ADVERTISEMENT

ಮಾತಿನ ಮೇಲೆ ನಿಗಾ ಇರಬೇಕು: ಪಾಂಡ್ಯ, ರಾಹುಲ್‌ಗೆ ಚಾಟಿ ಬೀಸಿದ ವಿರಾಟ್‌

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ: ಕಾನೂನು ಘಟಕದ ಮೊರೆ

ಏಜೆನ್ಸೀಸ್
Published 11 ಜನವರಿ 2019, 8:21 IST
Last Updated 11 ಜನವರಿ 2019, 8:21 IST
   

ಸಿಡ್ನಿ:ಭಾರತದ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ವಿವಾದದ ಬಗ್ಗೆ ಮೌನ ಮುರಿದಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ‘ಅದು ಅವರ ವೈಯುಕ್ತಿಕ ಅಭಿಪ್ರಾಯ. ಅದಕ್ಕೂ ನಮ್ಮ ತಂಡಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದರು.

ಭಾರತ– ಆಸ್ಟ್ರೇಲಿಯಾ ಏಕದಿನ ಪಂದ್ಯದ ಮುನ್ನ ದಿನವಾದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಕ್ರಿಕೆಟ್‌ ತಂಡದವರಾಗಿ ಮತ್ತು ಜವಾಬ್ದಾರಿಯುತ ಕ್ರಿಕೆಟಿಗರಾದ ನಾವು ಅವರ ಹೇಳಿಕೆಗೆ ಬೆಂಬಲಿಸುವುದಿಲ್ಲ. ಅದು ಅವರ ವೈಯುಕ್ತಿಕ ಅಭಿಪ್ರಾಯ.ಮಾತಿನ ಮೇಲೆ ನಿಗಾ ಇಲ್ಲದಿದ್ದರೆ, ಈ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಿಸಿಸಿಐ ನಿರ್ಧಾರಕ್ಕಾಗಿ ನಾವೂ ಕಾಯುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಭಾರತ ಕ್ರಿಕೆಟ್‌ ತಂಡದಪ್ರಕಾರ ನಮ್ಮ ನಂಬಿಕೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮುಂದೆ ನಡೆಯುವ ಕ್ರಿಕೆಟ್‌ ಮೇಲೂ ಇದು ಪರಿಣಾಮ ಬೀರುವುದಿಲ್ಲ ಹಾಗೂ ತಂಡ ಸ್ಪೂರ್ತಿಗೂ ಧಕ್ಕೆಯಾಗುವುದಿಲ್ಲ. ಬಿಸಿಸಿಐ ನಿರ್ಧಾರ ಹೊರಬಿದ್ದ ನಂತರಶನಿವಾರ ನಡೆಯುವ ಏಕದಿನ ಪಂದ್ಯದಲ್ಲಿ ಆಡುವ ತಂಡದ ಬಗ್ಗೆ ನಿರ್ಧರಿಸಲಾಗುವುದು’ ಎಂದರು.

ADVERTISEMENT

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿದ್‌ ಕರಣ್‌’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಆಟಗಾರರು ತಾವನುಭವಿಸಿದ ಲೈಂಗಿಕತೆಯ ಕುರಿತು ಮಾತನಾಡಿದ್ದರು.

‘ಅನೇಕ ಮಹಿಳೆಯರ ಜೊತೆ ಲೈಂಗಿಕ ಸುಖ ಅನುಭವಿಸಿದ್ದೇನೆ. ಮೊದಲ ಲೈಂಗಿಕ ಅನುಭವವನ್ನು ಮನೆಯಲ್ಲಿ ಹೇಳಿದಾಗ ಪಾಲಕರು ಉದಾರವಾಗಿ ನಡೆದುಕೊಂಡಿದ್ದರು’ ಎಂದು ಹಾರ್ದಿಕ್ ಪಾಂಡ್ಯ ಕಾರ್ಯಕ್ರಮದಲ್ಲಿ ಹೇಳಿದ್ದರು. ರಾಹುಲ್‌, ‘ನಾನು 18 ವರ್ಷದವನಿದ್ದಾಗ ಜೇಬಿನಲ್ಲಿ ಕಾಂಡೋಮ್ ಪ್ಯಾಕೆಟ್ ಇರಿಸಿಕೊಂಡು ಮನೆಯಲ್ಲಿ ಸಿಕ್ಕಿಬಿದ್ದಿದ್ದೆ’ ಎಂದಿದ್ದರು.

ಇದು ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕ್ಷಮೆ ಕೋರಿದ್ದರು. ಆದರೆ ನೋಟಿಸ್ ಜಾರಿಗೊಳಿಸಿದ್ದ ಬಿಸಿಸಿಐ 24 ತಾಸು ಒಳಗೆ ಉತ್ತರ ನೀಡುವಂತೆ ತಾಕೀತು ಮಾಡಿತ್ತು.

ಗುರುವಾರ ಈ ಕುರಿತು ಹೇಳಿಕೆ ನೀಡಿದ್ದವಿನೋದ್ ರಾಯ್,‘ಇಬ್ಬರೂ ಆಟಗಾರರ ಮೇಲೆ ಎರಡು ಏಕದಿನ ಪಂದ್ಯಗಳ ನಿಷೇಧ ಹೇರಬೇಕು’ಎಂದಿದ್ದಾರೆ. ಜೊತೆಗೆ, ಆಡಳಿತಾಧಿಕಾರಿಗಳ ಸಮಿತಿಯ ಸದಸ್ಯೆ ಡಯಾನ ಎಡುಲ್ಜಿ ಪ್ರಕರಣವನ್ನು ಬಿಸಿಸಿಐ ಕಾನೂನು ಘಟಕಕ್ಕೆ ವರ್ಗಾಯಿಸಿದ್ದಾರೆ.

‘ಹಾರ್ದಿಕ್ ನೀಡಿದ ವಿವರಣೆ ನನಗೆ ತೃಪ್ತಿ ತಂದಿಲ್ಲ. ಆದ್ದರಿಂದ ನಿಷೇಧಕ್ಕೆ ಶಿಫಾರಸು ಮಾಡಿದ್ದೇನೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಡಯಾನ ಎಡುಲ್ಜಿ ಅವರ ಅಭಿಪ್ರಾಯ ಕೂಡ ಕೇಳಲಾಗುವುದು’ ಎಂದು ವಿನೋದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.