ಡಾರೆನ್ ಸ್ಯಾಮಿ
ನವದೆಹಲಿ: ಮಾಜಿ ನಾಯಕ ಹಾಗೂ ಹಾಲಿ ಕೋಚ್ ಡಾರೆನ್ ಸ್ಯಾಮಿ ಅವರು, ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಅಧಃಪತನವನ್ನು, ವ್ಯವಸ್ಥೆಯೊಳಗೆ ದೀರ್ಘಕಾಲದಿಂದ ಬೆಳವಣಿಗೆಗೊಂಡ ಕ್ಯಾನ್ಸರ್‌ಗೆ ಹೋಲಿಸಿದ್ದಾರೆ.
ಚುಟುಕು ಮಾದರಿಗೆ ಈಗಿನ ತಲೆಮಾರಿನ ಆಟಗಾರರಿಗೆ ಸಾಕಷ್ಟು ಮಂದಿ ಆದರ್ಶಪ್ರಾಯರು ಸಿಗುತ್ತಾರೆ. ತಮಗೆ ಲಭ್ಯವಿರುವ ಸಂಪನ್ಮೂಲದಿಂದ ಅವರು ಆಡುತ್ತಾರೆ. ಆದರ ಟೆಸ್ಟ್ ಮಾದರಿಗೆ ಬಂದಾಗ ವೆಸ್ಟ್ ಇಂಡೀಸ್ ಕ್ರಿಕೆಟನ್ನು ಕಾಡುತ್ತಿರುವುದೇನು ಎಂಬ ಪ್ರಶ್ನೆಗೆ ಅವರು ಕಟು ಮಾತುಗಳಲ್ಲಿ ಉತ್ತರಿಸಿದರು.
ಕೊನೆಯ ಬಾರಿ 1983–84ರಲ್ಲಿ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು. ‘ನಾವು ಇಲ್ಲಿ ಕೊನೆಯ ಸಲ ಸರಣಿ ಗೆದ್ದಾಗ, ನಾನಿನ್ನೂ ತಾಯಿಯ ಉದರದಲ್ಲಿದ್ದೆ’ ಎಂದು ಮುಗುಳ್ನಗುತ್ತಲೇ ಆರಂಭಿಸಿದ ಅವರು ತಕ್ಷಣ ಗಂಭೀರರಾದರು. ‘ನನಗೆ ಗೊತ್ತು ಎಲ್ಲರ ಕಣ್ಣುಗಳು ಈಗ ನನ್ನತ್ತ ನೆಟ್ಟಿವೆ. ನಾವು ಟೀಕೆಗಳಿಗೆ ಮುಕ್ತರಾಗಿದ್ದೇವೆ. ಆದರೆ ಈ ಸಮಸ್ಯೆಯ ಬೇರುಗಳು ಒಂದೆರಡು ವರ್ಷ ಹಿಂದೆ ಬಿಟ್ಟಿದ್ದಲ್ಲ. ಈ ಅಧಃಪತನ ಎಂಬ ಕ್ಯಾನ್ಸರ್ ಅದಕ್ಕೆ ಮೊದಲೇ ಕಾಣಿಸಿಕೊಂಡಿತ್ತು’ ಎಂದು ಹೇಳಿದರು.
ಭಾರತ ವಿರುದ್ಧ ಅಹಮದಾಬಾದಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ 140 ರನ್‌ಗಳಿಂದ ಸೋತಿತ್ತು. ಆದರೆ ತಂಡ ಹೋರಾಟ ನೀಡದೇ ಸೋತ ರೀತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು. ಆಟಗಾರರಿಗೆ ಕ್ರಿಕೆಟ್ ಪ್ರೇಮ ಹೃದಯದೊಳಗಿಂದ ಬರಬೇಕು ಎಂದು ಕೆರೀಬಿಯನ್ ಕ್ರಿಕೆಟ್ ದಿಗ್ಗಜ ಬ್ರಯಾನ್ ಲಾರಾ ಅವರು ವ್ಯಥೆಯಿಂದ ಹೇಳಿದ್ದರು.
‘ನಮ್ಮ ಬಳಿ ಏನು ಲಭ್ಯವಿದೆ. ಆಡುವುದಕ್ಕೆ ಯಾರಿಗೆ ಮನಸ್ಸಿದೆ.. ಹೀಗೆ ಸೀಮಿತ ಸಂಪನ್ಮೂಲಗಳಲ್ಲೇ ನಾವು ಕೆಲಸ ಮಾಡಲು ಸಾಧ್ಯ. ಮೊದಲ ಮೂರು ಕ್ರಮಾಂಕದಲ್ಲಿರುವ ತಂಡಗಳಿಗೂ, ನಂತರದ ನಾಲ್ಕು ಕ್ರಮಾಂಕದ ತಂಡಗಳಿಗೂ ಸಾಕಷ್ಟು ಅಂತರವಿದೆ. ಸೌಲಭ್ಯಗಳು, ಪ್ರತಿಭಾ ಸಂಪನ್ಮೂಲ, ತಾಂತ್ರಿಕ ಪರಿಣತಿ ನಮ್ಮಲ್ಲಿಲ್ಲ ಎಂಬುದು ರಹಸ್ಯವೇನಲ್ಲ ಎಂದು ನಾನು ಆಟಗಾರರಿಗೆ ಹೇಳುತ್ತಿರುತ್ತೇನೆ. ನಾವು ಹಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟನ್ನೂ ಎದುರಿಸುತ್ತಿದ್ದೇವೆ. ಪ್ರಾಯೋಜಕರ ತಲಾಷೆಯಲ್ಲಿದ್ದೇವೆ. ಲಾರಾ, ಶಿವ್ (ಚಂದ್ರಪಾಲ್) ಸಹ ಈ ಬಗ್ಗೆ ಪ್ರಯತ್ನದಲ್ಲಿದ್ದಾರೆ’ ಎಂದು ಸ್ಯಾಮಿ ಹೇಳಿದರು.
‘ವೆಸ್ಟ್ ಇಂಡೀಸ್ ತಂಡವು ಟೆಸ್ಟ್ ಕ್ರಿಕೆಟ್ ಉತ್ತುಂಗದಲ್ಲಿದ್ದಾಗ, ಅದನ್ನು ಈಗ ಭಾರತದ ಮಂಡಳಿ ಮಾಡಿದ ರೀತಿಯಲ್ಲಿ ವಾಣಿಜ್ಯದ ದೃಷ್ಟಿಯಿಂದ ಲಾಭ ಮಾಡಿಕೊಳ್ಳಲು ಹೋಗಲಿಲ್ಲ. ಈ ಬಗ್ಗೆ ವಿಷಾದವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.