ADVERTISEMENT

ಲಂಕನ್ನರಿಗೆ ಪುಟಿದೇಳುವ ಭರವಸೆ

ಅಫ್ಗಾನ್ ತಂಡಕ್ಕೆ ದಿಮುತ್ ಬಳಗದ ಸವಾಲು; ಸೋತ ತಂಡಗಳ ನಡುವಿನ ಕದನ ಕುತೂಹಲ

ಏಜೆನ್ಸೀಸ್
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
ಮುಜೀಬ್ ಉರ್ ರಹಿಮಾನ್ ಅವರು ಅಫ್ಗಾನಿಸ್ತಾನ ತಂಡದ ಬೌಲಿಂಗ್ ವಿಭಾಗಕ್ಕೆ ಭರವಸೆ ತುಂಬಿದ್ದಾರೆ –ರಾಯಿಟರ್ಸ್ ಚಿತ್ರ
ಮುಜೀಬ್ ಉರ್ ರಹಿಮಾನ್ ಅವರು ಅಫ್ಗಾನಿಸ್ತಾನ ತಂಡದ ಬೌಲಿಂಗ್ ವಿಭಾಗಕ್ಕೆ ಭರವಸೆ ತುಂಬಿದ್ದಾರೆ –ರಾಯಿಟರ್ಸ್ ಚಿತ್ರ   

ಕಾರ್ಡಿಫ್‌ (ಪಿಟಿಐ): ಏಷ್ಯಾದ ತಂಡಗಳ ನಡುವಿನ ಕುತೂಹಲಕಾರಿ ಕದನಕ್ಕೆ ಇಲ್ಲಿನ ಕಾರ್ಡಿಫ್ ವೇಲ್ಸ್ ಕ್ರೀಡಾಂಗಣ ಸಜ್ಜಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ, ಅಫ್ಗಾನಿಸ್ತಾನವನ್ನು ಎದುರಿಸಲಿದೆ. ಎರಡೂ ತಂಡಗಳು ಮೊದಲ ಪಂದ್ಯಗಳಲ್ಲಿ ಸೋತಿರುವ ಕಾರಣ ಇಲ್ಲಿ ರೋಚಕ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಮಾಜಿ ಚಾಂಪಿಯನ್‌ ಶ್ರೀಲಂಕಾ ಮೊದಲ ಪಂದ್ಯದಲ್ಲಿ ತೀರಾ ಕಳಪೆ ಆಟವಾಡಿತ್ತು. ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ತೋರಲು ವೈಫಲ್ಯ ಕಂಡಿದ್ದ ತಂಡ ನ್ಯೂಜಿಲೆಂಡ್‌ ಎದುರು ಹತ್ತು ವಿಕೆಟ್‌ಗಳ ಸೋಲು ಅನುಭವಿಸಿತ್ತು.

ಪಂದ್ಯದಲ್ಲಿ ನಾಯಕ ದಿಮುತ್ ಕರುಣಾರತ್ನೆ ಅವರನ್ನು ಹೊರತುಪಡಿಸಿದರೆ ಯಾರಿಗೂ ಬ್ಯಾಟಿಂಗ್‌ನಲ್ಲಿ ಮಿಂಚಲು ಆಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ದಿಮುತ್ ಅಜೇಯ 52 ರನ್ ಗಳಿಸಿದ್ದರು. ಆದರೆ ತಂಡ 136 ರನ್‌ಗಳಿಗೆ ಆಲೌಟಾಗಿತ್ತು. ನಂತರ ಬೌಲರ್‌ಗಳು ಕೂಡ ಸತ್ವಪರೀಕ್ಷೆ ಎದುರಿಸಿದ್ದರು. ನ್ಯೂಜಿಲೆಂಡ್ ಆರಂಭಿಕ ಜೋಡಿಯ ಮೇಲೆ ಯಾವುದೇ ಬಗೆಯ ಪರಿಣಾಮ ಬೀರಲಾಗದ ಅವರು ಹೀನಾಯ ಸೋಲನ್ನು ಒಪ್ಪಿಕೊಂಡಿದ್ದರು.

ADVERTISEMENT

ಅಭ್ಯಾಸ ಪಂದ್ಯದಲ್ಲೂ ಲಂಕಾದ ಬ್ಯಾಟ್ಸ್‌ಮನ್‌ಗಳು ಪರಿಣಾಮಕಾರಿ ಆಟ ಆಡಲಿಲ್ಲ. ಹೀಗಾಗಿ ಅಫ್ಗಾನಿಸ್ತಾನ ತಂಡದ ಪ್ರಬಲ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲಲು ತಂಡಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಬ್ಯಾಟ್ಸ್‌ಮನ್‌ಗಳು ಉತ್ತಮ ಸಾಮರ್ಥ್ಯ ತೋರುವರು ಎಂಬ ನಿರೀಕ್ಷೆಯಲ್ಲಿ ಕರುಣಾರತ್ನೆ ಇದ್ದಾರೆ.

ಗೆಲುವಿನ ಭರವಸೆಯಲ್ಲಿ ಅಫ್ಗಾನ್‌: ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಸೋತಿದ್ದರೂ ಲಂಕಾ ವಿರುದ್ಧ ಗೆಲುವಿನ ಸೌಧ ಕಟ್ಟುವ ಭರವಸೆ ಅಫ್ಗಾನ್ ತಂಡದ್ದು. ಆಸ್ಟ್ರೇಲಿಯಾ ವಿರುದ್ಧ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ವಿಫಲರಾಗಿದ್ದರು. ಆದರೆ ರಹಮತ್ ಶಾ, ನಾಯಕ ಗುಲ್ಬದಿನ್ ನಯೀಬ್ ಮತ್ತು ನಜೀಬುಲ್ಲ ಜದ್ರಾನ್ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸಿದ್ದರು. ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಹಮೀದ್ ಹಸನ್, ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಮಂಗಳವಾರ ಮತ್ತೊಮ್ಮೆ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಬ್ಯಾಟಿಂಗ್ ಮತ್ತು ಆಫ್‌ ಬ್ರೇಕ್ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಕಾಡಬಲ್ಲ ಮೊಹಮ್ಮದ್ ನಬಿ ಮೇಲೆ ಅಫ್ಗಾನಿಸ್ತಾನ ಹೆಚ್ಚು ಭರವಸೆ ಇರಿಸಿದೆ. ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್ ಅವರು ಶ್ರೀಲಂಕಾ ತಂಡದ ವಿಶ್ವಾಸವನ್ನು ಹೆಚ್ಚಿಸಿದ್ದಾರೆ.

ತಂಡಗಳು: ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವ, ಆವಿಷ್ಕ ಫರ್ನಾಂಡೊ, ಸುರಂಗ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್‌, ಕುಶಾಲ್ ಮೆಂಡಿಸ್‌, ಜೀವನ್ ಮೆಂಡಿಸ್‌, ಕುಶಾಲ್ ಪೆರೇರಾ (ವಿಕೆಟ್ ಕೀಪರ್), ತಿಸಾರ ಪೆರೇರಾ, ನುವಾನ್ ಪ್ರದೀಪ್, ಮಿಲಿಂದ ಸಿರಿವರ್ಧನ, ಲಾಹಿರು ತಿರಿಮನೆ, ಇಸುರು ಉದಾನ, ಜೆಫ್ರಿ ವಂಡರ್ಸೆ

ಅಫ್ಗಾನಿಸ್ತಾನ: ಗುಲ್ಬದಿನ್ ನಯೀಬ್ (ನಾಯಕ), ಅಸ್ಗರ್ ಅಫ್ಗಾನ್, ಅಫ್ತಾಬ್ ಆಲಂ, ನೂರ್ ಅಲಿ ಜದ್ರಾನ್, ಹಮೀದ್ ಹಸನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮತ್ ಶಾ, ಹಶ್ಮತ್ ಉಲ್ಲಾ ಶಾಹಿದಿ, ಮೊಹಮ್ಮದ್ ಶೆಹಜಾದ್ (ವಿಕೆಟ್ ಕೀಪರ್), ಶಮೀವುಲ್ಲಾ ಶಿನ್ವಾರಿ, ಮುಜೀಬ್ ಉರ್ ರೆಹಮಾನ್, ದೌಲತ್ ಜದ್ರಾನ್, ನಜೀಬುಲ್ಲ ಜದ್ರಾನ್, ಹಜ್ರತ್ ಜಜಾಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.