ADVERTISEMENT

85ನೇ ವಯಸ್ಸಿಗೆ ನಿವೃತ್ತಿ ಘೋಷಿಸಲಿದ್ದಾರೆ ರೈಟ್!

ಏಜೆನ್ಸೀಸ್
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
ಸಿಸಿಲ್ ರೈಟ್
ಸಿಸಿಲ್ ರೈಟ್   

ಲಂಡನ್: ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಸಿಸಿಲ್ ರೈಟ್ ಅವರ ಹೆಸರನ್ನು ಬಹುಶಃ ಕ್ರಿಕೆಟ್‌ ಆಭಿಮಾನಿಗಳು ನೆನಪಿಟ್ಟಿಲ್ಲ. ಏಕೆಂದರೆ, ಅವರು ವಿವಿಯನ್ ರಿಚರ್ಡ್ಸ್‌, ಗ್ಯಾರಿ ಸೋಬರ್ಸ್ ಮತ್ತು ಫ್ರ್ಯಾಂಕ್ ವೊರೆಲ್ ಅವರಂತಹ ದಿಗ್ಗಜರಲ್ಲ. ಆದರೆ ಇದೀಗ ಅವರು ಆ ಮಹಾನ್ ಕ್ರಿಕೆಟಿಗರ ದಾಖಲೆಯನ್ನೂ ಮುರಿಯಲಿದ್ದಾರೆ.

ಹೌದು; ತಮ್ಮ 85ನೇ ವರ್ಷ ವಯಸ್ಸಿನಲ್ಲಿ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ. ಇದರೊಂದಿಗೆ ತಮ್ಮ 60 ವರ್ಷಗಳ ಸುದೀರ್ಘ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ಇಷ್ಟು ದೀರ್ಘವಾದ ಸಮಯದಲ್ಲಿ ನಿವೃತ್ತಿ ಘೋಷಿಸಿದ ದಾಖಲೆ ಮಾಡಿದ್ದಾರೆ.

ಆಪ್ತ ವಲಯದಲ್ಲಿ ‘ಸಿಸ್’ ಎಂದು ಕರೆಸಿಕೊಳ್ಳುವ ರೈಟ್ ಅವರು 60ರ ದಶಕದಲ್ಲಿ ಜಮೈಕಾ ಪರವಾಗಿ ಆಡಿದ್ದರು. ಸೋಬರ್ಸ್ ಮತ್ತು ವೆಸ್ ಹಾಲ್ ಅವರು ಇದ್ದ ಬಾರ್ಬಡೊಸ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ತಮ್ಮ ತವರಿನಲ್ಲಿ ಅವರು ಆಡಿದ ಏಕೈಕ ಪಂದ್ಯ ಅದಾಗಿದೆ. 1959ರಲ್ಲಿ ಅವರು ಇಂಗ್ಲೆಂಡ್‌ಗೆ ವಲಸೆ ಹೋದರು. ಸೆಂಟ್ರಲ್‌ ಲ್ಯಾಂಕಶೈರ್‌ ಲೀಗ್‌ನಲ್ಲಿ ಕ್ರಾಂಪ್ಟನ್ ಪರವಾಗಿ ವೃತ್ತಿಪರ ಆಟಗಾರರಾದರು.

ADVERTISEMENT

ಇದಾಗಿ ಮೂರು ವರ್ಷಗಳ ನಂತರ ಅವರು ಇಂಗ್ಲೆಂಡ್‌ನಲ್ಲಿಯೇ ನೆಲೆಸಲು ನಿರ್ಧರಿಸಿದರು. ಗೆಳತಿ ಎನಿಡ್ ಮತ್ತು ಮಗನೊಂದಿಗೆ ಅಲ್ಲಿಯೇ ನೆಲೆಸಿದರು.

ರೈಟ್ ಅವರು ವಿಂಡೀಸ್‌ನ ರಿಚರ್ಡ್ಸ್‌ ಮತ್ತು ಜೋಯಲ್ ಗಾರ್ನರ್ ಅವರು 1970–80ರಲ್ಲಿ ಕಣದಲ್ಲಿದ್ದಾಗ ರೈಟ್ ಆಡಿದ್ದರು. ರೈಟ್ ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಏಳು ಸಾವಿರ ವಿಕೆಟ್ ಗಳಿಸಿದ್ದಾರೆ.

‘ಒಳ್ಳೆಯ ಆಟ ಆಡುತ್ತಿರುವಿರಿ’ ಎಂದು ಈ ಹಿಂದೆ ವಿಸ್ಡನ್ ನಿಯಕಾಲಿಕೆಯು ರೈಟ್ ಅವರ ದೈಹಿಕ ಕ್ಷಮತೆಯನ್ನು ಕೊಂಡಾಡಿತ್ತು.

ತಮ್ಮ ನಿವೃತ್ತಿ ಮತ್ತು ಫಿಟ್‌ನೆಸ್ ಕುರಿತು ’ಡೇಲಿ ಮಿರರ್’ ಪತ್ರಿಕೆಗೆ ಪ್ರತಿಕ್ರಿಯಿಸಿರುವ ರೈಟ್, ‘ಅದು ಗುಟ್ಟು ನಿಮಗೆ ಹೇಳಲ್ಲ. ಆಹಾರ ಸೇವನೆ ಬಗ್ಗೆ ಹೇಳುವುದಾದರೆ ನನಗೆ ಇಷ್ಟವಾಗುವ ಎಲ್ಲವನ್ನೂ ತಿನ್ನುತ್ತೇನೆ. ಆದರೆ ಹೆಚ್ಚು ಮದ್ಯಪಾನ ಮಾಡುವುದಿಲ್ಲ. ಯಾವಾಗಲಾದರೊಮ್ಮೆ ಸ್ವಲ್ಪ ಬಿಯರ್ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ.

‘ಸದಾ ಚಟುವಟಿಕೆಯಿಂದ ಇರುತ್ತೇನೆ. ಆದರೆ, ಈ ವಯಸ್ಸಿನಲ್ಲಿ ಹೆಚ್ಚು ವ್ಯಾಯಾಮಗಳನ್ನು ಮಾಡುವುದಿಲ್ಲ. ಟಿವಿ ನೋಡುತ್ತ ಸುಮ್ಮನೆ ಕುಳಿಕೊಳ್ಳುವುದು ನನಗಾಗದು. ಅದರ ಬದಲಿಗೆ ವಾಯುವಿಹಾರಕ್ಕೆ ಹೋಗುತ್ತೇನೆ ಅಥವಾ ತೋಟದಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

ಮುಂದಿನ ತಿಂಗಳು ಏಳರಂದು ರೈಟ್ ಅವರು ಓಲ್ಡ್‌ಹ್ಯಾಮ್‌ನಲ್ಲಿ ನಡೆಯಲಿರುವ ಪೆನ್ನೈನ್ ಲೀಗ್‌ ಸೈಡ್ ಸ್ಪ್ರಿಂಗ್‌ಹೆಡ್‌ನಲ್ಲಿ ವಿದಾಯ ಘೋಷಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.