ADVERTISEMENT

ವೆಸ್ಟ್ ಇಂಡೀಸ್ ಬೌಲರ್‌ಗಳ ಅಬ್ಬರ: ತತ್ತರಿಸಿದ ಪಾಕ್‌

​ಪ್ರಜಾವಾಣಿ ವಾರ್ತೆ
Published 31 ಮೇ 2019, 11:09 IST
Last Updated 31 ಮೇ 2019, 11:09 IST
   

ನಾಟಿಂಗಂ: ಈ ಸಲದ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಾಣುವ ಕನಸಿನೊಂದಿಗೆ ಕಣಕ್ಕಿಳಿದಿರುವ ಪಾಕಿಸ್ತಾನ ತಂಡವು ಆರಂಭದಲ್ಲೇ ಮುಗ್ಗರಿಸಿದೆ.

ಟ್ರೆಂಟ್‌ ಬಿಜ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ಸರ್ಫರಾಜ್‌ ಅಹಮದ್‌ ಬಳಗವು ಪಾನೀಯ ವಿರಾಮದ ವೇಳೆಗೆ 15 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 72 ರನ್‌ ಗಳಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಪಾಕ್‌ ತಂಡಕ್ಕೆ ಮೂರನೇ ಓವರ್‌ನಲ್ಲಿ ಶೆಲ್ಡನ್‌ ಕಾಟ್ರೆಲ್‌ ಮೊದಲ ಪೆಟ್ಟು ನೀಡಿದರು. ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ಇಮಾಮ್‌ ಉಲ್‌ ಹಕ್‌ ಅವರನ್ನು ಔಟ್‌ ಮಾಡಿದರು. 11 ಎಸೆತಗಳನ್ನು ಆಡಿದ ಇಮಾಮ್‌ ಕೇವಲ ಎರಡು ರನ್‌ ಗಳಿಸಿ ವಿಕೆಟ್‌ ಕೀಪರ್‌ ಶಾಯ್‌ ಹೋಪ್‌ಗೆ ಕ್ಯಾಚ್‌ ನೀಡಿದರು.

ADVERTISEMENT

ಆರನೇ ಓವರ್‌ನಲ್ಲಿ ಪಾಕಿಸ್ತಾನವು ಫಖಾರ್‌ ಜಮಾನ್‌ ವಿಕೆಟ್‌ ಕಳೆದುಕೊಂಡಿತು. 16 ಎಸೆತಗಳಲ್ಲಿ 22ರನ್‌ ಗಳಿಸಿದ್ದ ಜಮಾನ್‌ ಅವರನ್ನು ಆ್ಯಂಡ್ರೆ ರಸೆಲ್‌ ಕ್ಲೀನ್‌ ಬೌಲ್ಡ್‌ ಮಾಡಿದರು.

ಇದರ ಬೆನ್ನಲ್ಲೇ ಬಾಬರ್‌ ಅಜಂ (22; 33ಎ, 2ಬೌಂ) ಮತ್ತು ಹ್ಯಾರಿಸ್‌ ಸೋಹೆಲ್‌ (8) ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಆಗ ಸರ್ಫರಾಜ್‌ ಬಳಗದ ಖಾತೆಯಲ್ಲಿದ್ದದ್ದು 62ರನ್‌ ಮಾತ್ರ.

ಈ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ್ದ ರಸೆಲ್‌, ಎರಡು ವಿಕೆಟ್‌ ಉರುಳಿಸಿ ಗಮನ ಸೆಳೆದರು.

ಸ್ಕೋರ್‌ ವಿವರ:https://bit.ly/2QAa3M4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.