ಬರ್ನಾರ್ಡ್ ಜೂಲಿಯನ್
ಪ್ಯಾರಿಸ್: ವಿಶ್ವಕಪ್ ಗೆಲ್ಲುವ ಮೂಲಕ ಕ್ರಿಕೆಟ್ ಜೀವನದಲ್ಲಿ ವೈಭವದ ದಿನಗಳನ್ನು ಕಂಡ ಮತ್ತು ವರ್ಣಭೇದ ನೀತಿ ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ರೆಬೆಲ್ ಪ್ರವಾಸ ಕೈಗೊಂಡು ಅವನತಿಯನ್ನು ಕಂಡ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಬರ್ನಾರ್ಡ್ ಜೂಲಿಯನ್ (75) ಅವರು ನಿಧನರಾದರು.
ಗ್ಯಾರಿ ಸೋಬರ್ಸ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಅವರು ಆ ಮಟ್ಟಕ್ಕೇರುವ ಒತ್ತಡವನ್ನೂ ಎದುರಿಸಿದ್ದರು. 1973ರಲ್ಲಿ ಸೋಬರ್ಸ್ ಜೊತೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯವನ್ನೂ ಆಡಿದ್ದ ಅವರು ಅದನ್ನು ಸ್ಮರಣೀಯಗೊಳಿಸಿದ್ದರು.
ಏಳನೇ ವಿಕೆಟ್‌ಗೆ ಇವರಿಬ್ಬರು 155 ರನ್ ಸೇರಿಸಿದ್ದು ಈಗಲೂ ದಾಖಲೆಯಾಗಿ ಉಳಿದಿದೆ. ಆ ಪಂದ್ಯದಲ್ಲಿ ಸೋಬರ್ಸ್ ಔಟಾಗದೇ 150 ರನ್ ಗಳಿಸಿದ್ದರು. ಇದು ಅವರ 26 ಶತಕಗಳ ಕೊನೆಯದಾಗಿತ್ತು. ಜೂಲಿಯನ್ ಆ ಪಂದ್ಯದಲ್ಲಿ 121 ರನ್ ಹೊಡೆದಿದ್ದರು. ಆದರೆ ಅವರು ನಂತರದ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಏಳಿಗೆ ಕಾಣಲಿಲ್ಲ.
24 ಟೆಸ್ಟ್ ಪಂದ್ಯಗಳಲ್ಲಿ 30.92 ಸರಾಸರಿಯಲ್ಲಿ 866 ರನ್ ಗಳಿಸಿದ್ದ ವರು, 37.36 ಸರಾಸರಿಯಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದ್ದರು. ಏಕದಿನ ಪಂದ್ಯಗಳಲ್ಲಿ ಅವರು 18 ವಿಕೆಟ್‌ಗಳನ್ನು (25.72 ಸರಾಸರಿ) ಪಡೆದಿದ್ದರು. ಇಂಗ್ಲೆಂಡ್ ಕೌಂಟಿಯಲ್ಲಿ ಕೆಂಟ್ ತಂಡಕ್ಕೆ ಆಡಿದ್ದರು.
ಆದರೆ 1975ರಲ್ಲಿ ವೆಸ್ಟ್ ಇಂಡೀಸ್ ವಿಶ್ವ ಚಾಂಪಿಯನ್ ಆಗುವಲ್ಲಿ ಅವರೂ ಪ್ರಮುಖ ಪಾತ್ರ ವಹಿಸಿದ್ದರು.
ಅವರ ಕೌಶಲ ಮತ್ತು ಶಾಂತಚಿತ್ತತೆ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಕೆರಿ ಪ್ಯಾಕರ್ಸ್ ವಿಶ್ವ ಸರಣಿ ಆಡಲೂ ಸಹಿಹಾಕಿದ್ದರು. ಆದರೆ 1982–83ರಲ್ಲಿ ಮತ್ತು 1983–84ರಲ್ಲಿ ಅವರು ವೆಸ್ಟ್ ಇಂಡೀಸ್ ಬಂಡುಕೋರ ತಂಡದ ಜೊತೆ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದು ಅವರ ಕ್ರಿಕೆಟ್ ಜೀವನಕ್ಕೆ ಮುಳುವಾಯಿತು. ₹71 ಲಕ್ಷದ ಆಮಿಷ ತಂಡಕ್ಕೆ ನೀಡಲಾಗಿತ್ತು. ವರ್ಣಭೇದ ನೀತಿ ಅನುಸರಿಸುತ್ತಿದ್ದ ದಕ್ಷಿಣ ಆಫ್ರಿಕಾವನ್ನು ಆಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗಿಡಲಾಗಿತ್ತು.
ಜೂಲಿಯನ್ ಜೊತೆ ಆಗ ಪ್ರಸಿದ್ಧಿ ಪಡೆದಿದ್ದ ವೆಸ್ಟ್ ಇಂಡೀಸ್‌ನ ಇನ್ನೂ ಕೆಲವರು– ಅಲ್ವಿನ್ ಕಾಳೀಚರಣ್, ಕಾಲಿನ್ ಕ್ರಾಫ್ಟ್, ಲಾರೆನ್ಸ್ ರೋವ್ ಅವರೂ ಆ ತಂಡದಲ್ಲಿದ್ದರು. ಆದರೆ ಇವರಲ್ಲಿ ಬಹುತೇಕ ಮಂದಿ ಕ್ರಿಕೆಟ್ ಜೀವನದ ನಿವೃತ್ತಿ ಅಂಚಿನಲ್ಲಿದ್ದರು.
‘ಈಗ ಅವರಲ್ಲಿ ಕೆಲವರಿಗೆ ಕೆಲಸವಿಲ್ಲ ಎಂಬುದು ಗೊತ್ತಾಗಿದೆ. ಹಣದ ಆಮಿಷಕ್ಕೆ ಅವರೆಲ್ಲ ಒಳಗಾದರು. ಆದರೆ ಜೀವನದಲ್ಲಿ ಹಣ ಗಳಿಕೆಯೇ ಅಂತಿಮವಲ್ಲ’ ಎಂದು 1975ರಲ್ಲಿ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.