
ಕೋಲ್ಕತ್ತ: ಶಿಮ್ರೋನ್ ಹೆಟ್ಮೇಯರ್ ಅವರ ಆಕ್ರಮಣಕಾರಿ ಅರ್ಧಶತಕ ಮತ್ತು ವೇಗದ ಬೌಲರ್ ರೊಮಾರಿಯೊ ಶೆಫರ್ಡ್ (20ಕ್ಕೆ5) ಅವರ ಹ್ಯಾಟ್ರಿಕ್ ಸಹಿತ ಅಮೋಘ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ‘ಸಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಸ್ಕಾಟ್ಲೆಂಡ್ ವಿರುದ್ಧ 35 ರನ್‌ಗಳ ಅರ್ಹ ಗೆಲುವು ಪಡೆಯಿತು.
ದಶಕದ ಹಿಂದೆ ಇದೇ ಈಡನ್‌ಗಾರ್ಡನ್‌ನಲ್ಲಿ ಕೊನೆಯ ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಹೆಟ್ಮೇಯರ್ (64, 36ಎ, 4x2, 6x6) ಅವರ ಬ್ಯಾಟಿಂಗ್ ಬಲದಿಂದ 5 ವಿಕೆಟ್‌ಗೆ 182 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಉತ್ತರವಾಗಿ, ಸ್ಕಾಟ್ಲೆಂಡ್ ತಂಡ 18.5 ಓವರುಗಳಲ್ಲಿ 147 ರನ್‌ಗಳಿಗೆ ಹೋರಾಟ ಮುಗಿಸಿತು. ಗಯಾನಾದ ವೇಗದ ಬೌಲರ್ ಶೆಫರ್ಡ್ ಅವರು ಸ್ಕಾಟ್ಲೆಂಡ್ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಐದು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು ವೆಸ್ಟ್ ಇಂಡೀಸ್ ಗೆಲುವನ್ನು ಖಚಿತಪಡಿಸಿದರು.
ಇದು ಶೆಫರ್ಡ್‌ಗೆ ನಾಲ್ಕು ತಿಂಗಳ ಅವಧಿಯಲ್ಲಿ ಅವರಿಗೆ ಎರಡನೇ ಟಿ20 ಹ್ಯಾಟ್ರಿಕ್. ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೂ ಹ್ಯಾಟ್ರಿಕ್ ಗಳಿಸಿದ್ದರು.
ಒಂದು ಹಂತದಲ್ಲಿ 3 ವಿಕೆಟ್‌ಗೆ 13 ಓವರುಗಳಲ್ಲಿ 3 ವಿಕೆಟ್‌ಗೆ 115 ರನ್ ಗಳಿಸಿತ್ತು. ನಾಯಕ ರಿಚಿ ಬೇರಿಂಗಟನ್ 24 ಎಸೆತಗಳಲ್ಲಿ 42 ರನ್ (4x3, 6x2) ಹೊಡೆದರೆ, ನ್ಯೂಜಿಲೆಂಡ್ ಸಂಜಾತ ಟಾಮ್ ಬ್ರೂಸ್ 28 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಆದರೆ ಬೌಂಡರಿಗಳು ಕಡಿಮೆಯಾಗಿ ಸ್ಕಾಟ್ಲೆಂಡ್ ವೇಗವಾಗಿ ರನ್ ಗಳಿಸುವ ಒತ್ತಡಕ್ಕೆ ಒಳಗಾಯಿತು. ಬೇರಿಂಗ್ಟನ್ ವಿಕೆಟ್ ಪಡೆದ ಜೇಸನ್ ಹೋಲ್ಡರ್ 78 ರನ್‌ಗಳ ಜೊತೆಯಾಟ ಮುರಿದರು. ಹೋಲ್ಡರ್‌ಗೆ ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನೂರನೇ ವಿಕೆಟ್.
ನಂತರ ಶೆಫರ್ಡ್ ಬೌಲಿಂಗ್‌ನಲ್ಲಿ ನಾಟಕೀಯವಾಗಿ ಕುಸಿಯಿತು. ತಮ್ಮ ಮೂರನೇ (ಇನಿಂಗ್ಸ್‌ನ 17ನೇ) ಓವರಿನ 2,3 ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ಮ್ಯಾಥ್ಯೂ ಕ್ರಾಸ್, ಮೈಕೆಲ್ ಲೀಸ್ಕ್ ಮತ್ತು ಒಲಿವರ್ ಡೇವಿಡ್‌ಸನ್ ಅವರ ವಿಕೆಟ್‌ಗಳನ್ನು ಪಡೆದರು. ಕೊನೆಯ ಎಸೆತದಲ್ಲಿ ಸಫ್ಯಾನ್ ಶರೀಫ್ ಅವರ ವಿಕೆಟ್ ಸಹ ಪಡೆದು ಮೊದಲ ಬಾರಿ ಚುಟುಕು ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪೂರೈಸಿದರು.
ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದ ಕಾರಣ ಎರಡು ವಾರ ಮೊದಲಷ್ಟೇ ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ ಅವಕಾಶ ಪಡೆದಿತ್ತು. ಬೆಂಗಳೂರಿನಲ್ಲಿ ಈ ತಂಡ ವಾರ್ಮಪ್ ಪಂದ್ಯಗಳನ್ನು ಆಡಿತ್ತು.
ಇದಕ್ಕೆ ಮೊದಲು, ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭ ಆಟಗಾರ ಬ್ರಾಂಡನ್ ಕಿಂಗ್ (35, 30ಎ), ರೋವ್ಮನ್ ಪಾವೆಲ್ (24, 14ಎ) ಮತ್ತು ಶರ್ಫೇನ್ ರುದರ್‌ಫೋರ್ಡ್ (26, 13ಎ) ಅವರೂ ಉಪಯುಕ್ತ ಕೊಡುಗೆ ನೀಡಿದ್ದರು. ಆದರೆ ಹೆಟ್ಮೇಯರ್ ಮಿಂಚಿನ ಆಟ ಮೊತ್ತವನ್ನು ಬೆಳೆಸಿತು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 5 ವಿಕೆಟ್‌ಗೆ 182 (ಬ್ರಾಂಡನ್ ಕಿಂಗ್ 35, ಶಿಮ್ರೋನ್ ಹೆಟ್ಮೇಯರ್ 64, ರೋವ್ಮನ್ ಪಾವೆಲ್ 24, ರುದರ್‌ಫೋರ್ಟ್ 26; ಬ್ರಾಡ್ ಕರಿ 23ಕ್ಕೆ2); ಸ್ಕಾಟ್ಲೆಂಡ್: 18.5 ಓವರುಗಳಲ್ಲಿ 47 (ರಿಚಿ ಬೆರಿಂಗ್ಟನ್ 42, ಟಾಮ್ ಬ್ರೂಸ್ 35; ಜೇಸನ್ ಹೋಲ್ಡರ್ 30ಕ್ಕೆ3, ರೊಮಾರಿಯೊ ಶೆಫರ್ಡ್ 20ಕ್ಕೆ5). ಪಂದ್ಯದ ಆಟಗಾರ: ಶಿಮ್ರೋನ್ ಹೆಟ್ಮೇಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.