
ವಿರಾಟ್ ಕೊಹ್ಲಿ ಅವರ ಆಟದ ಸೊಬಗು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ನವದೆಹಲಿ: ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಜನವರಿ 6ರಂದು ರೈಲ್ವೇಸ್ ವಿರುದ್ಧ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ದೆಹಲಿ ತಂಡಕ್ಕೆ ಆಡಲಿದ್ದಾರೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಸೋಮವಾರ ತಿಳಿಸಿದ್ದಾರೆ.
ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರೆಲ್ಲರೂ ವಿಜಯ್ ಹಜಾರೆ ಟೂರ್ನಿಯಲ್ಲಿ ಕಡೇಪಕ್ಷ ಎರಡು ಪಂದ್ಯಗಳನ್ನಾದರೂ ಆಡಬೇಕು ಎಂದು ಬಿಸಿಸಿಐ ಫರ್ಮಾನು ಹೊರಡಿಸಿತ್ತು. ಕೊಹ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಜನವರಿಯಲ್ಲಿ ನಡೆಯಲಿರುವ ತವರಿನ ಸರಣಿಗೆ ಸಿದ್ಧತೆಗೆ ಅನುಕೂಲವಾಗುವಂತೆ ಅವರು ಮೂರನೇ ಪಂದ್ಯ ಆಡಲು ಬಯಸಿದ್ದಾರೆ.
‘ಈಗಿನ ಮಾಹಿತಿಯ ಪ್ರಕಾರ ಅವರು ರೈಲ್ವೇಸ್ ವಿರುದ್ಧ ಪಂದ್ಯ ಆಡಲಿದ್ದಾರೆ’ ಎಂದು ರೋಹನ್ ಜೇಟ್ಲಿ ಪಿಟಿಐಗೆ ತಿಳಿಸಿದ್ದಾರೆ. ಕೊಹ್ಲಿ ಉತ್ತಮ ಲಯದಲ್ಲಿದ್ದು ಆಡಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 131 ಮತ್ತು 77 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದ ಆಟಗಾರರು ಜ. 8ರಂದು ವಡೋದಾರದಲ್ಲಿ ಸೇರಿಕೊಳ್ಳಲಿದ್ದಾರೆ. ಕೊಹ್ಲಿ ಒಂದು ದಿನ ಮೊದಲೇ ಅಲ್ಲಿಗೆ ಬರಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯು ವಡೋದರದಲ್ಲಿ ಜನವರಿ 11ರಂದು ಆರಂಭವಾಗಲಿದೆ.
ಕಾರ್ಯಭಾರ ಒತ್ತಡದ ಭಾಗವಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಈ ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಫೆ. 7ರಿಂದ ನಡೆಯುವ ಟಿ20 ವಿಶ್ವಕಪ್‌ಗೆ ಭಾರತ ತಂಡದ ಪಾಲಿಗೆ ಇವರಿಬ್ಬರು ನಿರ್ಣಾಯಕವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.