ADVERTISEMENT

‘ವಿಂಡೀಸ್‌ಗೆ ಕಪ್‌ ಗೆಲ್ಲಲು ಉತ್ತಮ ಅವಕಾಶ’

ರಾಯಿಟರ್ಸ್
Published 13 ಜೂನ್ 2019, 20:01 IST
Last Updated 13 ಜೂನ್ 2019, 20:01 IST
ಜೋಯೆಲ್‌ ಗಾರ್ನರ್‌
ಜೋಯೆಲ್‌ ಗಾರ್ನರ್‌   

ನಾಟಿಂಗಂ: ಈಗಿನ ವೆಸ್ಟ್‌ ಇಂಡೀಸ್‌ ತಂಡ ವಿಶ್ವ ಕಪ್‌ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ ಎಂದು ಆ ತಂಡದ ಮಾಜಿ ವೇಗದ ಬೌಲರ್‌ ಜೋಯೆಲ್‌ ಗಾರ್ನರ್‌ ಅಭಿಪ್ರಾಯಪಟ್ಟರು.

‘ಬಿಗ್‌ ಬರ್ಡ್‌’ ಎಂದೇ ಖ್ಯಾತರಾಗಿದ್ದ ಗಾರ್ನರ್‌, 40 ವರ್ಷ ಹಿಂದೆ ವೆಸ್ಟ್‌ ಇಂಡೀಸ್ ಟ್ರೋಫಿ ಗೆದ್ದಾಗ ಫೈನಲ್‌ನಲ್ಲಿ ಉತ್ತಮ ಬೌಲಿಂಗ್‌ ಸಾಧನೆಯೊಡನೆ ಗಮನ ಸೆಳೆದಿದ್ದರು.ಎತ್ತರದ ನಿಲುವಿನಿಂದಾಗಿಗಮನ ಸೆಳೆಯುತ್ತಿದ್ದ ಗಾರ್ನರ್‌ 1979ರ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 38 ರನ್ನಿಗೆ 5 ವಿಕೆಟ್‌ ಪಡೆದಿದ್ದು, ಇದುವರೆಗೆ ಫೈನಲ್‌ ಪಂದ್ಯದ ಉತ್ತಮ ಬೌಲಿಂಗ್‌ ಪ್ರದರ್ಶನ ಎನಿಸಿದೆ.

ಎರಡು ಬಾರಿ ಚಾಂಪಿಯನ್‌ (1975, 79) ವೆಸ್ಟ್‌ ಇಂಡೀಸ್‌, ಶುಕ್ರವಾರ ಸೌತಾಂಪ್ಟನ್‌ನಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್‌ ಪ್ರಶಸ್ತಿಗೆ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ADVERTISEMENT

ಜೇಸನ್‌ ಹೋಲ್ಡರ್‌ ನೇತೃತ್ವದ ವೆಸ್ಟ್‌ ಇಂಡೀಸ್‌, ಹಾಲಿ ವಿಶ್ವಕಪ್‌ನಲ್ಲಿ ಇದುವರೆಗೆ ಮಿಶ್ರಫಲ ಕಂಡಿದೆ. ಪಾಕಿಸ್ತಾನ ತಂಡವನ್ನು ಮೊದಲ ಪಂದ್ಯದಲ್ಲಿ ಬಗ್ಗುಬಡಿದರೆ, ಆಸ್ಟ್ರೇಲಿಯಾ ತಂಡಕ್ಕೆ ಸೋಲುವ ಮೊದಲು ಉತ್ತಮ ಹೋರಾಟ ನೀಡಿತ್ತು. ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗಿತ್ತು.

‘ನಮ್ಮಿಂದ ನಿರೀಕ್ಷಿಸಲಾಗಿರುವ ಸ್ಥಿರ ರೀತಿಯ ಪ್ರದರ್ಶನ ನೀಡಿದರೆ, ನಾವು ಫೈನಲ್‌ ತಲುಪಲಿದ್ದೇವೆ. ನಂತರ ನಮ್ಮ ಗೆಲುವಿಗೆ ತಡೆಯೊಡ್ಡುವುದು ಕಷ್ಟ. ಆದರೆ ಈ ಹಂತಕ್ಕೆ ತಲುಪಲು ಒಂದೆರಡು ಆಟಗಾರರನ್ನು ಮಾತ್ರ ಅವಲಂಬಿಸಬಾರದು’ ಎಂದು ಅವರು ವೆಬ್‌ ಸೈಟ್‌ ಒಂದಕ್ಕೆ ತಿಳಿಸಿದರು.

‘ಜೇಸನ್‌ ಹೋಲ್ಡರ್‌ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರು ಉತ್ತಮ ನಾಯಕನಾಗಿ ರೂಪುಗೊಂಡಿದ್ದಾರೆ. ಹಲವು ವರ್ಷಗಳಿಂದ ನಾವು ಕಪ್‌ ಗೆದ್ದಿಲ್ಲ. ಆದ್ದರಿಂದ ಈ ಬಾರಿ ಗೆದ್ದರೆ ಸಂಭ್ರಮ ಹೆಚ್ಚುತ್ತದೆ’ ಎಂದು ಗಾರ್ನರ್‌ ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.