್ಧಿ ಹೇಳಿದರು. ಅದರಲ್ಲೂ ಸಚಿನ್ ಮತ್ತು ಧೋನಿ ಅವರು ವಿರಾಟ್ ಪ್ರತಿಭೆಯನ್ನು ಸರಿಯಾಗಿ ಗುರುತಿಸಿದ್ದರು. ಆದ್ದರಿಂದಲೇ ಅವರನ್ನು ಭವಿಷ್ಯದ ನಾಯಕನನ್ನಾಗಿ ಬೆಳೆಸಿದರು. ಧೋನಿ ಟೆಸ್ಟ್ ಕ್ರಿಕೆಟ್‌ನಿಂದ 2014ರ ಡಿಸೆಂಬರ್‌ನಲ್ಲಿ ನಿವೃತ್ತಿಯಾದಾಗ ಕೊಹ್ಲಿಗೆ ಹೊಣೆ ವಹಿಸಲಾಯಿತು. 

ನಾಯಕತ್ವದ ಪರ್ವ

2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ (ವೆಸ್ಟ್ ಇಂಡೀಸ್ ವಿರುದ್ಧ) ಮಾಡಿದ್ದ ಕೊಹ್ಲಿ, ಮೂರು ವರ್ಷಗಳಲ್ಲಿ ನಾಯಕಪಟ್ಟಕ್ಕೆ ಏರಿದ್ದರು. ಧೋನಿ ಬಿಟ್ಟುಹೋಗಿದ್ದ ಯಶಸ್ಸಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ವಿರಾಟ್‌ಗೆ ಇತ್ತು. ಅದಾಗಲೇ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಾಳತ್ವವನ್ನೂ ಅವರೇ ವಹಿಸಿದ್ದರು. 2017ರಲ್ಲಿ ಏಕದಿನ ಕ್ರಿಕೆಟ್ ಮತ್ತು ಟಿ20 ತಂಡಗಳ ಸಾರಥ್ಯವೂ ಅವರದ್ದಾಯಿತು. 

ಇದೆಲ್ಲದರ ನಡುವೆ ಟೆಸ್ಟ್ ಕ್ರಿಕೆಟ್‌ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು. ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ಎರಡು ಬಾರಿ ಮಣಿಸಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಗೆದ್ದ ಶ್ರೇಯ ವಿರಾಟ್ ನಾಯಕತ್ವಕ್ಕೆ ಸಲ್ಲುತ್ತದೆ. 68 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದ ಅವರ ಬ್ಯಾಟ್‌ನಿಂದ ಐದು ಸಾವಿರಕ್ಕೂ ಹೆಚ್ಚು ರನ್‌ಗಳು ಹರಿದುಬಂದಿದ್ದು ಸಾಮಾನ್ಯವಲ್ಲ. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳ ಎದುರೂ ಅವರ ಯಶಸ್ಸಿನ ಓಟ ನಿಲ್ಲಲಿಲ್ಲ.  ತವರಿನಂಗಳದಲ್ಲಿ ಅವರದ್ದು ಅಜೇಯ ಓಟ. 

2022ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಸರಣಿ ಸೋತಾಗ ವಿರಾಟ್ ನಾಯಕತ್ವ ಬಿಟ್ಟುಕೊಟ್ಟರು. ಈ ಹಂತದಲ್ಲಿ ಅವರ ಫಾರ್ಮ್ ಕೂಡ ಮಂಕಾಗಿತ್ತು. ಇದೆಲ್ಲದರಾಚೆ ಅವರು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿಯವರೆಗಿನ ಎಲ್ಲ ನಾಯಕರಿಗಿಂತಲೂ ಅವರ ಗೆಲುವಿನ ಪಾಲು (ಶೇ 58.82) ಹೆಚ್ಚಿದೆ. ಆದರೆ ವಿರಾಟ್ ತಮ್ಮ ನಾಯಕತ್ವದಲ್ಲಿ ಒಂದೂ ಐಸಿಸಿ ಟ್ರೋಫಿ ಜಯಿಸಲಿಲ್ಲ ಎಂಬ ಕೊರಗು ಕೂಡ ಇದೆ.  

‘ನನ್ನ ದಾಖಲೆಯನ್ನು ಮುರಿಯುವ ಸಾಮರ್ಥ್ಯ ವಿರಾಟ್ ಅವರಿಗೆ ಇದೆ’ ಎಂದು ಸಚಿನ್ ತೆಂಡೂಲ್ಕರ್ ತಮ್ಮ ನಿವೃತ್ತಿಯ ನಂತರ ಸಮಾರಂಭವೊಂದರಲ್ಲಿ ಪರೋಕ್ಷವಾಗಿ ಹೇಳಿದ್ದರು. ಸಚಿನ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ್ದ 49 ಶತಕಗಳ ದಾಖಲೆಯನ್ನು ವಿರಾಟ್ (51) ಮುರಿದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಸಚಿನ್ (51) ದಾಖಲೆ ಮುಟ್ಟಲು ಕೊಹ್ಲಿಗೆ  (30) ಸಾಧ್ಯವಾಗಲಿಲ್ಲ. ಅಲ್ಲದೇ 10 ಸಾವಿರ ರನ್‌ಗಳ ಸಾಧನೆಯ ಅನತಿ ದೂರದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿದ್ದಾರೆ. ಇನ್ನೆರಡು, ಮೂರು ವರ್ಷ ಸುಲಭವಾಗಿ ಆಡಬಹುದಾದ ದೈಹಿಕ ಕ್ಷಮತೆ ಮತ್ತು ಮನೋದಾರ್ಢ್ಯ ಹೊಂದಿರುವ ವಿರಾಟ್ ನಿವೃತ್ತಿಯ ನಿರ್ಧಾರ ಪ್ರಕಟಿಸಿರುವುದು ಅಭಿಮಾನಿಗಳಲ್ಲಿ ಅಪಾರ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಅವರ ಸ್ಥಾನವನ್ನು ತುಂಬುವವರು ಸದ್ಯಕ್ಕಂತೂ ಸಮೀಪದಲ್ಲಿ ಯಾರೂ ಕಾಣುತ್ತಿಲ್ಲ.

ವಿರಾಟ್ ಕೊಹ್ಲಿ ಸಂಭ್ರಮ

19 ವರ್ಷದೊಳಗಿನವರ ವಿಶ್ವಕಪ್ ವಿಜಯ..

ಭಾರತ ಸೀನಿಯರ್ ತಂಡದ ನಾಯಕರಾಗಿ ವಿರಾಟ್ ಯಾವುದೇ ಐಸಿಸಿ ಟ್ರೋಫಿ ಜಯಿಸಿಲ್ಲ. ಆದರೆ, 2008ರಲ್ಲಿ ವಿರಾಟ್ ನಾಯಕತ್ವದ 19 ವರ್ಷದೊಳಗಿನವರ ತಂಡವು ವಿಶ್ವಕಪ್ ಜಯಿಸಿತ್ತು. ಅದೇ ತಂಡದಲ್ಲಿ ಕರ್ನಾಟಕದ ಮನೀಷ್ ಪಾಂಡೆ ಹಾಗೂ ಸೌರಾಷ್ಟ್ರದ ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ಆಡಿದ್ದರು. 

ಈ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಸಾಧನೆಯು ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದಿತ್ತು. 

ವಿರಾಟ್ ವಿವಾದಗಳು..

ನಾಯಕತ್ವದ ಭರಾಟೆಯಲ್ಲಿ ಕೆಲವು ವಿವಾದಗಳನ್ನೂ ಅವರು ಮೈಮೇಲೆ ಎಳೆದುಕೊಂಡಿದ್ದರು. ಅದರಲ್ಲಿ ಪ್ರಮುಖವಾಗಿ 2017ರಲ್ಲಿ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಅವರೊಂದಿಗಿನ ವೈಮನಸ್ಸು. 

2017ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ನಡೆದಿದ್ದ ಡಿಆರ್‌ಎಸ್ ವಿವಾದದಲ್ಲಿ ವಿರಾಟ್ ದೊಡ್ಡ ಸುದ್ದಿಯಾಗಿದ್ದರು. ಸ್ಮಿತ್ ಮತ್ತು ಆಸ್ಟ್ರೇಲಿಯಾ ಆಟಗಾರರು ಡಿಆರ್‌ಎಸ್ ಪಡೆಯುವಾಗ ಡ್ರೆಸಿಂಗ್‌ ರೂಮ್‌ನ ‘ಕಳ್ಳ ಸೂಚನೆ’ಗಳ ಸಹಾಯ ಪಡೆದಿದ್ದರು ಎಂದು ಕೊಹ್ಲಿ ಆರೋಪಿಸಿದ್ದರು.  2021ರಲ್ಲಿ  ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಲ್‌ಬಿಡಬ್ಲ್ಯು ವಿವಾದಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಸಾರಕರ ಬಗ್ಗೆ ಟೀಕಿಸಿದ್ದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿತ್ತು. ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ  ಹೊಸ ಹುಡುಗ ಸ್ಯಾಮ್ ಕಾನ್ಸಟಸ್ ಅವರಿಗೆ ಬೇಕೆಂತೆ ಭುಜ ತಾಕಿಸಿದ್ದ ಕೊಹ್ಲಿ ಸ್ಲೆಡ್ಜಿಂಗ್ ವಿವಾದಕ್ಕೊಳಗಾಗಿದ್ದರು.

ಬ್ರ್ಯಾಂಡ್‌.. ಉದ್ಯಮಿ..

ಕ್ರಿಕೆಟ್ ಅಂಗಳದಲ್ಲಿ ವಿರಾಟ್ ಮಾಡಿದ ಸಾಧನೆಗೆ ಮಾರುಕಟ್ಟೆಯೂ ಮಾರುಹೋಗಿದೆ. ಅವರ ಜನಪ್ರಿಯತೆಯನ್ನು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಬಳಸಿಕೊಳ್ಳಲು ದೊಡ್ಡ ಉದ್ಯಮ ಸಂಸ್ಥೆಗಳು ಮುಗಿಬಿದ್ದವು. ಒಂದು ಮೂಲದ ಪ್ರಕಾರ ಕೊಹ್ಲಿ ಬ್ರ್ಯಾಂಡ್ ಮೌಲ್ಯ ₹ 1900 ಕೋಟಿ.  ಆದರೆ ಈ ಹಾದಿಯಲ್ಲಿ ಅವರು ಕೆಲವು ಕಟ್ಟುಪಾಡುಗಳನ್ನೂ ಅನುಸರಿಸಿದ್ದು ಜನರ ಮನಗೆದ್ದಿದ್ದರು. ತ್ವಚೆಯ ಕಪ್ಪುಬಣ್ಣ ನಿವಾರಿಸುವ ಕ್ರೀಮ್, ತಂಪು ಪಾನೀಯ ಮತ್ತು ಜಂಕ್ ಫುಡ್ ಜಾಹೀರಾತುಗಳನ್ನು ತಿರಸ್ಕರಿಸಿದ್ದರು. ವಿರಾಟ್ ತಮ್ಮನ್ನು ಕೇವಲ ಕ್ರಿಕೆಟ್‌ಗೆ ಸೀಮಿತಗೊಳಿಸಿಕೊಂಡಿಲ್ಲ. ಉದ್ಯಮಿಯಾಗಿಯೂ ಬೆಳೆದಿದ್ದಾರೆ. ಪತ್ನಿ, ಅನುಷ್ಕಾ ಶರ್ಮಾರೊಂದಿಗೆ ಕ್ರೀಡಾ ಪೋಷಾಕು, ವಸ್ತ್ರ ವಿನ್ಯಾಸ ಮತ್ತು ಹೋಟೆಲ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.   

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 

ಫಿಟ್‌ನೆಸ್ ಕಿಂಗ್‌..

ವಿರಾಟ್ ಕೊಹ್ಲಿ ಅವರ ಯಶಸ್ಸಿಗೆ ಫಿಟ್‌ನೆಸ್‌ ಕಾರಣ. ವ್ಯಾಯಾಮ, ಆಹಾರ ಮತ್ತು ವಿಹಾರಗಳಲ್ಲಿ ಅವರದ್ದು ಕಟ್ಟುನಿಟ್ಟಾದ ವೇಳಾಪಟ್ಟಿಯಿದೆ. 

ಭಾರತದ ಕ್ರಿಕೆಟ್‌ನಲ್ಲಿ ಈ ಹಿಂದೆ ರಾಹುಲ್ ದ್ರಾವಿಡ್, ಮಹೇಂದ್ರಸಿಂಗ್ ಧೋನಿ ಸೇರಿದಂತೆ ಕೆಲವರು ಫಿಟ್‌ನೆಸ್ ಕುರಿತು ಹೆಚ್ಚು ಗಮನ ನೀಡುತ್ತಿದ್ದರು. ಆದರೆ ವಿರಾಟ್ ಅದಕ್ಕೊಂದು ಹೊಸ ವ್ಯಾಖ್ಯಾನವನ್ನೇ ಬರೆದರು. 

‘ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದಾಗ ನನ್ನ ಕೆನ್ನೆಗಳು ಉಬ್ಬಿದ್ದವು. ದೇಹದಲ್ಲಿ ಕೊಬ್ಬು ಕೂಡ ಇತ್ತು. ಒಂದಿಷ್ಟು ಆಲಸ್ಯವೂ ಇತ್ತು. ರುಚಿಗೆ ಕಟ್ಟುಬಿದ್ದು ಎಲ್ಲವನ್ನೂ ತಿನ್ನುತ್ತಿದ್ದೆ. ಆದರೆ ಅದೊಂದು ದಿನ ಜೀವನದಲ್ಲಿ ದೊಡ್ಡದನ್ನು ಸಾಧಿಸಬೇಕಾದರೆ ಬದಲಾಗಬೇಕು. ಅದಕ್ಕಾಗಿ ಶ್ರಮಪಡಬೇಕು ಎಂಬ ಅರಿವು ಮೂಡಿತು. ಅಷ್ಟೇ; ಫಿಟ್‌ನೆಸ್‌ಗೆ ಒತ್ತುಕೊಟ್ಟೆ. ಆರೋಗ್ಯದ ಕಾರಣಕ್ಕೆ ಸಸ್ಯಾಹಾರಿಯಾದೆ. ಆಹಾರದಲ್ಲಿ ದೇಹಕ್ಕೆ ಒಳಿತಾಗುವುದನ್ನಷ್ಟೇ ಆಯ್ಕೆ ಮಾಡಿಕೊಂಡೆ’ ಎಂದು ವಿರಾಟ್ ಅವರೇ ಸಂದರ್ಶನದಲ್ಲಿ ಹೇಳಿದ್ದರು. 

ವಿರಾಟ್ ಪ್ರತಿದಿನವೂ ತಮ್ಮ ಫಿಟ್‌ನೆಸ್ ಮತ್ತು ಆಟದ ಅಭ್ಯಾಸದ ಚಿಕ್ಕ ಗುರಿಗಳನ್ನು ನಿಗದಿಪಡಿಸಿಕೊಳ್ಳುತ್ತಾರೆ. ಆ ಪ್ರಕಾರ; ಕಾರ್ಯನಿರ್ವಹಿಸುತ್ತಾರೆ. ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದಾಗ ತಮ್ಮ ಅಭ್ಯಾಸಕ್ರಮವನ್ನು ದುಪ್ಪಟ್ಟುಗೊಳಿಸುತ್ತಾರೆಂದು ಅವರ ಆಪ್ತರು ಹೇಳು ತ್ತಾರೆ.

ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ

ಕೊಹ್ಲಿ ಮನದಲ್ಲೊಂದು ಇಣುಕುನೋಟ....

ನವದೆಹಲಿ: ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಅವರ ನಿವೃತ್ತಿ ತಂಡಕ್ಕೆ ದೊಡ್ಡ ನಷ್ಟವಾಗಿರಬಹುದು. ಆದರೆ ಅದು ತೀರಾ ಅಚ್ಚರಿಯ ನಡೆಯೇನೂ ಆಗಿರಲಿಲ್ಲ. ದೀರ್ಘ ಮಾದರಿಯಲ್ಲಿ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ಸಮಯದಲ್ಲೇ ತಮ್ಮ ಎಲ್ಲ ನಡೆಗಳ ಮೇಲೆ ಅತಿಯಾದ ಗಮನ ನೀಡುತ್ತಿದ್ದುದು ಅವರ ಮೇಲೆ ಒತ್ತಡ ಹೇರಿರಲು ಸಾಕು.

ತಮಗಿರುವ ಬದ್ಧತೆಯಿಂದ ಟೆಸ್ಟ್‌ ಕ್ರಿಕೆಟ್‌ ಮಾದರಿಯನ್ನು ಜೀವಂತವಾಗಿಡಲು ಏಕಾಂಗಿಯಾಗಿ ಹೋರಾಡಿದ ಶ್ರೇಯಸ್ಸು ಅವರದು. ಈಗ ಏಕದಿನ ಕ್ರಿಕೆಟ್‌ಗೆ ಮಾತ್ರ ಭಾರತದ ಸೂಪರ್‌ ಸ್ಟಾರ್‌ ಆಟಗಾರ ಲಭ್ಯವಿದ್ದಾರೆ. ಟಿ20 ಅಬ್ಬರದಲ್ಲಿ ಏದುಸಿರು ಬಿಡುತ್ತಿರುವ ಈ ಮಾದರಿಗೆ ಅವರು ಜೀವಕಳೆ ನೀಡಬಹುದೆಂಬ ನಿರೀಕ್ಷೆಯಿದೆ.

ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಗೆ ಮೊದಲು ಅವರ ಮುಂದೆ ಸವಾಲುಗಳಿದ್ದವು. ಆದರೆ ಅದಕ್ಕೆ ಮೊದಲೇ ಭಾರತದ ಯಶಸ್ವಿ ಆಟಗಾರನ ಟೆಸ್ಟ್‌ ವಿದಾಯ ಬಹುತೇಕ ಹತ್ತಿರವಾಗಿತ್ತು. ‘ಇದು ಸರಿಯಾದ ನಿರ್ಧಾರ. ಒಂದಿಷ್ಟೂ ವಿಷಾದವಿಲ್ಲದೇ, ಮೊಗದಲ್ಲಿ ಮಂದಹಾಸದೊಡನೆ ಹೊರನಡೆಯುತ್ತಿದ್ದೇನೆ’ ಎಂದು ಕೊಹ್ಲಿ ನಿವೃತ್ತಿ ನಿರ್ಧಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಟಿಯಿಲ್ಲದ ಫಿಟ್ನೆಸ್‌, ಐಪಿಎಲ್‌ನಲ್ಲಿ ತೋರಿದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಪರಿಗಣಿಸಿದರೆ, ಅವರು ಕಡೇಪಕ್ಷ ಇನ್ನೊಂದು ಋತುವಿಗೆ ಆಡಬಹುದಿತ್ತು.

ಆದರೆ ನಿರೀಕ್ಷೆಯ ಭಾರ ಅವರನ್ನು ಕಾಡಿದೆ ಎಂಬುದು ಇತ್ತೀಚಿನ ಆರ್‌ಸಿಬಿಯ ಪಾಡ್‌ಕಾಸ್ಟ್‌ನಲ್ಲಿ ಅವರ ಮಾತುಗಳಿಂದ ವ್ಯಕ್ತವಾಗಿತ್ತು. ಟಿ20 ಮತ್ತು ಟೆಸ್ಟ್‌ಗಳಲ್ಲಿ ಭಾರತ ತಂಡದ ನಾಯಕತ್ವ ತೊರೆಯುವ ಮನದಲ್ಲಿ ಏನು ಸುಳಿದಿತ್ತು ಎಂಬ ಪ್ರಶ್ನೆಗೆ ‘ಒಂದು ಹಂತದಲ್ಲಿ ನನ್ನ ಮೇಲಿದ್ದ ಅತಿಯದ ಗಮನವನ್ನು ನಿಭಾಯಿಸುವುದು ತುಂಬಾ ಕಠಿಣವೆನಿಸಿತ್ತು. ನಾನು 7–8 ವರ್ಷ ಭಾರತ ತಂಡದ ನಾಯಕನಾಗಿದ್ದೆ. ಆರ್‌ಸಿಬಿಗೆ 9 ವರ್ಷ ನಾಯಕನಾಗಿದ್ದೆ. ಪ್ರತಿ ಬಾರಿ ಆಡಲು ಇಳಿಯುವಾಗ ನನ್ನ ಮೇಲೆ ನಿರೀಕ್ಷೆಯ ಭಾರ
ಗಳಿರುತ್ತಿದ್ದವು’ ಎಂದು ಅವರು ಹೇಳಿದ್ದರು.‘ದೀರ್ಘ ಅವಧಿಗೆ ಎಲ್ಲವನ್ನೂ ಒಟ್ಟೊಟ್ಟಿಗೆ ನಿರ್ವಹಿಸುವುದು ದೊಡ್ಡ ಸವಾಲು. ಯಾವಾಗ ಇದು ಕೈಮೀರುತ್ತಿದೆ ಎಂದು ಮನಸ್ಸಿಗೆ ಬಂತೊ,  ಆಗ ನಾಯಕತ್ವ ತ್ಯಜಿಸಿದೆ. ನಿರಾಳನಾಗಿದ್ದೆ’ ಎಂದಿದ್ದರು.

ಪತ್ನಿ ಅನುಷ್ಕಾ ಭಾವನಾತ್ಮಕ ಪೋಸ್ಟ್‌

ನವದೆಹಲಿ: ವಿರಾಟ್‌ ಕೊಹ್ಲಿ ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

‘ಬೇರೆಯವರು ದಾಖಲೆ ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡಬಹದು. ಆದರೆ ನೀವು ಎಂದೂ ತೋರಿಸಿಕೊಳ್ಳದ ಕಣ್ಣೀರು, ಯಾರಿಗೂ ಕಾಣಿಸದ ಹೋರಾಟಗಳು, ಈ ಮಾದರಿಯ ಆಟಕ್ಕೆ ನೀವು ತೋರಿಸಿದ ಅಚಲ ಪ್ರೀತಿಯನ್ನು ಸದಾ ನೆನಪಿನಲ್ಲಿಡುವೆ’ ಎಂದು 37 ವರ್ಷ ವಯಸ್ಸಿನ ತಾರಾ ಪತ್ನಿ ಹೇಳಿದ್ದಾರೆ.

‘ಈ ಸಾಧನೆಯ ಹಿಂದೆ ಎಷ್ಟೆಲ್ಲಾ ಶ್ರಮವಿದೆ ಎನ್ನುವುದು ನನಗೆ ಗೊತ್ತು. ಪ್ರತಿ ಟೆಸ್ಟ್‌ ಸರಣಿಯ ನಂತರ ಇನ್ನಷ್ಟು ತಿಳಿವಳಿಕೆ, ವಿನೀತ ಭಾವ ನಿಮ್ಮದಾಗುತಿತ್ತು. ಎಲ್ಲವನ್ನು ಮೆಟ್ಟಿನಿಂತು ಸಾಧಿಸಿದ ಬೆಳವಣಿಗೆ ನೋಡುತ್ತಿದ್ದುದು ನನ್ನ ಭಾಗ್ಯ’ ಎಂದು ಅವರು ಕೊಹ್ಲಿ ಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ. 36 ವರ್ಷ ವಯಸ್ಸಿನ ಕೊಹ್ಲಿ ಅವರು 2017ರಲ್ಲಿ ಅನುಷ್ಕಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ವಮಿಕಾ ಮತ್ತು 15 ತಿಂಗಳ ಅಕಾಯ್ ಎಂಬ ಮಕ್ಕಳಿದ್ದಾರೆ.

ಬೆಂಗಳೂರು ಶತಕದ ನೆನಪು

ವಿರಾಟ್ ಕೊಹ್ಲಿ ಮತ್ತು ಬೆಂಗಳೂರಿಗೆ ಅವಿನಾವಭಾವ ನಂಟು ಇದೆ. ಅದು ಕೇವಲ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಂಟು ಮಾತ್ರವಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅವರಿಗೆ ಇಲ್ಲಿ ಸವಿನೆನಪು ಇದೆ.

ವಿರಾಟ್ ತವರು ದೇಶದ ನೆಲದಲ್ಲಿ ಮೊದಲ ಶತಕ ಗಳಿಸಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. 2012ರಲ್ಲಿ ಇಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನಲ್ಲಿ ಅವರು ಶತಕ ಗಳಿಸಿದ್ದರು. 

ಅದಕ್ಕೂ ಕೆಲವು ದಿನಗಳ ಮುನ್ನ ಅವರು ತಮ್ಮ ಟೆಸ್ಟ್ ಜೀವನದ ಪ್ರಥಮ ಶತಕವನ್ನು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಹೊಡೆದಿದ್ದರು. ಅದು ಅವರ ವೃತ್ತಿಜೀವನಕ್ಕೆ ಲಭಿಸಿದ ಮಹತ್ವದ ತಿರುವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.